ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆಯಿಂದ ಅನ್ಯಾಯ

| Published : Sep 09 2024, 01:37 AM IST

ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆಯಿಂದ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಿಜೆಪಿಗೆ ನಾನು ಯಾವುದೇ ನಿಮಿಷದಲ್ಲೂ ಹೋಗಬಹುದು. ಆದರೆ ಒಂದು ಕುಟುಂಬದಿಂದ ಪಕ್ಷ ಹೊರಗೆ ಬರಬೇಕು, ಹೊಂದಾಣಿಕೆ ಮುಕ್ತ ಆಗಬೇಕು, ಸ್ವಜನ ಪಕ್ಷಪಾತ ದೂರ ಆಗಬೇಕು, ನೋವು ಅನುಭವಿಸಿದವರಿಗೆ ಸಮಾಧಾನ ಆಗುವಂತೆ ಶುದ್ದೀಕರಣ ಆಗಬೇಕು. ಈ ಬಗ್ಗೆ ನನಗೆ ಮಾತನಾಡಿಸಲು ಬಂದವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿಗೆ ನಾನು ಯಾವುದೇ ನಿಮಿಷದಲ್ಲೂ ಹೋಗಬಹುದು. ಆದರೆ ಒಂದು ಕುಟುಂಬದಿಂದ ಪಕ್ಷ ಹೊರಗೆ ಬರಬೇಕು, ಹೊಂದಾಣಿಕೆ ಮುಕ್ತ ಆಗಬೇಕು, ಸ್ವಜನ ಪಕ್ಷಪಾತ ದೂರ ಆಗಬೇಕು, ನೋವು ಅನುಭವಿಸಿದವರಿಗೆ ಸಮಾಧಾನ ಆಗುವಂತೆ ಶುದ್ದೀಕರಣ ಆಗಬೇಕು. ಈ ಬಗ್ಗೆ ನನಗೆ ಮಾತನಾಡಿಸಲು ಬಂದವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಕಾಂಗ್ರೆಸ್- ಬಿಜೆಪಿ ಮಧ್ಯೆ ಸಾಕಷ್ಟು ಹೊಂದಾಣಿಕೆ ಇದೆ. ಕಾಂಗ್ರೆಸ್ ಭಿಕ್ಷೆಯಿಂದ ನೀನು ಗೆದ್ದಿದ್ದೀಯಾ ಎಂದು ಡಿ.ಕೆ.ಶಿವಕುಮಾರ ವಿಜಯೇಂದ್ರನಿಗೆ ನೇರವಾಗಿಯೇ ಆಪಾದನೆ ಮಾಡಿದ್ದಾರೆ. ಇದರ ಅರ್ಥ ಕಾಂಗ್ರೆಸ್ ನಾಯಕರು ಯಡಿಯೂರಪ್ಪನವರ ಕುಟುಂಬದವರು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂಬುದನ್ನು ನಾಚಿಕೆ ಇಲ್ಲದೆ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದ ರಾಜ್ಯದಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಬಿಜೆಪಿಯಲ್ಲಿ ನಾನು ಕಂಡಿರಲಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.ಮುಡಾ ಹಗರಣ ಸಿಎಂ ಪತ್ನಿಗೆ ತೊಂದರೆ ಬೇಡ

ಸಿದ್ಧರಾಮಯ್ಯನವರ ಶ್ರೀಮತಿ ಗೌರಮ್ಮ ಇದ್ದಂಗೆ. ಯಾವುದೇ ತಂಟೆ ತಕಾರರಿಗೆ ಬರದೆ ಮನೆಯಲ್ಲಿರುವ ಹೆಣ್ಣುಮಗಳು. ಆ ತಾಯಿಗೆ ಯಾವುದೇ ತೊಂದರೆ ಆಗದಂತಗೆ ನೋಡಿಕೊಳ್ಳಪ್ಪ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸಿದ್ಧರಾಮಯ್ಯನವರು ಎಲ್ಲಿ ಹೇಳಿರುತ್ತಾರೋ ಅಲ್ಲಿ ಸಹಿ ಮಾಡಿರುತ್ತಾರೆ, ಆ ಯಮ್ಮಾ ಏನು ಗೊತ್ತಿಲ್ಲದೆ ಸಹಿ ಮಾಡಿರುತ್ತಾರೆ. ಆಕೆಗೆ ಮುಕ್ತಿ ಸಿಗಬೇಕು, ಇದರಲ್ಲಿ ಯಾವುದೇ ಅನ್ಯಾಯ ಆಗಬಾರದು ಎಂದು ನನ್ನ ಪ್ರಾರ್ಥನೆ ಎಂದರು.ಕಾಂಗ್ರೆಸ್‌ಗೆ ಮೈಮೇಲೆ ಜ್ಞಾನ ಇಲ್ಲ

ರಾಜ್ಯಪಾಲರು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಸಚಿವ ಸಂಪುಟ ಹೇಳುತ್ತಿದೆ. ಮುಡಾ ಹಗರಣದಲ್ಲಿ ಸಿದ್ರಾಮಯ್ಯನವರ ಬಗ್ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಆದರೆ ಬಿಜೆಪಿಯ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ನಾಲ್ವರ ಮೇಲೆ ಯಾಕೆ ಪ್ರಶಿಕೂಷನ್ ಗೆ ಆದೇಶ ಕೊಟ್ಟಿಲ್ಲ ಎಂದು ಎಲ್ಲರೂ ರಾಜಭವನಕ್ಕೆ ಹೋದರು. ಆಗ ರಾಜ್ಯಪಾಲರು ಒಂದೂ ಕೇಸ್ ನನ್ನ ಬಳಿ ಇಲ್ಲ ಎಂದರು. ಹೋಗುವಾಗ ಇವರಿಗೆ ಮೈಮೇಲೆ ಜ್ಞಾನ ಇರಲಿಲ್ಲವಾ? ಸಿಎಂ, ಡಿಸಿಎಂ, ಸಚಿವರಾಗೋದಕ್ಕೆ ಇವರು ಯಾವ ಮಟ್ಟಿಗೆ ಯೋಗ್ಯರು? ಕೇಸ್ ಇಲ್ಲದೇ ಇರುವವರ ಮೇಲೆ ಪ್ರಾಸಿಕ್ಯೂಷನ್‌ಗೆ ಹಾಕಿ ಎಂದು ಒತ್ತಾಯ ಮಾಡುತ್ತಾರೆ. ಇವರು ಮೈಮೇಲೆ ಜ್ಞಾನವೇ ಇಲ್ಲದೆ ಹೋಗಿದ್ದರು. ರಾಜ್ಯಪಾಲರು ಇವರಿಗೆ ಮುಖಕ್ಕೆ ಮಂಗಳಾರತಿ ಎತ್ತಿ ಕಳಿಸಿದರು ಎಂದು ವಾಗ್ದಾಳಿ ನಡೆಸಿದರು.ನಮ್ಮವರೇ ಮೋಸ ಮಾಡಿದರು

ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದೆ, ಬಳಿಕ ನನಗೆ ಕ್ಲೀನ್ ಚೀಟ್ ಸಿಕ್ಕಿತು. ಆಗ ನಮ್ಮ ಪಕ್ಷದ ನಾಯಕರೇ ನನಗೆ ಮೋಸ ಮಾಡಿದರು. ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿ ಇನ್ನೊಂದು ವಾರದಲ್ಲಿ ಈಶ್ವರಪ್ಪನವರನ್ನು ಮತ್ತೆ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಮಂತ್ರಿಮಂಡಲದಲ್ಲಿ 6 ಸೀಟ್ ಖಾಲಿ ಇದ್ದರೂ ನನಗೆ ಮಂತ್ರಿಸ್ಥಾನ ಕೊಡಲಿಲ್ಲ ಎಂದು ಬೇಸರಿಸಿದರು.ಸಿದ್ದರಾಮಯ್ಯ ಗೌರವ ಇದೇನಾ?

