ಭಾರತದ ಯೋಗ ಈಗ ಜಗತ್ತಿನ ಆಸ್ತಿ

| Published : Jun 22 2024, 12:47 AM IST

ಸಾರಾಂಶ

ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಔಷಧಿ ತರಹ ಕೆಲಸ ಮಾಡುತ್ತದೆ. ಯೋಗವನ್ನು ಮಕ್ಕಳಲ್ಲಿ ವೃತ್ತಿಪರವಾಗಿ ಬೆಳೆಸಬೇಕು.

ಧಾರವಾಡ:

ಇತ್ತೀಚಿನ ವರ್ಷಗಳಲ್ಲಿ ಯೋಗದ ಮಹತ್ವ ಅರಿತವರು ನಿತ್ಯ ಯೋಗಾಭ್ಯಾಸ ನಡೆಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಯೋಗ ತರಬೇತಿ, ಅಭ್ಯಾಸ ಹೆಚ್ಚುತ್ತಿದ್ದು, ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಧಾರವಾಡದಲ್ಲಿ ಸಾವಿರಾರು ಜನರು ಯೋಗಾಭ್ಯಾಸ ಮಾಡಿದರು.

ಇಲ್ಲಿಯ ಆರ್.ಎನ್. ಶೆಟ್ಟಿ ಒಳಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಔಷಧಿ ತರಹ ಕೆಲಸ ಮಾಡುತ್ತದೆ. ಯೋಗವನ್ನು ಮಕ್ಕಳಲ್ಲಿ ವೃತ್ತಿಪರವಾಗಿ ಬೆಳೆಸಬೇಕು. ಯೋಗದ ಮಹತ್ವ ಇಂದು ವಿಶ್ವಕ್ಕೆ ಪಸರಿಸಿದ್ದು, ಭಾರತ ಇಂದು ಯೋಗದಲ್ಲಿ ವಿಶ್ವ ಗುರು ಆಗಿರುವುದು ನಮ್ಮ ಹೆಮ್ಮೆ ಎಂದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ನಾರಾಯಣ ಬರಮನಿ, ಡಿಎಚ್‌ಒ ಡಾ. ಶಶಿ ಪಾಟೀಲ, ಎಸಿ ಶಾಲಂ ಹುಸೇನ್, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿದರು.

ಡಿಮ್ಹಾನ್ಸ್:

ನಗರದ ಡಿಮ್ಹಾನ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಜಂಟಿಯಾಗಿ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನ ಆಚರಿಸಿದವು. ಪತಂಜಲಿ ಮಹರ್ಷಿ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಚಾಲನೆ ನೀಡಿದರು. ಡಾ. ಮಂಜುನಾಥ ಭಜಂತ್ರಿ, ಮಾನಸಿಕ ಕಾಯಿಲೆಗಳು, ಮಕ್ಕಳಲ್ಲಿ ಬರುವ ಸ್ವಲೀನತೆ, ಅಡಿಕ್ಷನ್‌ಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಯೋಗ ಹಾಗೂ ಸಂಗೀತ ಚಿಕಿತ್ಸೆಯನ್ನು ಪೂರಕ ಎಂದರು. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮಾನಸಿಕ ಕಾಯಿಲೆ ಹೊಂದಿರುವ ರೋಗಿಗಳಿಗೆ ಡಿಮ್ಹಾನ್ಸ್ ನ ಯೋಗ ಶಿಕ್ಷಕಿಯಿಂದ ಯೋಗಾಭ್ಯಾಸ ಹೇಳಿಕೊಡಲಾಗುತ್ತಿದೆ ಎಂದರು.

ಚರಂತಿಮಠ ಪಬ್ಲಿಕ್ ಶಾಲೆ:

ನಿತ್ಯದ ಯೋಗ ಸಾಧನೆಯು ಮಾನವನ ಚರಣಗಳ ತುದಿ ಬೆರಳಿನಿಂದ ನಡು ನೆತ್ತಿಯ ವರೆಗೆ ದೇಹದೆಲ್ಲೆಡೆ ಚೈತನ್ಯ ಶಕ್ತಿ ಸಂವರ್ಧನೆಗೆ ಸಹಕಾರಿಯಾಗಿದೆ ಎಂದು ಹಿರಿಯ ಯೋಗ ಪಟು ಎಂ. ಜಿ. ತಿಮ್ಮಾಪೂರ ಹೇಳಿದರು. ಇಲ್ಲಿಯ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಯೋಗ ದಿನ ಅವರು ಉದ್ಘಾಟಿಸಿದರು. ಶಾಲೆಯ ಸಂಸ್ಥಾಪಕ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಅಶ್ವಿನಿ ಚಿಕ್ಕಬಳ್ಳಾಪೂರ, ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಇದ್ದರು.

