ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂಸ್ಕೃತ, ಭಗವದ್ಗೀತೆ, ವೇದ, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳ ಅಧ್ಯಯನ ನಮ್ಮ ಸಾರ್ಥಕ ಬದುಕಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನದೊಂದಿಗೆ ಭದ್ರಬುನಾದಿಯನ್ನು ನೀಡುತ್ತದೆ ಎಂದು ಉತ್ತರಾಖಂಡದ ರುದ್ರಪ್ರಯಾಗದ ಸಂತ ಸದಾನಂದಗಿರಿ ಸ್ವಾಮಿ ಮಹಾರಾಜರು ಹೇಳಿದರು.ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಬಿ.ಎನ್.ವೈ.ಎಸ್. ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಅಧ್ಯಯನದ ಪ್ರಥಮ ವರ್ಷದ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರಿಗೂ ಏಕಾಗ್ರತೆ ಅನಿವಾರ್ಯವಾಗಿದ್ದು ಯೋಗ ಮತ್ತು ಧ್ಯಾನದಿಂದ ಏಕಾಗ್ರತೆಯೊಂದಿಗೆ ಉನ್ನತ ಸಾಧನೆ ಮಾಡಬಹುದು. ಭಾರತದ ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತ ವಿಶ್ವಮಾನ್ಯವಾಗಿದೆ. ಗುರುಕುಲಪದ್ಧತಿಯ ಶಿಕ್ಷಣ, ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ವಿಶ್ವವಿಖ್ಯಾತವಾಗಿದ್ದು ವಿದೇಶೀಯರು ಕೂಡಾ ಇಲ್ಲಿ ಅಧ್ಯಯನ ಮತ್ತು ಸಂಶೋಧನೆಗಾಗಿ ಬರುತ್ತಿದ್ದರು. ಚರಕ, ಸುಶ್ರುತರು, ಪತಂಜಲಿ ಮೊದಲಾದವರು ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಪದವಿ ತರಗತಿ ಆರಂಭಿಸಿದ ದೇಶದ ಪ್ರಥಮ ಕಾಲೇಜು ಉಜಿರೆಯಲ್ಲಿದೆ. ನಮ್ಮ ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಪ್ರಕೃತಿಚಿಕಿತ್ಸೆ, ಹೋಮಿಯೋಪತಿ ಬಗ್ಯೆ ಕೀಳರಿಮೆ ಸಲ್ಲದು. ಶ್ರದ್ಧೆ ಮತ್ತು ದೃಢನಂಬಿಕೆಯಿಂದ ಇವುಗಳ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಪ್ರಾಚೀನ ಗ್ರಂಥಗಳಲ್ಲಿ ಹಾಗೂ ತಾಳೆಗರಿಗಳಲ್ಲಿ ಕೂಡಾ ಆಯುರ್ವೇದ, ಯೋಗಾಭ್ಯಾಸ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿಯ ಉಲ್ಲೇಖವಿದೆ. ಇದನ್ನು ತಾನು ಕೂಡ ಅನುಸರಿಸಿ, ಅನುಭವಿಸಿ ಸಂತೋಷ ಮತ್ತು ತೃಪ್ತಿ ಹೊಂದಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಉಪಪ್ರಾಂಶುಪಾಲರಾದ ಡಾ. ಸುಜಾತ ಹೊಸ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ. ಗೀತಾ ಬಿ. ಶೆಟ್ಟಿ ವಂದಿಸಿದರು. ಸಂಸ್ಕೃತಿ ಎಂ. ಜೈನ್ ಕಾರ್ಯಕ್ರಮ ನಿರೂಪಿಸಿದರು.