ಇಂದಿರಾ ಗಾಂಧಿ ವೈಚಾರಿಕ ಗಟ್ಟಿತನ ಇಂದಿನ ಯುವ ರಾಜಕಾರಣಿಗಳಿಗೆ ಆದರ್ಶ: ತೇಜಸ್ವಿನಿ ಗೌಡ

| Published : Nov 20 2024, 12:34 AM IST

ಇಂದಿರಾ ಗಾಂಧಿ ವೈಚಾರಿಕ ಗಟ್ಟಿತನ ಇಂದಿನ ಯುವ ರಾಜಕಾರಣಿಗಳಿಗೆ ಆದರ್ಶ: ತೇಜಸ್ವಿನಿ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಹಿತಕ್ಕೆ ಏನೇನು ಬೇಕಾಗಿತ್ತು ಅದನ್ನು ಅನುಷ್ಠಾನಕ್ಕೆ ತಂದವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ. ದೇಶ ವಿಭಜನೆಯಾದಾಗ ಆಹಾರದ ಕೊರತೆ ಇತ್ತು. ಕಿತ್ತು ತಿನ್ನುವ ಬಡತನ. ಭೀಕರವಾದ ಬರಗಾಲದಿಂದ ದೇಶ ನಲುಗಿತ್ತು. ಭಾಷವಾರು ಪ್ರಾಂತ್ಯಗಳ ರಚನೆಯ ಸಮಸ್ಯೆ ಇತ್ಯರ್ಥಪಡಿಸುವ ಮತ್ತು ನೆರೆಯ ದೇಶಗಳಿಂದ ಯುದ್ಧದ ಭೀತಿಯಿತ್ತು. ಈ ಸಮಸ್ಯೆಯನ್ನು ಗಾಂಧಿ ಕುಟುಂಬ ಯಶಸ್ವಿಯಾಗಿ ನಿಭಾಯಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿರಾ ಗಾಂಧಿಯವರ ವೈಚಾರಿಕ ಗಟ್ಟಿತನ ಇಂದಿನ ಪೀಳಿಗೆಯ ಯುವ ರಾಜಕಾರಣಿಗಳಿಗೆ ಆದರ್ಶಪ್ರಾಯವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಮಾಜಿ ಸಂಸದೆ ತೇಜಸ್ವಿನಿ ಗೌಡ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ ಅಂಗವಾಗಿ ಉಕ್ಕಿನ ಮಹಿಳೆಗೆ ಕಾಂಗ್ರೆಸ್ ಮಹಾನಮನ ಕಾರ್ಯಕ್ರಮದಲ್ಲಿ ಅವರು, ಭಾರತದ ರಾಜಕಾರಣದ ದಾರ್ಶನಿಕ ಪ್ರಜ್ಞೆ- ಇಂದಿರಾ ಗಾಂಧಿ ಕುರಿತು ಮಾತನಾಡಿದರು.

ಭಾರತದ ಹಿತಕ್ಕೆ ಏನೇನು ಬೇಕಾಗಿತ್ತು ಅದನ್ನು ಅನುಷ್ಠಾನಕ್ಕೆ ತಂದವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ. ದೇಶ ವಿಭಜನೆಯಾದಾಗ ಆಹಾರದ ಕೊರತೆ ಇತ್ತು. ಕಿತ್ತು ತಿನ್ನುವ ಬಡತನ. ಭೀಕರವಾದ ಬರಗಾಲದಿಂದ ದೇಶ ನಲುಗಿತ್ತು. ಭಾಷವಾರು ಪ್ರಾಂತ್ಯಗಳ ರಚನೆಯ ಸಮಸ್ಯೆ ಇತ್ಯರ್ಥಪಡಿಸುವ ಮತ್ತು ನೆರೆಯ ದೇಶಗಳಿಂದ ಯುದ್ಧದ ಭೀತಿಯಿತ್ತು. ಈ ಸಮಸ್ಯೆಯನ್ನು ಗಾಂಧಿ ಕುಟುಂಬ ಯಶಸ್ವಿಯಾಗಿ ನಿಭಾಯಿಸಿತು ಎಂದರು.

