ಮಡಿವಾಳ ಸಮಾಜಕ್ಕೆ ಸಿದ್ದರಾಮಯ್ಯರಿಂದ ಅನ್ಯಾಯ: ಮಾದುರಾಜು ಆರೋಪ

| Published : Jan 04 2025, 12:34 AM IST

ಮಡಿವಾಳ ಸಮಾಜಕ್ಕೆ ಸಿದ್ದರಾಮಯ್ಯರಿಂದ ಅನ್ಯಾಯ: ಮಾದುರಾಜು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಮ್ಮ ಸಮಾಜದ ಯಾರನ್ನಾದರೂ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಚುನಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದೆವು. ಆದರೆ, ಈವರೆಗೂ ನಮ್ಮ ಜನಾಂಗದ ಯಾರನ್ನೂ ನೇಮಿಸಲಿಲ್ಲ. ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತಾವು ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿವಾಳ ಸಮಾಜದ ಯಾರೊಬ್ಬರನ್ನೂ ಶಾಸಕರನ್ನಾಗಿ ಮಾಡದೆ, ನಮ್ಮ ಜನಾಂಗವನ್ನು ಪ.ಜಾತಿಗೆ ಸೇರಿಸಲು ಶಿಫಾರಸ್ಸು ಮಾಡದೆ ಅನ್ಯಾಯ ಎಸಗಿದ್ದಾರೆ ಎಂದು ಮೈಸೂರು ಜಿಲ್ಲಾ ವೀರ ಮಡಿವಾಳರ ಜಾಗೃತಿ ಯುವ ಬಳಗದ ಅಧ್ಯಕ್ಷ ಮಾದುರಾಜು ಮಡಿವಾಳ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಡಿವಾಳರ ಜನ ಸಂಖ್ಯೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಲಾಗಿದೆ. 2023ರ ವರುಣ ವಿಧಾನಸಭಾ ಕ್ಷೇತ್ರದ ಮಡಿವಾಳರ ಜನಸಂಖ್ಯೆ ಮಾಹಿತಿ ಸಂಗ್ರಹಣೆಗೆ ಸಮಾವೇಶ ಆಯೋಜಿಸಿ, ಪಡಿತರ ಚೀಟಿ ಪಡೆದು, ನಿಖರ ಮಾಹಿತಿಯೊಂದಿಗೆ ಜಾಗೃತಿ ಸಮಾವೇಶ ಆಯೋಜಿಸಿ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೂಲಕವೇ 1600 ಕುಕ್ಕರ್‌ ಮತ್ತು 374 ಐರನ್‌ ಬಾಕ್ಸ್‌ ವಿತರಿಸುವ ಮೂಲಕ ವರುಣ ವಿಧಾನಸಭಾ ಕ್ಷೇತ್ರದ 6,954 ಮತದಾರರು ಇರುವುದು ತಿಳಿಯಿತು ಎಂದರು.

ನಮ್ಮ ಸಂಘಟನೆಯಿಂದ ಕ್ಷೇತ್ರದಲ್ಲಿ ಮಡಿವಾಳರ ಸಂಖ್ಯೆ 8 ರಿಂದ 10 ಸಾವಿರ ಮಂದಿ ಇದ್ದಾರೆ. ನಮ್ಮ ಸಮಾಜದ ಮೇಲೆ ಆಗುತ್ತಿರುವ ಶೋಷಣೆ, ಮೂಲಭೂತ ಸೌಲಭ್ಯ ಹಾಗೂ ರಾಜಕೀಯ ಸ್ಥಾನಮಾನ ಪಡೆಯಬೇಕಾದರೆ ನಮ್ಮ ಸಮಾಜದ ಎಷ್ಟು ಮತದಾರರರು ಇದ್ದಾರೆ ಎಂಬುದು ತಿಳಿಯುವುದು ಮುಖ್ಯ. ಆದ್ದರಿಂದ ನಮ್ಮ ಬಳಗವು ಜನಸಂಖ್ಯೆ ಮಾಹಿತಿ ಪಡೆಯಲು ತೀರ್ಮಾನಿಸಿದೆ ಎಂದರು.

ಈ ಹಿಂದೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಮ್ಮ ಸಮಾಜದ ಯಾರನ್ನಾದರೂ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಚುನಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದೆವು. ಆದರೆ, ಈವರೆಗೂ ನಮ್ಮ ಜನಾಂಗದ ಯಾರನ್ನೂ ನೇಮಿಸಲಿಲ್ಲ. ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತಾವು ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮಡಿವಾಳ ಸಂಘದ ಅಧ್ಯಕ್ಷ ಚೆನ್ನಕೇಶವ ಮಾತನಾಡಿ, ಮಲ, ಮೂತ್ರ ತೆಗೆಯುವವರು ಪರಿಶಿಷ್ಟ ಜಾತಿಯವರಾದ ಮೇಲೆ ಮಲ ಮೂತ್ರದ ಬಟ್ಟೆ ತೊಳೆಯುವವರು ಪರಿಶಿಷ್ಟರಲ್ಲವೇ?, ಯಡಿಯೂರಪ್ಪ ಅವರು ಅಧಿಕಾರದಿಂದ ಇಳಿದ ಮೇಲೆ ನಮ್ಮ ಸಮಾಜವನ್ನು ಪ.ಜಾತಿಗೆ ಸೇರಿಸಬೇಕು ಎಂಬ ಒತ್ತಾಯ ನೆನಗುದಿಗೆ ಬಿದ್ದಿದೆ. ಕೂಡಲೇ ನಮ್ಮ ಸಮಾಜವನ್ನು ಪ.ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಳಗದಿಂದ ಹೊರತರಲಾದ 2025ರ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಸಂಘದ ವೆಂಕಟರಾಜು, ಶ್ರೀನಿವಾಸ್‌, ಸಿದ್ದಪ್ಪಾಜಿ, ಮನು, ರವಿಕುಮಾರ್‌, ದುದ್ದಗೆರೆ ಶಿವಣ್ಣ, ಕೆಂಪಶೆಟ್ಟಿ ಮೊದಲಾದವರು ಇದ್ದರು.