ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡುವಂತೆ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯ

| Published : Jul 02 2024, 01:33 AM IST

ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡುವಂತೆ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲಿನಿಂದಲೂ ಗಣಿಗಾರಿಕೆಯನ್ನು ವಿರೋಧಿಸಿಕೊಂಡೇ ಬಂದಿದ್ದೇವೆ. ಒಮ್ಮೆ ಟ್ರಯಲ್ ಬ್ಲಾಸ್ಟ್ ವರದಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವುದು ಕಂಡುಬಂದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿಷೇಧಿಸಬೇಕು. ಕೆಆರ್‌ಎಸ್ ಸುತ್ತ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಸುತ್ತ ನಡೆಯುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡುವಂತೆ ರೈತಮುಖಂಡ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದರು.

ನಾವು ಗಣಿ ಮಾಲೀಕರ ಪರವಾಗಿ ಮಾತನಾಡುತ್ತಿಲ್ಲ. ಮೊದಲಿನಿಂದಲೂ ಗಣಿಗಾರಿಕೆಯನ್ನು ವಿರೋಧಿಸಿಕೊಂಡೇ ಬಂದಿದ್ದೇವೆ. ಒಮ್ಮೆ ಟ್ರಯಲ್ ಬ್ಲಾಸ್ಟ್ ವರದಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವುದು ಕಂಡುಬಂದಲ್ಲಿ ಸಂಪೂರ್ಣವಾಗಿ ಗಣಿಗಾರಿಕೆ ನಿಷೇಧಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಉಚ್ಛ ನ್ಯಾಯಾಲಯ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಸೂಚಿಸಿದೆ. ಆದರೆ, ಕೆಲವರು ರಾಜಕೀಯ ಕಾರಣಗಳಿಗೆ ಟ್ರಯಲ್ ಬ್ಲಾಸ್ಟ್‌ಗೆ ಅಡ್ಡಿಪಡಿಸುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರುವ ಮುನ್ನವೇ ಅದರ ಸಾಧಕ-ಬಾಧಕಗಳನ್ನು ಕಲ್ಪನೆ ಮಾಡಿಕೊಂಡು ಯಾವುದನ್ನೂ ತೀರ್ಮಾನಿಸಲಾಗುವುದಿಲ್ಲ. ಅದಕ್ಕಾಗಿ ಟ್ರಯಲ್ ಬ್ಲಾಸ್ಟ್‌ಗೆ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುವಂತೆ ಆಗ್ರಹಪಡಿಸಿದ್ದಾರೆ.

ಗೋಷ್ಠಿಯಲ್ಲಿ ರಾಮೇಗೌಡ, ಎಚ್.ಎಸ್.ಚಂದ್ರಶೇಖರ್, ಕೆಂಪರಾಜು, ನಾಗರತ್ನ, ಮಾಲಿಕ್ ಆವರ್ತಿ ಇತರರಿದ್ದರು.

ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಯಾವ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಸರ್ಕಾರಕ್ಕೆ ಕೆಆರ್‌ಎಸ್ ಅಣೆಕಟ್ಟು ಉಳಿಸಬೇಕೆಂಬ ಕಾಳಜಿ ಇಲ್ಲ. ಅಣೆಕಟ್ಟು ಸುರಕ್ಷತಾ ಕಾಯ್ದೆ ಜಾರಿಗೊಳಿಸದೆ, ಅಣೆಕಟ್ಟು ಸುರಕ್ಷತಾ ಸಮಿತಿಯನ್ನೂ ರಚಿಸದೆ ಗಣಿಲಾಭಿಗೆ ಮಣಿದು ಕೆಆರ್‌ಎಸ್‌ನ್ನು ಬಲಿಕೊಡುವುದಕ್ಕೆ ಮುಂದಾಗಿದೆ. ಜನಪ್ರತಿನಿಧಿಗಳು ಈ ವಿಷಯದಲ್ಲಿ ಮೌನವಾಗಿರುವುದನ್ನು ನೋಡಿದರೆ ಅವರೂ ಗಣಿಮಾಲೀಕರ ಪರವಾಗಿರುವಂತೆ ಕಂಡುಬರುತ್ತಿದ್ದಾರೆ. ರೈತಸಂಘ ಟ್ರಯಲ್ ಬ್ಲಾಸ್ಟ್ ವಿರುದ್ಧ ಗೋ-ಬ್ಯಾಕ್ ಚಳವಳಿಗೆ ಸಿದ್ಧವಾಗಿದೆ.- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ

ಇದೊಂದು ಭಂಡ ಸರ್ಕಾರ. ಭಂಡತನದಿಂದಲೇ ಆಡಳಿತ ನಡೆಸುವ ರಾಜಕೀಯ ನಾಯಕರಿಗೆ ಕೆಆರ್‌ಎಸ್ ಉಳಿವಿನ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ನಂತರವೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಉತ್ಸಾಹ ತೋರುತ್ತಿರುವ ಜನಪ್ರತಿನಿಧಿಗಳು ರೈತ ವಿರೋಧಿಗಳಾಗಿದ್ದಾರೆ. ೯೨ ವರ್ಷ ಹಳೆಯದಾದ ಅಣೆಕಟ್ಟೆಯ ಸಾಮರ್ಥ್ಯ ಪರೀಕ್ಷೆಗೆ ಹೊರಟಿರುವ ಇವರ ಧನದಾಹಿತ್ವಕ್ಕೆ ರೈತ ಸಮುದಾಯ ಮತ್ತು ಅಣೆಕಟ್ಟೆ ಬಲಿಯಾಗುವುದು ನಿಶ್ಚಿತ. ಟ್ರಯಲ್ ಬ್ಲಾಸ್ಟ್‌ನ್ನು ಈ ನೆಲದ ಪ್ರತಿಯೊಬ್ಬರೂ ವಿರೋಧಿಸಬೇಕು.

- ಲಿಂಗಪ್ಪಾಜಿ, ರೈತ ಮುಖಂಡರು

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 95.50 ಅಡಿ

ಒಳ ಹರಿವು – 9369 ಕ್ಯುಸೆಕ್

ಹೊರ ಹರಿವು – 518 ಕ್ಯುಸೆಕ್

ನೀರಿನ ಸಂಗ್ರಹ – 19.487 ಟಿಎಂಸಿ