ಸಿಎಂ ಸಿದ್ಧರಾಮಯ್ಯನವರು ಕೋರ್ಟ್ ತೀರ್ಪಿಗೆ ಕೊಡುವ ಗೌರವ ಇದೇನಾ?. ಕೋರ್ಟ್ ನಮ್ಮ ಪರವಾಗಿದೆ, ನಮಗೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದು ಮೊದಲು ಹೇಳುತ್ತಿದ್ದವರು, ಇದೀಗ ಏನೇ ಆದೇಶ ಬಂದರೂ ರಾಜೀನಾಮೆ ಕೊಡಲ್ಲ ಎನ್ನುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಇದನ್ನು ನಾನು ಉಗ್ರವಾಗಿ ಖಂಡನೆ ಮಾಡುತ್ತೇನೆ ಎಂದರು.ಯತ್ನಾಳ ಧರಣಿ ಕೂತರು

ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ಸಕ್ಕರೆ ಕಾರ್ಖಾನೆ ಬಗ್ಗೆ ಧರಣಿ ಕೂತರು. ಆ ವೇಳೆ ಸಿಎಂ ಅವರು ಅನ್ಯಾಯ ಆಗದಂತೆ ಬೇಗನೇ ಎನ್‌ಓಸಿ ಕೊಡಿಸುತ್ತೇನೆ ಎಂದರು, ಇಂದಿನ ವರೆಗೂ ಕೊಟ್ಟಿಲ್ಲ. ಮತ್ತೆ ಅವರು ಧರಣಿ ಕೂರಬೇಕಾ? ಮುಖ್ಯಮಂತ್ರಿಗಳು ಈ ಕಡೆ ಗಮನ ಕೊಡಬೇಕು, ಈ ರೀತಿ ಸುಳ್ಳು ಹೇಳಬಾರದು ಎಂದು ಹೇಳಿದರು.ಬುಡಕ್ಕೆ ಬಂದಾಗ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ

ಯಾವಾಗ ಬುಡಕ್ಕೆ ಬಂತೋ ಆಗ ಸಿಎಂ ಸಿದ್ಧರಾಮಯ್ಯನವರು ಮೇಲಿಂದ ಮೇಲೆ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾರೆ. ಕುರುಬರ ದೇವರಾದ ದೇವರಗುಡ್ಡಕ್ಕೆ ಮೇಲೆ ಮೇಲೆ ಹೋಗಿ ಬರ್ತಿದಾರೆ ಯಾಕೆ?. ಸಂಕಟ ಬಂದಾಗ ವೆಂಕಟರಮಣ, ಹಿಂದೂ ದೇವರು ನಮ್ಮನ್ನ ಕಾಪಾಡುತ್ತೇನೋ ಎಂಬ ನಂಬಿಕೆ. ಅದಕ್ಕೂ ಮೊದಲು ಮೂಢನಂಬಿಕೆ ಎನ್ನುತ್ತಿದ್ದರು ಎಂದು ಟೀಕಿಸಿದರು.ಗಣಪತಿ ಕೂಡಿಸಲು ಅನುಮತಿ ಪಡೆಯಬೇಕು, ಪ್ರಸಾದವನ್ನು ತಿಂದು ನೋಡಬೇಕು, ಅಹಾರ ಇಲಾಖೆ ಎನ್‌ಓಸಿ ತೆಗೆದುಕೊಳ್ಳಬೇಕು ಎಂದು ನಿಯಮ ಮಾಡಿದ್ದಾರೆ. ಯಾವ ದೇಶದಲ್ಲಿದ್ದೇವೆ ನಾವು?. ಮುಸಲ್ಮಾನರು ಬಿರಿಯಾನಿ ತಿಂತಾರಲ್ಲಾ ಅದರ ಬಗ್ಗೆ ಕಡಿವಾಣ ಹಾಕುವ ಶಕ್ತಿ ಇದೆಯಾ?. ಮುಸಲ್ಮಾನರ ಸಂತೃಪ್ತಿ ಪಡಿಸಲು ಗಣಪತಿ ಪ್ರಸಾದಕ್ಕೆ ಅಡ್ಡ ಬರೋದು, ಹಿಜಾಬ್ ವಿಚಾರ ಹೇಳಿ ಪ್ರಶಸ್ತಿ ತಡೆಗಟ್ಟೋದು ಮಾಡುತ್ತಾರೆ. ಇನ್ನೂ ನೀವು ನಾಟಕ ಮಾಡೋದು ಬೇಡ, ನೀವು ನಂಬಿರುವ ಹಿಂದೂ ದೇವರು ಕಾಪಾಡಬೇಕು ಎಂಬುದಾದರೇ ನೀವು ಹಿಂದೂ-ಮುಸ್ಲಿಂ ಎಲ್ಲರನ್ನೂ ಸಮನಾಗಿ ನೋಡಿ ಎಂದು ಸಿದ್ಧರಾಮಯ್ಯನವರಿಗೆ ಸಲಹೆ ನೀಡಿದರು.ಬಾಕ್ಸ್‌

