ಸಾರಾಂಶ
ವಿಂಡ್ ಮಿಲ್ ಕಂಪನಿಗಳ ಸಭೆ ಕರೆಯಲು ಶಾಸಕ ಕೆ.ಸಿ.ವೀರೇಂದ್ರ ಸೂಚನೆ । ಕುರುಮರಡಿಕೆರೆಯಲ್ಲಿ ಜನತಾ ದರ್ಶನಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗದ ಆಸುಪಾಸಿನ ಗುಡ್ಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಂಡ್ ಮಿಲ್ ಕಂಪನಿಗಳು ಸಿಎಸ್ ಆರ್ ಅನುದಾನ ವಿನಿಯೋಗದಲ್ಲಿ ಸ್ಥಳೀಯ ಆದ್ಯತೆಗೆ ಉದಾಸೀನ ಮನೋಭಾವ ತೋರಿದ್ದಾರೆಂದು ಶಾಸಕ ಕೆ.ಸಿ.ವೀರೇಂದ್ರ ಆರೋಪಿಸಿದರು.
ಚಿತ್ರದುರ್ಗ ತಾಲೂಕಿನ ಕುರುಮರಡಿಕೆರೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಜನತಾದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಜಾಗವನ್ನು ವಿಂಡ್‍ಮಿಲ್ ಕಂಪನಿಗೆ ನೀಡಲಾಗಿದೆ. ಕಂಪನಿಗಳು ಸಿಎಸ್‍ಆರ್ ನಿಧಿಯನ್ನು ವಿಧಾನಸಭಾ ಕ್ಷೇತ್ರದ ಜನರಿಗೆ ಉಪಯೋಗವಾಗುವಂತೆ ಬಳಕೆ ಮಾಡಬೇಕು. ಈ ಕುರಿತು ಮುಂದಿನ ದಿನಗಳಲ್ಲಿ ವಿಂಡ್‍ಮಿಲ್ ಕಂಪನಿಯವರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.160 ಮನೆಗಳಿಗೆ ಅನುಮೋದನೆ:
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ, ಸೌಲಭ್ಯ ತಲುಪಿಸಬೇಕು ಎಂಬುವುದು ಜನತಾ ದರ್ಶನದ ಮುಖ್ಯ ಆಶಯವಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲಾಗುತ್ತಿದೆ.ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಇಂಗಳದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 160 ಮನೆಗಳಿಗೆ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು. ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-4 ರಿಂದ ಯರೇಹಳ್ಳಿವರೆಗೂ ಉತ್ತಮ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ದಪಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಎಲ್ಲ ಇಲಾಖೆಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಅಧಿಕಾರಿಗಳ ಸಭೆ ನಡೆಸಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಆಡಳಿತ ಕೊಡುವಂತೆ ನಿರ್ದೇಶನ ನೀಡಿದ್ದಾರೆ ಎಂದರು.
ಜನತಾ ದರ್ಶನ ಎಂಬುವುದು ಜನರ ದರ್ಶನವಲ್ಲ. ಸಮಸ್ಯೆಗಳಿಗೆ ಮುಖಾಮುಖಿಯಾಗುವುದು ಎಂದರ್ಥ. ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನರು ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಲಿದೆ. ಯಾವುದೇ ಅಡೆತಡೆಯಿಲ್ಲದೇ ಕಾಲವಿಳಂಬವಿಲ್ಲದೇ ತಕ್ಷಣವೇ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನತಾ ದರ್ಶನದಲ್ಲಿ ಇದುವರೆಗೂ 1191 ಅರ್ಜಿಗಳು ಸ್ವೀಕೃತವಾಗಿದ್ದು, 791 ಅರ್ಜಿಗಳನ್ನು ವಿಲೇಪಡಿಸಲಾಗಿದ್ದು, 400 ಅರ್ಜಿಗಳು ವಿಲೇಪಡಿಸುವುದು ಬಾಕಿ ಇದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಅಹವಾಲುಗಳನ್ನು ಪರಿಹರಿಸಲು ಪ್ರತ್ಯೇಕವಾಗಿ ಆಗಮಿಸಿ, ಖುದ್ದು ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಗ್ರಾಮದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪಟ್ಟಿ ತಯಾರಿಸಿ, ಸರ್ಕಾರದ ಮಟ್ಟದಲ್ಲಿ ಪರಿಹಾರ ಆಗುವ ಕೆಲಸಗಳಿಗೆ ಸರ್ಕಾರದ ಗಮನ ಸೆಳೆಯಲು ಶಾಸಕರನ್ನು ಕೋರಲಾಗುವುದು. ಜಿಲ್ಲಾ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುವರು. ವಾರದೊಳಗೆ ಪರಿಹಾರ ನೀಡಲಾಗುವುದು ಎಂದರು. ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಶೀಘ್ರವೇ ಭೂಮಿ ಮಂಜೂರು ಮಾಡಲಾಗುವುದು ಎಂದರು.
