ಸಮಾಜದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಇಂದಿಗೂ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಣಿಬೆನ್ನೂರು: ಸಮಾಜದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಇಂದಿಗೂ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಚಿದಂಬರ ನಗರ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಹಾಗೂ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹1980 ಲಕ್ಷ ಮೊತ್ತದ 8 ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ವಸತಿ ನಿಲಯದ ವಿದ್ಯಾರ್ಥಿಗಳು ಸ್ವಂತ ಹಣದಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಿಸಿರುವುದು ಸಂತಸ ತಂದಿದೆ. ಇದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು ಪ್ರತಿಮೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಾಗಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಶಾಲೆಯಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ಪ್ರತಿಮೆಗಳನ್ನು ಕಡ್ಡಾಯವಾಗಿ ಹಾಕಬೇಕು. ಗಾಂಧೀಜಿ ಹಾಗೂ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತ ವರ್ಗದವರು ಶಿಕ್ಷಣ ಪಡೆಯಲು ಸಾಕಷ್ಟು ತೊಂದರೆ ಎದುರಿಸಬೇಕಾಗಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ಸಮಾಜದ ಎಲ್ಲ ವರ್ಗದ ಜನರು ಶಿಕ್ಷಣ ಪಡೆಯುವಂತಾಯಿತು. ಪ್ರಸ್ತುತ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿ ಅವರನ್ನು ಇತಿಹಾಸದಿಂದ ಮರೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಹೆಸರು ಅಳಿಸುವ ಮನಸ್ಸುಗಳು ಹಾತೊರೆಯುತ್ತಿದ್ದು ಅದನ್ನು ತಡೆಯಲು ಹೋರಾಟ ಮಾಡಬೇಕಾಗಿದೆ ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಬಾಲ್ಯದಲ್ಲಿ ಸಾಕಷ್ಟು ಶೋಷಣೆ ಹಾಗೂ ಅವಮಾನಗಳನ್ನು ಎದುರಿಸಿಯೂ ಉತ್ತಮ ಶಿಕ್ಷಣ ಪಡೆದ ಅಂಬೇಡ್ಕರ್ ರಚಿಸಿದ ಸಂವಿಧಾನ ಇಂದು ನಮ್ಮ ದೇಶಕ್ಕೆ ಮಾರ್ಗಸೂಚಿಯಾಗಿದೆ. ಅದೇ ರೀತಿ ಸಮ ಸಮಾಜಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಕಾಶ ಕೋಳಿವಾಡ, ಅಂಬೇಡ್ಕರ್ ಕೇವಲ ಮೀಸಲಾತಿ ಕೊಟ್ಟಿಲ್ಲ ಬದಲಾಗಿ ಎಲ್ಲರಿಗೂ ನೆಮ್ಮದಿ ವಾತಾವರಣ ನೀಡಿದ್ದಾರೆ. ಶಿಕ್ಷಣದಿಂದ ಸಾಧನೆ ಮಾಡಲು ಸಾಧ್ಯವಿದೆ ಎಂಬುದಕ್ಕೆ ಅಂಬೇಡ್ಕರ್ ಜೀವನವೇ ಸಾಕ್ಷಿ. ನಗರಕ್ಕೆ ರಿಂಗ್ ರೋಡ್ ಅವಶ್ಯಕತೆಯಿದ್ದು ಸಚಿವರು ಅದನ್ನು ಈಡೇರಿಸಬೇಕು ಎಂದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಡಾ.ಬಿ.ಆರ್. ಅಂಬೇಡ್ಕರ್ ವಿಭಾಗದ ಪ್ರಾಧ್ಯಾಪಕ ಹಾಗೂ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕಾರ, ಭಾರತ್ ಸೇವಾ ಫೋರ್ಸ್ ರಾಜ್ಯಾಧ್ಯಕ್ಷ ಏಳುಕೋಟೆಪ್ಪ ಪಾಟೀಲ ಮಾತನಾಡಿದರು. ಹಿರೇಕೆರೂರ ಶಾಸಕ ಯು.ಬಿ.ಬಣಕಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಫ್.ಎಸ್.ಎನ್.ಗಾಜಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಮೈಲಪ್ಪ ದಾಸಪ್ಪನವರ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಬಸಣ್ಣ ಮರದ, ರವೀಂದ್ರಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ ಮತ್ತಿತರರಿದ್ದರು. ಸುನೀಲ ಕಡೂರ ಸ್ವಾಗತಿಸಿದರು. ಶೀಶೈಲ ಶಿಂದೆ ನಿರೂಪಿಸಿದರು. ಇದಕ್ಕೂ ಪೂರ್ವದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ನಗರಸಭಾ ಕ್ರೀಡಾಂಗಣದಿಂದ ಬೈಕ್ ರ‍್ಯಾಲಿ ಮೂಲಕ ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ.ರಸ್ತೆ, ಪೋಸ್ಟ್ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಮೆಡ್ಲೇರಿ ರಸ್ತೆ, ಹುಣಸಿಕಟ್ಟಿ ರಸ್ತೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತರಲಾಯಿತು. ಪ್ರತ್ಯೇಕ ದಲಿತ ರಾಷ್ಟ್ರಕ್ಕೆ ಬೇಡಿಕೆ:ಸಭೆಯ ಪ್ರಾರಂಭದಲ್ಲಿಯೇ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಡಾ. ಬಿ.ಆರ್. ಅಂಬೇಡ್ಕರ್ ವಿಭಾಗದ ಪ್ರಾಧ್ಯಾಪಕ ಹಾಗೂ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕಾರ ಮಾತನಾಡಿ, ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಇತ್ತೀಚಿಗೆ ಜರುಗಿದ ಮಾನ್ಯ ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳು ಹಾಗೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಇದೇ ರೀತಿ ಮುಂದುವರೆದರೆ ಪ್ರತ್ಯೇಕ ದಲಿತ ರಾಷ್ಟ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿದರು.