ಸಾರಾಂಶ
ಅನುದಾನ ಹಂಚಿಕೆ ಮಾಡಿದಾಗ್ಯೂ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದರಿಂದ ಸರ್ಕಾರ ಇದೀಗ ಹಿಂದುಳಿದ ತಾಲೂಕುಗಳ ಹೊಸ ಸಮೀಕ್ಷೆ ಆರಂಭಿಸಿದೆ.
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ : ರಾಜ್ಯದಲ್ಲಿ ‘ಪ್ರಾದೇಶಿಕ ಅಸಮಾನತೆ’ಯ ಕೂಗು ಮತ್ತೆ ಸದ್ದು ಮಾಡುತ್ತಿದೆ. ಈ ಅಸಮಾನತೆ ನೀಗಿಸುವ ಉದ್ದೇಶದಿಂದ ರಚಿಸಲಾಗಿದ್ದ ಡಾ। ಡಿ.ಎಂ.ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿ ನೀಡಿದ್ದ ವರದಿಯ ಅನುಷ್ಠಾನಕ್ಕೆ 15 ವರ್ಷಗಳ ಅವಧಿಯಲ್ಲಿ ₹40,385.27 ಕೋಟಿ ಅನುದಾನ ಹಂಚಿಕೆ ಮಾಡಿದಾಗ್ಯೂ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವುದರಿಂದ ಸರ್ಕಾರ ಇದೀಗ ಹಿಂದುಳಿದ ತಾಲೂಕುಗಳ ಹೊಸ ಸಮೀಕ್ಷೆ ಆರಂಭಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪ್ರಾದೇಶಿಕ ಅಸಮಾನತೆ ನೀಗಿಸಿ, ಅಭಿವೃದ್ಧಿಯಲ್ಲಿ ಸಮಾನತೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಘೋಷಿಸಿದ ಹಿನ್ನಲೆಯಲ್ಲಿ ‘ಪ್ರದೇಶಾಭಿವೃದ್ಧಿ ಮಂಡಳಿ’ ಇದೇ 26ರಂದು ಧಾರವಾಡದಲ್ಲಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಸೂಚ್ಯಾಂಕ ಕಂಡು ಹಿಡಿಯಲು ಜಿಲ್ಲೆಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆ ಆಯೋಜಿಸಿದೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಡಾ। ಡಿ.ಎಂ.ನಂಜುಂಡಪ್ಪ ವರದಿಯ ಶಿಫಾರಸುಗಳನ್ನು ಅನುಷ್ಠಾನ ಮಾಡಿದ್ದಾಗ್ಯೂ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಹೊಂದದೇ ಇರುವುದು. ಇಂಥ ಹಿಂದುಳಿಯುವಿಕೆಯ ಸೂಚ್ಯಾಂಕ ಸಂಗ್ರಹಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಇದೀಗ ಮುಂದಾಗಿದೆ.ಹಾಗಾದರೆ ತಪ್ಪಿದ್ದೆಲ್ಲಿ?
ಹಿನ್ನಡೆಗೆ ವರದಿಯ ಕನ್ನಡಿ:
ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆಯ ಕೂಗಿಗೆ ಸ್ಪಂದಿಸಿದ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಡಾ। ನಂಜುಂಡಪ್ಪ ಸಮಿತಿ ರಚಿಸಿತು. ರಾಜ್ಯಾದ್ಯಂತ ಸುತ್ತಾಡಿ, ಸಂಘ-ಸಂಸ್ಥೆ, ತಜ್ಞರು, ಜನಸಾಮಾನ್ಯರನ್ನು ಮಾತಾಡಿಸಿ, ಅಂಕಿ-ಸಂಖ್ಯೆಗಳನ್ನು ಕ್ರೋಢೀಕರಿಸಿ 2002ರಲ್ಲಿ ಅವರು ನೀಡಿದ ವರದಿ ಆ ವರೆಗೆ ಸರ್ಕಾರ ನಡೆಸಿದವರನ್ನು ನಿಬ್ಬೆರಗಾಗುವಂತೆ ಮಾಡಿತ್ತು.