ಜೆಎಸ್ಸೆಸ್‌:

ಜೆಎಸ್ಸೆಸ್‌ ಸಂಸ್ಥೆಯಲ್ಲಿ ನಡೆದ ದಿನಾಚರಣೆಯಲ್ಲಿ ಯೋಗ ಪಟು ಮಂಜುನಾಥ ಹೂಗಾರ ಸ್ವತಃ ಯೋಗ ತರಬೇತಿ ನೀಡಿ ಯೋಗದ ಮಹತ್ವ ತಿಳಿಸಿದರು. ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ, ಡಾ. ಜಗದೀಶ ಬರಗಿ, ಆವಂತಿಕಾ ರೊಟ್ಟಿ, ಡಾ. ಎನ್.ಡಿ. ಕುಲಕರ್ಣಿ, ದೈಹಿಕ ಶಿಕ್ಷಕ ಜೆ.ಆರ್. ಕುಂದಗೋಳ, ಮಂಜುನಾಥ ಜಿ.ಪಿ., ಡಾ. ಶಿಲ್ಪಾ ದಾನಪ್ಪನವರ ಮತ್ತಿತರುರ ಇದ್ದರು.

ಗುಬ್ಬಚ್ಚಿಗೂಡು ಶಾಲೆ:

ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ಬಹು ದೊಡ್ಡ ಸಾಧನ ಯೋಗ. ಬರೀ ದೈಹಿಕ ಚಟುವಟಿಯೆಂದು ಭಾವಿಸದೇ ದೇಹ, ಮನಸು ಮತ್ತು ಉಸಿರು ಸಮೀಕರಿಸಿ ಮಾಡುವುದೇ ಯೋಗ ಎಂದು ಕರೆಯಿಸಿಕೊಳ್ಳುವುದು ಎಂದು ರಾಜೀವ ದೀಕ್ಷಿತ ಬಳಗದ ಮುಖ್ಯಸ್ಥ ಎಂ.ಡಿ. ಪಾಟೀಲ ಗುಬ್ಬಚ್ಚಿಗೂಡು ಶಾಲೆಯ ಯೋಗ ದಿನದಲ್ಲಿ ಮಾತನಾಡಿದರು. ಹಿರಿಯ ಯೋಗ ಶಿಕ್ಷಕಿ ಸುಮಂಗಲಾ ಇಳಗಿ, ಪ್ರೊ. ಸುಬಾಸ ಮಾರಿಹಾಳ, ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಇದ್ದರು.

ಕೆಸಿಡಿ ಕಾಲೇಜು:

ಧಾರವಾಡದ ಕೇಂದ್ರ ಸಂವಹನ ಇಲಾಖೆ, ಭಾರತದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕರ್ನಾಟಕ ಕಲಾ ಕಾಲೇಜಿನ ಯೋಗ ಅಧ್ಯಯನ ವಿಭಾಗ, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ಘಟಕ ಜಂಟಿಯಾಗಿ ಕರ್ನಾಟಕ ಕಾಲೇಜು ಎದುರು ಯೋಗ ದಿನಾಚರಣೆ ಮಾಡಲಾಯಿತು. ಪ್ರಾಚಾರ್ಯ ಡಾ. ಡಿ. ಬಿ. ಕರಡೊಣಿ, ಡೀನ್‌ ಡಾ. ಮುಕುಂದ ಲಮಾಣಿ ನೇರವೆರಿಸಿದರು. ಕೇಂದ್ರ ಸಂವಹನ ಇಲಾಖೆಯ ಮುರಳೀಧರ ಕಾರಭಾರಿ ಇದ್ದರು.