ಸಮಸ್ಯೆಗಳಿಗೆ ಪರಿಹಾರದ ಸ್ಪಂದನೆಕುರುಮರಡಿಕೆರೆ ಗ್ರಾಮದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಕುರಿತು ಶಾಸಕ ಕೆ.ಸಿ.ವೀರೇಂದ್ರ ಅವರಲ್ಲಿ ಹೇಳಿಕೊಂಡರು. ವೃದ್ಧೆಯೊಬರು ಮಾತನಾಡಿ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿದೆ. ವಯಸ್ಸಾದವರು ಚಿಕಿತ್ಸೆಗಾಗಿ ಚಿತ್ರದುರ್ಗ ನಗರಕ್ಕೆ ಹೋಗಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುರುಮರಡಿಕೆರೆ ಹಾಗೂ ಚಿತ್ರದುರ್ಗದ ನಡುವೆ ಹೆಚ್ಚಿನ ಸಾರಿಗೆ ಬಸ್ ಸಂಚಾರಕ್ಕೆ ಗ್ರಾಮಸ್ಥರು ಮನವಿ ಮಾಡಿದರು. ನಾಳೆಯಿಂದಲೇ ಬಸ್ ಸಂಚಾರ ಆರಂಭಿಸುವಂತೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ವೇಳಾ ಪಟ್ಟಿಯನ್ನು ಬದಲಿಸುವಂತೆ ಕರ್ನಾಟಕ ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಶಾಸಕ ವೀರೇಂದ್ರ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು. ಗ್ರಾಮದ ಸ್ವಚ್ಛತೆ, ಚರಂಡಿ, ರಸ್ತೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಜನರೊಂದಿಗೆ ಚರ್ಚಿಸಿ ಪರಿಹಾರ ಮಾರ್ಗಗಳನ್ನು ಶಾಸಕರು ತೋರಿದರು. ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿರುವಲ್ಲಪ್ಪ, ಉಪಾಧ್ಯಕ್ಷೆ ನೇತ್ರಮ್ಮ, ಮಾಜಿ ಉಪಾಧ್ಯಕ್ಷೆ ಬೃಂದಾ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ತಾಲೂಕು ಪಂಚಾಯಿತಿ ಇಒ ರವಿಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ------------------
ಕಂದಾಯ ಇಲಾಖೆಗೆ ಸಂಬಂಧಪಟ್ಟ ಸರ್ವೇ, ಪೋಡಿ ಮಾಡಲು ಸಮಯ ಬೇಕಾಗಲಿದೆ. ಹಾಗಾಗಿ ಅಂತಹ ವಿಷಯಗಳನ್ನು ಒಂದು ತಿಂಗಳೊಳಗೆ ಬಗೆಹರಿಸಲಾಗುವುದು. ಬಗರ್ ಹುಕುಂ ಹಾಗೂ ಸಾಗುವಳಿ ಚೀಟಿ ನೀಡುವಂತೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದ ತಕ್ಷಣವೇ ಅರ್ಜಿಗಳನ್ನು ವಿಲೇಪಡಿಸಲು ಕ್ರಮಕೈಗೊಳ್ಳಲಾಗುವುದು.- ದಿವ್ಯಾಪ್ರಭು ಜಿಲ್ಲಾಧಿಕಾರಿ