ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಾಹ್ಯ ಮತ್ತು ಆಂತರಿಕ ಶತೃಗಳ ವಿರುದ್ಧ ದುರ್ಗಿಯಂತೆ ಹೋರಾಡಿ ಹುತಾತ್ಮರಾದ ಮಾಜಿ ಪ್ರಧಾನಿ, ಹೆಮ್ಮೆಯ ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿಯವರು ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರಚಾರ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸ್ಮರಣೆಯನ್ನು ಮಾಡುವ ಮೂಲಕ ಅವರ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಜೊತೆಗೆ ಅವರ ಆದರ್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿರಾಗಾಂಧಿಯವರು ಕೈಗೊಂಡ ದಿಟ್ಟ ನಿರ್ಧಾರ ಹಾಗೂ ಹೋರಾಟಗಳಿಂದ ದೇಶದಲ್ಲಿ ಹಲವಾರು ಕ್ರಾಂತಿಕಾರಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುನ್ನೆಡೆಸಿಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಇಂದಿರಾಗಾಂಧಿಯವರು ಅಂದು ಜಾರಿಗೆ ತಂದ 21 ಅಂಶಗಳ ಕಾರ್ಯಕ್ರಮಗಳು ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿವೆ. ಉಳುವವನೆ ಭೂ ಒಡೆಯ ಕಾರ್ಯಕ್ರಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಸಮಾನತೆ ಮತ್ತು ಬಡತನಗಳ ನಿರ್ಮೂಲನೆಗಾಗಿ ಇಂದಿರಾಗಾಂಧಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳು ನಮ್ಮ ಆಡಳಿತಕ್ಕೆ ಇಂದಿಗೂ ಮಾದರಿಯಾಗಿದೆ ಎಂದರು.ಇಂದಿರಾಗಾಂಧಿಯವರು ದೇಶದ ಉಳಿವಿಗೆ ತನ್ನ ಪ್ರಾಣವನ್ನು ತ್ಯಜಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಐಕ್ಯತೆ, ಅಖಂಡತೆಗಾಗಿ ಹೋರಾಡಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಇಷ್ಟೊಂದು ಕ್ರಾಂತಿಕಾರಕ ಬದಲಾವಣೆಗಳು ಕಂಡಿರುವುದು ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಮಾತ್ರ. ಇಂದಿರಾಗಾಂಧಿಯವರು ತನ್ನ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವುಗಳು ಇಂದು ಉಳಿದಿವೆ. ಅವುಗಳನ್ನು ನಾವುಗಳು ಜೀವನದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.ಚಿಕ್ಕಮಗಳೂರು ವಿಧಾನಸಭಾ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಲ್. ಪ್ರವೀಣ್ ಬೆಟ್ಟಗೆರೆ ಮಾತನಾಡಿ, ಜನರ ಹಿತಕ್ಕಾಗಿ ಯಾರು ದುಡಿದಿರುತ್ತಾರೋ ಅವರನ್ನು ರಾಷ್ಟ್ರ ಗುರುತು ಮಾಡುತ್ತದೆ. ಅವರನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಉಪ್ಪಳ್ಳಿ ಕೆ. ಭರತ್ ಮಾತನಾಡಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು.ರಾಷ್ಟ್ರೀಯ ಮಹಿಳಾ ಏಕೀಕರಣ ದಿನವನ್ನಾಗಿ ಆಚರಿಸುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಎಸ್.ಸಿ. ಘಟಕ ರಾಜ್ಯ ಸಂಚಾಲಕಿ ನೇತ್ರಾವತಿ ಹಾಗೂ ನಗರ ಆಶ್ರಯ ಸಮಿತಿ ಸದಸ್ಯೆ ಯಶೋಧ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭೆ ನಾಮಿನಿ ಸದಸ್ಯರಾದ ಕೀರ್ತಿ ಶೇಟ್, ಪ್ರಕಾಶ್ ರೈ, ಸಿಡಿಎ ಸದಸ್ಯರಾದ ಶೃದೀಪ್, ರಾಘವೇಂದ್ರ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕೆಡಿಪಿ ಸದಸ್ಯ ಸಂತೋಷ್ ಲಕ್ಯಾ, ಮುಖಂಡರಾದ ತಿಮ್ಮಯ್ಯ, ನಾಗೇಶ್, ನಾಗೇಶ್ ರಾಜ್ ಅರಸ್, ದಾವಿದ್, ಸುರೇಶ್, ಕುಸುಮಾ ಭರತ್, ತಾಹೀರ್, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.