ಸಾರಾಂಶ
ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಉಡುಪಿ ರೋಟರಿ ಅಧ್ಯಕ್ಷೆ ದೀಪ ಭಂಡಾರಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಮುಂಬೈನ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಉಡುಪಿ ರೋಟರಿ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜ್ ಗಳ ಜಂಟಿ ಸಹಯೋಗದಲ್ಲಿ ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಕಾರ್ಯಾಗಾರವನ್ನು ಉಡುಪಿ ರೋಟರಿ ಅಧ್ಯಕ್ಷೆ ರೋಟರಿಯನ್ ದೀಪ ಭಂಡಾರಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕಾರ್ಯದರ್ಶಿ ಶುಭಶ್ರೀ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶ್ರೀಲತಾ ಆಗಮಿಸಿದ್ದರು.
ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ.ಆರ್. ಮತ್ತು ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು.ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿನಿ ಫ್ಲಾವಿಯ ಸ್ವಾಗತಿಸಿದರು. ಮಂಗಳೂರಿನ ಸೈಂಟ್ ಆಗ್ನೆಸ್ ಪಿಜಿ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ವಂದಿಸಿದರು. ಹಾಗೂ ರಚನ ರೂತ್ ಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಅದರ ಅಪಾಯದ ಕುರಿತಾಗಿ ಮೂಕಾಭಿನಯ ಮತ್ತು ಪ್ರಹಸನ ಪ್ರದರ್ಶಿಸಿದರು.ನಂತರ ಡಾ. ಪಿ .ವಿ ಭಂಡಾರಿ ಇವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಮಾತನಾಡಿದರು ಮತ್ತು ಡಾ. ದೀಪಕ್ ಮಲ್ಯ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಗೆಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು. 120ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.