ಅಭಿವೃದ್ಧಿಯ ಅಸಮಾನತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದರಾಬಾದ್ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ. ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದು ಸಮಿತಿ ಹೇಳಿತ್ತು. Comprehensive Composite Development Index (CCDI) ಹಾಗೂ Cumulative Deprivation Index (CDI) ಆಧಾರದಲ್ಲಿ ಈ ಹಿಂದುಳಿಯುವಿಕೆಯನ್ನು ನಿರ್ಧರಿಸಿತ್ತು. ಈ 114 ತಾಲೂಕುಗಳನ್ನು ಸಿಸಿಡಿಐ ಅಂಶಗಳ ಅನುಸಾರ ಮೂರು ಭಾಗಗಳಾಗಿ ವರ್ಗೀಕರಿಸಿ, ಸಿಸಿಡಿಐ ಅಂಶ 0.53 ರಿಂದ 0.79 ಕಡಿಮೆ ಇರುವ 39 ತಾಲೂಕು ಅತ್ಯಂತ ಹಿಂದುಳಿದ, 0.80 ರಿಂದ 0.88ಗಿಂತ ಕಡಿಮೆ ಇರುವ 40 ತಾಲೂಕು ಹಿಂದುಳಿದ ಹಾಗೂ 0.89 ರಿಂದ 0.99ಕ್ಕಿಂತ ಕಡಿಮೆ ಇರುವ 35 ತಾಲೂಕುಗಳು ಸಾಧಾರಣ ಹಿಂದುಳಿದ ತಾಲೂಕುಗಳೆಂದು ವರ್ಗೀಕರಿಸಿತ್ತು. 1.0ರಿಂದ 1.96 ವರೆಗೆ ಉಳಿದ 61 ತಾಲೂಕುಗಳನ್ನು ಸರಾಸರಿ ಅಭಿವೃದ್ಧಿ ಹೊಂದಿದ ತಾಲೂಕುಗಳು ಎಂದು ಗುರುತಿಸಲಾಗಿತ್ತು.
39 ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ 21 ತಾಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಬೆಂಗಳೂರು ವಿಭಾಗ- 11, ಬೆಳಗಾವಿ ವಿಭಾಗ- 05, ಮೈಸೂರು ವಿಭಾಗ- 02 ಇದ್ದವು. ಕಲ್ಯಾಣ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಒಂದೇ ಒಂದು ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಇರಲಿಲ್ಲ. ಅದೇ ಕಾಲಕ್ಕೆ ಮೈಸೂರು ವಿಭಾಗದಲ್ಲಿ ಇರುವ ಮೂರು ಜಿಲ್ಲೆಗಳಲ್ಲಿ (ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು) ಒಂದೇ ಒಂದು ತಾಲೂಕು ಹಿಂದುಳಿದ ಪಟ್ಟಿಯಲ್ಲಿ ಇರಲಿಲ್ಲ ಎನ್ನುವ ಕಟು ಸತ್ಯವನ್ನು ಡಾ। ನಂಜುಂಡಪ್ಪ ಮೊದಲ ಬಾರಿಗೆ ಬಯಲಿಗೆಳೆದಿದ್ದರು.
ವರ್ಷಕ್ಕೆ ₹2000 ಕೋಟಿ:
114 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಒಟ್ಟು ಎಂಟು ವರ್ಷಗಳ ಕಾಲಾವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿಯ ಕ್ರಿಯಾ ಯೋಜನೆ ಮತ್ತು ರಾಜ್ಯದಲ್ಲಿ ಅಸಮಾನತೆ ಹೋಗಲಾಡಿಸುವ ನೀಲ ನಕ್ಷೆ ಸಿದ್ಧಪಡಿಸಿತ್ತು. ಅದರಂತೆ 2003 ರಿಂದ 2011ರವರೆಗೆ ಎಂಟು ವರ್ಷ ಸರಕಾರ ಅಂದಿನ ಬಜೆಟ್ ಗಾತ್ರದ ಶೇ.11ರಷ್ಟು ಪ್ರಮಾಣದಂತೆ ₹16,000 ಕೋಟಿ ವಿಶೇಷ ಅನುದಾನ ನೀಡಬೇಕು ಮತ್ತು ಸಾಮಾನ್ಯ ಬಜೆಟ್ ಮೂಲಕ ₹15,000 ಕೋಟಿ ಅನುದಾನವನ್ನು
ನಿರ್ದಿಷ್ಟ ವಲಯಗಳಿಗೆ ಕಾಲಮಿತಿಯಲ್ಲಿ ವಿನಿಯೋಗಿಸುವಂತೆ ಸೂಚಿಸಿತ್ತು.
ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿಪಂ ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಮಹಿಳಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ವಲಯವನ್ನು ಗುರುತಿಸಲಾಗಿತ್ತು.
ಕಳೆದ 15 ವರ್ಷಗಳಿಂದ ಡಾ। ನಂಜುಂಡಪ್ಪ ವರದಿಯನ್ನು ಎಲ್ಲ ಸರಕಾರಗಳು ಬದ್ಧತೆ ಇಲ್ಲದೆ ಅನುಷ್ಠಾನ ಮಾಡಿರುವುದರಿಂದ ರಾಜ್ಯದಲ್ಲಿ ಇರುವ ತಾಲೂಕು -ತಾಲೂಕುಗಳ ನಡುವೆ, ಪ್ರದೇಶ- ಪ್ರದೇಶಗಳ ನಡುವೆ ಅಭಿವೃದ್ಧಿಯ ಅಸಮಾನತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಹಾಗಾಗಿ ಇಂದು ಮತ್ತೊಂದು ಸುತ್ತಿನ ಸಮೀಕ್ಷೆ ಆರಂಭವಾಗಿದೆ.