ಇಂದಿರಾ ಪ್ರಿಯದರ್ಶಿನಿ ಝೂ ವಿಜ್ಞಾನ ಕೇಂದ್ರ ಬಳಿ ಸ್ಥಳಾಂತರಿಸಿ

| Published : Nov 22 2025, 02:00 AM IST

ಇಂದಿರಾ ಪ್ರಿಯದರ್ಶಿನಿ ಝೂ ವಿಜ್ಞಾನ ಕೇಂದ್ರ ಬಳಿ ಸ್ಥಳಾಂತರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕಿನ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯವನ್ನು ರಾಷ್ಟ್ರೀಯ ಹೆದ್ದಾರಿ ಎಡಭಾಗದ ವಿಜ್ಞಾನ ಕೇಂದ್ರ ಪಕ್ಕದ ಜಾಗಕ್ಕೆ ಸ್ಥಳಾಂತರ ಮಾಡುವುದು ಸೂಕ್ತ. ಇದರಿಂದ ಝೂ ಇನ್ನಷ್ಟು ಆಕರ್ಷಣೀಯವಾಗಿಸಲು, ಪ್ರವಾಸಿ ತಾಣವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದ್ದಾರೆ.

- ಕಿರು ಪ್ರಾಣಿ ಸಂಗ್ರಹಾಲಯ ಪ್ರವಾಸಿ ತಾಣವಾಗಿಸಲು ಡಿಸಿ ಮುಂದಾಗಲಿ: ಶಾಸಕ ಬಸವಂತಪ್ಪ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯವನ್ನು ರಾಷ್ಟ್ರೀಯ ಹೆದ್ದಾರಿ ಎಡಭಾಗದ ವಿಜ್ಞಾನ ಕೇಂದ್ರ ಪಕ್ಕದ ಜಾಗಕ್ಕೆ ಸ್ಥಳಾಂತರ ಮಾಡುವುದು ಸೂಕ್ತ. ಇದರಿಂದ ಝೂ ಇನ್ನಷ್ಟು ಆಕರ್ಷಣೀಯವಾಗಿಸಲು, ಪ್ರವಾಸಿ ತಾಣವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡು ಬಳಿಯ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಅಲ್ಲಿನ ಅವ್ಯವಸ್ಥೆ ಪರಿಶೀಲನೆ ನಡೆಸಿದರು.

ಇಂದಿರಾ ಕಿರು ಪ್ರಾಣಿ ಸಂಗ್ರಹಾಲಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಸರ್ಕಾರಕ್ಕೆ ಆದಾಯ ಬರುವ ಕೇಂದ್ರವಾಗಲಿದೆ. ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿರುವುದರಿಂದ ಇಲ್ಲಿ ಮಿನಿ ಝೂ ಎಂಬುದು ಇದೆಯೋ, ಇಲ್ಲವೋ ಎಂಬಂತಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದು ಡಿಸಿ ಅವರಿಗೆ ತಿಳಿಸಿದರು.

ಈ ಪ್ರಾಣಿ ಸಂಗ್ರಹಾಲಯದಲ್ಲಿ ಕೊಂಡುಕುರಿ, ಜಿಂಕೆ, ಕೃಷ್ಣಮೃಗ, ಕರಡಿಗಳು, ಬಜರಿಗಾರ್‌, ವಲ್‌ ಬರ್ಡ್ಸ್‌, ಗಿಳಿ, ನವಿಲು, ಗೋಲ್ಡನ್‌ ಯೆಲ್ಲೋ ಫೀಸಂಟ್‌, ಲೇಡಿ ಆಮಹರ್ಟ್ಸ್‌ ಫೀಸಂಟ್‌ ಮುಂತಾದ ವಿಶೇಷ ಜಾತಿಯ ಹಕ್ಕಿಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ‘ಇಲ್ಲಿರುವ ದೊಡ್ಡ ಪ್ರಾಣಿ ಎಂದರೆ ಕರಡಿ. ಮೃಗಾಲಯ ಅಭಿವೃದ್ಧಿಪಡಿಸಿದರೆ ಸಿಂಹ, ಹುಲಿ, ಚಿರತೆಗಳು ಇದ್ದರೆ ಪ್ರಾಣಿ ಸಂಗ್ರಹಾಲಯ ಇನ್ನಷ್ಟು ಆಕರ್ಷಣೀಯವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಡಿಎಫ್ಒ ಹರ್ಷವರ್ಧನ್, ಆರ್‌ಎಫ್ಒ ಷಣ್ಮುಖಪ್ಪ, ದರ್ಶನ್ ನಾಯ್ಕ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಕಿರು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಹಾಜರಿದ್ದರು.

- - -

-21ಕೆಡಿವಿಜಿ34, 35:

ದಾವಣಗೆರೆ ತಾಲೂಕಿನ ಆನಗೋಡು ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.