ಕೆಲಗೇರಿ:

ಕೆಲಗೇರಿ ಕಾಯಕಲ್ಪ ಯೋಗ ಸಂಸ್ಥೆ ಕಲ್ಮೇಶ್ವರ ದೇವಸ್ಥಾನದ ಎದುರು ಆಯೋಜಿಸಿದ್ದ ಯೋಗ ಶಿಬಿರ ಹಾಗೂ ಯೋಗ ಜಾಗೃತಿ ಯಶಸ್ವಿಯಾಯಿತು. ಅರುಣಾ ನಂದಿಬೇವೂರ, ಲೇಖಕ ಗುರು ಹಿರೇಮಠ, ನ್ಯಾಯಾಧೀಶ ಜಿ.ವಿ. ರಾಮನಗೌಡರ ಸೇರಿದಂತೆ 35ಕ್ಕೂ ಹೆಚ್ಚು ಯೋಗಪಟುಗಳು ಇದ್ದರು.

ಯೋಗಮಯ ಕೇಂದ್ರ:

ಯೋಗಮಯ ಕೇಂದ್ರ, ಮಹಾತ್ಮ ಬಸವೇಶ್ವರ ಅಭಿವೃದ್ಧಿ ವೇದಿಕೆ ಜಂಟಿಯಾಗಿ ಎಂ.ಜಿ. ಹಿರೇಮಠ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸಾಮೂಹಿಕ ವಿಶ್ವ ಯೋಗ ದಿನಾಚರಣೆಯನ್ನು ಮಾಜಿ ಮೇಯರ್‌ ಈರೇಶ ಅಂಚಟಗೇರಿ ಉದ್ಘಾಟಿಸಿದರು. ಸಂತೋಷ ಪೂಜಾರಿ, ಯೋಗ ಗುರು ಲಕ್ಷ್ಮಣ ಬೋಡಕೆ, ವೈದ್ಯ ಡಾ ಕವಿತಾ ಮಂಕಣಿ, ಡಾ ಪಲ್ಲವಿ ದೇಶಪಾಂಡೆ ಇದ್ದರು.

ಮನಗುಂಡಿ:

ಯೋಗ ಒಂದು ಜೀವನಶೈಲಿ. ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿರುವುದರಿಂದ ದೈಹಿಕ, ಮಾನಸಿಕ ಅರೋಗ್ಯ ವೃದ್ಧಿ ಮಾಡಿಕೊಳ್ಳಲು ಸಾಧ್ಯ ಎಂದು ಹಿರಿಯ ಶಿಕ್ಷಕಿ ಭಾಗ್ಯಶ್ರೀ ಜೋಶಿ ಹೇಳಿದರು. ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ, ಪ್ರಮೋದ ವಾದಿರಾಜ, ಸಿ.ಸಿ. ಹಿರೇಮಠ, ಉಷಾ ಶಿವಣ್ಣನವರ, ಸತ್ಯನಾರಾಯಣ ಜೋಶಿ ಇದ್ದರು.

ಇದಲ್ಲದೇ, ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಧ್ಯೇಯೆಯೊಂದಿಗೆ ನಡೆಯಿತು. ಉಪ ಕುಲಪತಿ ಡಾ. ನಿರಂಜನ್ ಕುಮಾರ, ಎಸ್‌ಡಿಎಂ ಪ್ರಕೃತಿ ಮತ್ತು ಯೋಗ ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಅರಳಿಹಳ್ಳಿ ಅವರು ಯೋಗದ ಮಹತ್ವ ತಿಳಿಸಿದರು. ರಾಯಾಪುದಲ್ಲಿರುವ ಎಸ್‌ಜೆಎಂವಿ ಮಹಾಂತ ಕಾಲೇಜು, ಮುಮ್ಮಿಗಟ್ಟಿಯ ಪಾಲಾಕ್ಷ ಪೊದಾರ್ ಲರ್ನ್ ಸ್ಕೂಲ್, ಮಲ್ಲಸಜ್ಜನ ಇಂಗ್ಲಿಷ್‌ ಮಾಧ್ಯಮ ಶಾಲೆ, ಮಾಳಮಡ್ಡಿಯ ಕೆಇ ಬೋರ್ಡ್‌ ಸೆಂಟ್ರಲ್ ಶಾಲೆ, ಸಾಲಿಮಠ ಆಂಗ್ಲ ಮಾಧ್ಯ ಶಾಲೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸೇರಿದಂತೆ ವಿವಿಧೆಡೆ ಯೋಗ ದಿನ ಅರ್ಥಪೂರ್ಣವಾಗಿ ನಡೆಯಿತು.