ಕಾಂಗ್ರೆಸ್ ಸರ್ಕಾರ ಬಿದ್ದು ಹೋಗತ್ತೆರಾಜ್ಯದಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲ, ಸಿದ್ಧರಾಮಯ್ಯನವರಿಗೆ ವಿಧಿಯಿಲ್ಲದೇ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟರ ಮಟ್ಟಿಗೆ ಉಳಿಯುತ್ತದೋ ಗೊತ್ತಿಲ್ಲ. ಸಿದ್ಧರಾಮಯ್ಯಗೆ ಬೇಕಾದವರಿಗೆ ಸಿಎಂ ಕೊಟ್ಟರೆ ಮಾತ್ರ ಅವರು ಸುಮ್ಮನಿರುತ್ತಾರೆ, ಇಲ್ಲದಿದ್ದರೇ ಕಾಂಗ್ರೆಸ್ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. 136 ಶಾಸಕರನ್ನು ಕೊಟ್ಟಾಗ ಇವರು ಮಾಡಬಾರದ ಅವ್ಯವಹಾರ ಮಾಡಿ ಸರ್ಕಾರವನ್ನೇ ಕಳೆದುಕೊಂಡ್ರು ಎಂದು ಆಪಾದನೆ ಹೊತ್ತುಕೊಳ್ಳಬಾರದು. ಸರ್ಕಾರ ಐದು ವರ್ಷ ಇರಲಿ, ಆದರೆ ನ್ಯಾಯಾಲಯಕ್ಕೆ ಗೌರವ ಕೊಡಬೇಕು ಎಂಬುದು ನನ್ನ ಒತ್ತಾಯ ಎಂದರು.

ಕೋಟ್‌ಆರೋಪ ಬಂದಾಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಆರೋಪ ಮುಕ್ತನಾದ ಮೇಲೆ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಬೇಕಿತ್ತು. ಆದರೆ ಯಾವುದೇ ಪರಿಸ್ಥಿತಿ ಬಂದರೂ ರಾಜೀನಾಮೆ ಕೊಡಲ್ಲ ಎನ್ನುತ್ತಿದ್ದಾರೆ. ಮೇಲಾಗಿ ನಾವೆಲ್ಲರೂ ಸಿದ್ಧರಾಮಯ್ಯನವರ ಜೊತೆಗಿರುತ್ತೇವೆ ಎಂದು ಸಚಿವರು, ಶಾಸಕರು ಮೇಲ್ನೋಟಕ್ಕೆ ಮಾತ್ರ ಹೇಳುತ್ತಿದ್ದಾರೆ. ಬೆಂಬಲದ ನಾಟಕ ಆಡುತ್ತಿದ್ದಾರೆ, ಒಳಗೊಳಗೆ ಎಲ್ಲರಿಗೂ ಸಿಎಂ ಸೀಟ್‌ಗೆ ಹೋಗೋಣಾ ಅಂತ ಕಾಯುತ್ತಿದ್ದಾರೆ.ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