ಪೊಲೀಸರಿಂದ ಅಮಾನವೀಯ ವರ್ತನೆ: ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್‌

| Published : Feb 01 2024, 02:06 AM IST

ಪೊಲೀಸರಿಂದ ಅಮಾನವೀಯ ವರ್ತನೆ: ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊರಗಿನ ಜನರನ್ನು ನಾವು ಯಾರೂ ಕರೆಸಿರಲಿಲ್ಲ. ಹೊರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿ ಸರ್ಕಾರವೇ ಗೂಂಡಾ ವರ್ತನೆ ಪ್ರದರ್ಶಿಸಿದೆ. ಕೆರಗೋಡು ಗ್ರಾಮಕ್ಕೆ ಕಪ್ಪುಚುಕ್ಕೆ ಬರುವಂತೆ ಮಾಡಿದೆ. ಬೆಳಗಿನ ಜಾವ 5 ಗಂಟೆಗೆ ಬಾಲಕನನ್ನು ಕರೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ಮೇಲೂ ಹಲ್ಲೆ ಮಾಡಿದ್ದಾರೆ. ಗ್ರಾಮಸ್ಥರು, ಮಕ್ಕಳು, ಮಹಿಳೆಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಮಾಯಕ ಜನರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್‌.ಎಸ್‌.ಇಂದ್ರೇಶ್‌ ಹಾಗೂ ಮುಖಂಡ ಅಶೋಕ್‌ ಜಯರಾಂ ಆರೋಪಿಸಿದರು.

ತಾಲೂಕಿನ ಕೆರಗೋಡು ಗ್ರಾಮಕ್ಕೆ ತೆರಳಿ ಲಾಠಿ ಪ್ರಹಾರದಿಂದ ಗಾಯಗೊಂಡಿರುವವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರ ಜೊತೆ ಚರ್ಚಿಸಿದ ಬಳಿಕ ಶ್ರೀಅಯ್ಯಪ್ಪಸ್ವಾಮಿ ದೇಗುಲದ ಆವರಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗ್ರಾಮದಲ್ಲಿ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರ ಜೊತೆ ಚರ್ಚೆ ಮಾಡಿದ್ದೇವೆ. ಗೌರಿಶಂಕರ ಸೇವಾ ಟ್ರಸ್ಟ್ ಪದಾಧಿಕಾರಿಗಳ ಜೊತೆಯೂ ಚರ್ಚಿಸಿ ಇಲ್ಲಿನ ಸತ್ಯಾಸತ್ಯತೆ ತಿಳಿದಿದ್ದೇವೆ. ಲಾಠಿ ಪ್ರಹಾರದಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದೇವೆ. ಭಯದಲ್ಲಿರುವರರಿಗೆ ಧೈರ್ಯ ತುಂಬಿದ್ದೇವೆ. ಹಿಂದಿನಿಂದ ಗ್ರಾಮದಲ್ಲಿ ಶಾಂತಿಯುತ ವಾತಾವರಣವಿತ್ತು. ಧ್ವಜದ ವಿಚಾರವಾಗಿ ಶಾಂತಿ ಸಭೆ ನಡೆಸಲು ಅವಕಾಶ ಕೊಡದೆ ಪೊಲೀಸರು ಈ ರೀತಿ ವರ್ತಿಸಿದ್ದಾರೆ ಎಂದು ದೂಷಿಸಿದರು.

ಹೊರಗಿನ ಜನರನ್ನು ನಾವು ಯಾರೂ ಕರೆಸಿರಲಿಲ್ಲ. ಹೊರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿ ಸರ್ಕಾರವೇ ಗೂಂಡಾ ವರ್ತನೆ ಪ್ರದರ್ಶಿಸಿದೆ. ಕೆರಗೋಡು ಗ್ರಾಮಕ್ಕೆ ಕಪ್ಪುಚುಕ್ಕೆ ಬರುವಂತೆ ಮಾಡಿದೆ. ಬೆಳಗಿನ ಜಾವ 5 ಗಂಟೆಗೆ ಬಾಲಕನನ್ನು ಕರೆದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ಮೇಲೂ ಹಲ್ಲೆ ಮಾಡಿದ್ದಾರೆ. ಗ್ರಾಮಸ್ಥರು, ಮಕ್ಕಳು, ಮಹಿಳೆಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪೊಲೀಸರ ಈ ವರ್ತನೆ ಖಂಡನೀಯ ಎಂದು ಕಿಡಿಕಾರಿದರು.

ಬ್ರಿಟಿಷರ ಪ್ರವೃತ್ತಿ ಕಾಂಗ್ರೆಸ್‌ನಿಂದ ಮುಂದುವರೆದಿದೆ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನವನ್ನೇ ನಡೆಸದೆ ದುಡುಕಿನ ನಿರ್ಧಾರ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸಿ, ಸೌಹಾರ್ದತೆ ಹಾಳು ಮಾಡಿ ಭಯದ ನೆರಳಿನಲ್ಲಿ ಜನರು ಬದುಕುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.