ಸಾರಾಂಶ
ರಾಜ್ಯ ಸರ್ಕಾರ ನಿರ್ಧರಿಸಿರುವ ಇಂದಿರಾ ಕಿಟ್ ವಿತರಣೆ ಯೋಜನೆಯಿಂದ ಅಕ್ರಮ ಪಡಿತರ ದಂಧೆಗೆ ಕಡಿವಾಣ ಬೀಳಲಿದೆ.
ಬಳ್ಳಾರಿ: ರಾಜ್ಯ ಸರ್ಕಾರ ನಿರ್ಧರಿಸಿರುವ ಇಂದಿರಾ ಕಿಟ್ ವಿತರಣೆ ಯೋಜನೆಯಿಂದ ಅಕ್ರಮ ಪಡಿತರ ದಂಧೆಗೆ ಕಡಿವಾಣ ಬೀಳಲಿದ್ದು, ಅರ್ಹ ಪಡಿತರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನೀಡಿ, ಸೈ ಎನ್ನಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಂದು ಕಲ್ಯಾಣಕಾರಿ ಕೆಲಸಕ್ಕೆ ಕೈ ಹಾಕಿದೆ. ಬರೀ ಅಕ್ಕಿ ಕೊಟ್ಟರೆ ಸಾಲದು, ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲ ನಾಗರಿಕರು ನೆಮ್ಮದಿ ಜೀವನ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇಂದಿರಾ ಕಿಟ್ ನೀಡುವ ಯೋಜನೆ ಆರಂಭಿಸಿದೆ. 10 ಕೆಜಿ ಅಕ್ಕಿ ನೀಡುವುದರಿಂದ ನೆಮ್ಮದಿಯ ಜೀವನ ಸಾಗಲು ಆಗದು ಎಂದು ಮನಗಂಡ ರಾಜ್ಯ ಸರ್ಕಾರ ಇದೀಗ 5 ಕೆಜಿ ಅಕ್ಕಿ ನೀಡಿ, ಇನ್ನೂ 5 ಕೆಜಿ ಅಕ್ಕಿ ಬದಲು 1ಕೆಜಿ ತೊಗರಿ, 1ಕೆಜಿ ಬೇಳೆ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಉಪ್ಪು ನೀಡಲು ನಿರ್ಧಾರ ಮಾಡಿದೆ. ಕೇಂದ್ರದ ನೀತಿಗಳಿಂದ ದಿನದಿಂದ ದಿನಕ್ಕೆ ಬೆಲೆ ಏರಿಕೆಗೊಂಡು ಬಡ, ಮಧ್ಯಮ ವರ್ಗದ ಜನರು ದಿನನಿತ್ಯ ಬದುಕು ಕಟ್ಟಿಕೊಳ್ಳಲು ಹೆಣಗಾಡುವಂತಾಗಿದ್ದು ಇಂದಿರಾಕಿಟ್ ವಿತರಣೆಯಿಂದ ಬಡಜನರು ನೆಮ್ಮದಿಯ ನಿಟ್ಟಿಸಿರುಬಿಡುವಂತಾಗಿದೆ. ಇದರ ಜೊತೆಗೆ ಮಹಿಳಾ ಆರೋಗ್ಯ ಗಮನದಲ್ಲಿಟ್ಟುಕೊಂಡು ಋತುಚಕ್ರದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಕಡ್ಡಾಯ ವೇತನ ಸಹಿತ ರಜೆ ನೀಡಲು ನಿರ್ಧರಿಸಿರುವುದು ರಾಜ್ಯ ಸರ್ಕಾರದ ಮಹಿಳಾಪರ ಕಾಳಜಿಯನ್ನು ಸೂಚಿಸುತ್ತದೆ ಎಂದು ವೆಂಕಟೇಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.