ಸಾರಾಂಶ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 5300 ಕೋಟಿ ಹಣ ರು. ಬಿಡುಗಡೆ ಮಾಡದಿರುವುದು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಜಿಲ್ಲೆಯ ಎಲ್ಲಾ ಜನಪರ, ಪ್ರಗತಿಪರ, ಕನ್ನಡ ಪರ, ದಲಿತಪರ ಸಂಘಟನೆಗಳು ಸೇರಿ ಚಿತ್ರದುರ್ಗ ಜಿಲ್ಲೆಯ ಸಂಸದರ ಕಛೇರಿಯ ಮುಂದೆ ಫೆ.5ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈಕುರಿತು ಪತ್ರಿಕಾ ಹೇಳೀಕೆ ನೀಡಿರುವ ಅವರು ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಾವರಿಯ ಕನಸು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. 4 ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ವಾಗ್ದಾನ ಮಾಡಿದ ಕರ್ನಾಟಕ ಸರ್ಕಾರ 15 ವರ್ಷಗಳು ಕಳೆದರೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ರಾಜ್ಯದಲ್ಲಿ ಈ ವರ್ಷ 50 ವರ್ಷಗಳಲ್ಲಿ ಕಂಡರಿಯದ ಅತೀ ಗಂಭೀರವಾದ ಬರ ಅನುಭವಿಸುತ್ತಿದ್ದೇವೆ. ಹವಾಮಾನ ಇಲಾಖೆಯು ಮುಂದಿನ ವರ್ಷ ಸೂಪರ್ ಎಲ್‍ನಿನೋ ಬರುವುದರಿಂದ ಈ ವರ್ಷಕ್ಕಿಂತ ಗಂಭೀರ ಬರ ಬರುವುದಾಗಿ ಅಂದಾಜಿಸಲಾಗಿದೆ.ಪರಿಣಾಮ ಕೃಷಿ ಮತ್ತು ತೋಟಗಾರಿಕೆಗಳು ಉಳಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಹಳ್ಳಿಗಳ ಬದುಕು ನಿಂತಿರುವುದೇ ಕೃಷಿ ಮತ್ತು ತೋಟಗಾರಿಕೆಗಳಿಂದ ಆ ಕಾರಣ ಮಲೆನಾಡಲ್ಲಿ ಮಳೆಯಾದರೂ ನಮಗೂ ಒಂದಿಷ್ಟು ನೀರು ಪಡೆದುಕೊಂಡರೆ ಬದುಕಲು ಮತ್ತು ಕೃಷಿಯ ಉಳುವಿಗೆ ಸಾಧ್ಯವಾಗುವುದು ಆ ಕಾರಣ ಕೇಂದ್ರ ಸರ್ಕಾರ ಕಾಯ್ದಿರಿಸಿದ 5300 ಕೋಟಿ ರು. ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲೆ ಸಂಸದರ ಮೇಲೆ ಗುರುತರವಾದ ಒತ್ತಾಯವನ್ನು ತರಬೇಕಾಗಿದೆ.
ಈ ವಿಚಾರವಾಗಿ ಸಂಸದರಿಗೆ ಜಿಲ್ಲೆಯ ರೈತರು ಕೊಟ್ಟಂತಹ ಗಡುವು ಮುಕ್ತಾಯವಾಗಿದೆ. ಆದ್ದರಿಂದ ಜಿಲ್ಲೆಯ ರೈತರು ವರ್ಗಬೇಧವನ್ನು ಮರೆತು ನೀರಿನ ಹೋರಾಟಕ್ಕೆ ಸನ್ನದ್ಧರಾಗಿ ಬರಬೇಕು. ಹಾಗೆಯೇ ಜಿಲ್ಲೆಯ ಸಮಸ್ತನಾಗರೀಕರು, ಸಂಘ ಸಂಸ್ಥೆಗಳು ಎಲ್ಲಾ ವ್ಯಾಪಾರಸ್ಥರು, ಕೃಷಿಕರು, ಬೆಳೆಯುವ ಎಲ್ಲಾ ಉತ್ಪನ್ನಗಳ ಅವಲಂಬಿತರೆಲ್ಲರೂ, ಸ್ವ-ಸಹಾಯ ಸಂಘಗಳು ಈ ಅನಿರ್ಧಿಷ್ಟಾವಧಿಯ ಧರಣಿಯ ನೊಗಕ್ಕೆ ಹೆಗಲು ಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದ್ದಾರೆ.ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು ಮತ್ತು 2023ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ 5300 ಕೋಟಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ತುಂಗಾದಿಂದ ಭದ್ರಾಕ್ಕೆ ನೀರು ಹರಿಸುವ ಕಾಮಗಾರಿಗಳು ವೇಗವಾಗಿ ನಡೆಸಬೇಕು. ಚಿತ್ರದುರ್ಗದ ಏಕೈಕ ಅಕ್ಷಯ ಪಾತ್ರೆ ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ಖಾತ್ರಿ ಪಡಿಸಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಸಾಸಿವೆಹಳ್ಳಿ ಏತ ನೀರಾವರಿ, ಎತ್ತಿನಹೊಳೆ, ಹೇಮಾವತಿ ನದಿ ನೀರನ್ನು ಬಳಸಿ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಕೈಗೊಳ್ಳಬೇಕು. ಯುದ್ದೋಪಾದಿಯಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಕೈಗೊಂಡು ಇನ್ನು 5 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳ ಮಾದರಿಯಲ್ಲಿ ರೈತರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.