ಗಾಂಧಿ ಕುಟುಂಬ ಎಂದರೆ ವಂಶಾಡಳಿತ ಅಲ್ಲ. ಕಾಂಗ್ರೆಸ್ ರಾಜಕೀಯ ಪಕ್ಷ ಮಾತ್ರವಲ್ಲ, ಒಂದು ಚಳವಳಿ. ಉಕ್ಕಿನ ಮಹಿಳೆಯ ಎದೆಯಲ್ಲಿ ಬೇನೆ ಇದ್ದರೂ ದೇಶಕ್ಕಾಗಿ ದುಡಿದರು. ಸೋನಿಯಾ ಗಾಂಧಿ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದರು. ಇಂದಿರಾ ಗಾಂಧಿ ಎದುರಿಸಿದ ಸವಾಲುಗಳನ್ನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

1980 ರಲ್ಲಿ ಸ್ಥಾಪನೆಯಾದ ಬಿಜೆಪಿ, ಕಾಂಗ್ರೆಸ್ ಅನ್ನು ಮುಕ್ತ ಮಾಡುವುದಾಗಿ ಹೇಳುತ್ತದೆ. ರಾಜಕೀಯ ದ್ವೇಷದಿಂದ ಹೇಳುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಒಮ್ಮೊಮ್ಮೆ ಮಂಕಾಗಬಹುದು. ಮತ್ತೆ ಪುಡಿದೇಳುತ್ತದೆ. ಚಳವಳಿಯಾಗಿ ಜನರ ಮಧ್ಯೆ ನಿಲ್ಲುತ್ತದೆ ಎಂದರು.

ಬಿಜೆಪಿಯವರು ಮನೆಗೆ ಹೋಗಲ್ಲ, ಕಾಂಗ್ರೆಸ್‌ ನವರು ಬೀದಿಗೆ ಹೋಗಲ್ಲ ಎಂಬ ಮಾತಿದೆ. ಎಲ್ಲಾ ಕಾರ್ಯಕರ್ತರು ಜನರೊಂದಿಗೆ ಬೆರೆಯಬೇಕು. ಸರ್ಕಾರದ ಯೋಜನೆಗಳು, ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ಮನವರಿಕೆ ಮಾಡಬೇಕು. ಅಧ್ಯಯನ ಶಿಬಿರಗಳನ್ನು ಆಯೋಜಿಸಿ ಬಲಿಷ್ಠ ಕಾರ್ಯಕರ್ತರ ಪಡೆಯನ್ನು ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ. ಹರೀಶ್ ಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಪುರುಷೋತ್ತಮ್, ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ ಮೊದಲಾದವರು ಇದ್ದರು.ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿಗಳು ಮೌನವಾಗಿದ್ದಾರೆ. ಸೂಕ್ಷ್ಮವಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೈ ಕಟ್ಟಿ ಕುಳಿತಿದ್ದಾರೆ. ದೇಶದ ಸಾರ್ವಭೌಮತೆ ಮತ್ತು ಸುರಕ್ಷತೆಗೆ ಧಕ್ಕೆ ಬಂದಾಗ ತುರ್ತು ಪರಿಸ್ಥಿತಿ ಘೋಷಿಸುವಂತೆ ಭಾರತದ ಸಂವಿಧಾನವೇ ಹೇಳಿದೆ.

- ತೇಜಸ್ವಿನಿ ಗೌಡ, ಮಾಜಿ ಸಂಸದೆ

ನವ ಭಾರತದ ನಿರ್ಮಾಣಕ್ಕೆ ಇಂದಿರಾ ಕೊಡುಗೆ ಅಪಾರ

ದೇಶ ಹಿಂದೆಂದೂ ಕಂಡರಿಯದ ಧೀಮಂತ ನಾಯಕಿ ಇಂದಿರಾ ಗಾಂಧಿ. ನವ ಭಾರತದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಗರೀಬಿ ಹಠಾವೋ ಎಂಬ ಧ್ಯೇಯ ವಾಕ್ಯದ ಮೂಲಕ ಭಾರತದ ಬಡತನ ನಿರ್ಮೂಲನೆಗೆ ಭದ್ರ ಬುನಾದಿಯನ್ನ ಹಾಕಿಕೊಟ್ಟರು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ತಂದು ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದರು. ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ಮೂಲಕ ದೇಶದ ಎಲ್ಲಾ ವರ್ಗದ ಜನರನ್ನ ಸಮಾನವಾಗಿ ಕಂಡರು. ಇಂದಿರಾ ಗಾಂಧಿ ಅವರು ದೇಶಕ್ಕೆ ಮತ್ತು ಪಕ್ಷಕ್ಕೆ ಅಗಣಿತ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಸ್ಮರಿಸಿದರು.