ಸಾರಾಂಶ
ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಅನುದಾನ, ಯೋಜನೆಗಳನ್ನು ನೀಡದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ನಗರದ ಬ್ರಹ್ಮಗಿರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಿಜೆಪಿ ನೇತೃತ್ವ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಲಾರಂಭಿಸಿದ ನಂತರ ಬಡತನದಲ್ಲಿ ಭಾರತ ವಿಶ್ವದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ. ನಮ್ಮ ದೇಶದ ಅಕ್ಕಪಕ್ಕದ ದೇಶಗಳು ನಮಗಿಂತಲೂ ಉತ್ತಮ ಸ್ಥಾನದಲ್ಲಿವೆ. ನಿರುದ್ಯೋಗದಲ್ಲಿ 36ನೇ ಸ್ಥಾನದಿಂದ 83ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಕೇಂದ್ರ ಸರ್ಕಾರದ ದುರಾಡಳಿತವೇ ಕಾರಣ ಎಂದು ಆರೋಪಿಸಿದರು.
ಕೇಂದ್ರ ಬಜೆಟ್‌ನಲ್ಲಿ ಶೇ.41ರಂದು ಮೊತ್ತವನ್ನು ರಾಜ್ಯಗಳಿಗೆ ಅನುದಾನ ನೀಡುವುದಕ್ಕೆ ಮೀಸಲಿಡಬೇಕು, ಆದರೆ ಈ ಬಾರಿ ಶೇ.32 ಮಾತ್ರ ಮೀಸಲಿಡಲಾಗಿದೆ. ಅದರಲ್ಲೂ ಹೆಚ್ಚಿನ ಅನುದಾನವನ್ನು ತನ್ನ ಮಿತ್ರ ಪಕ್ಷಗಳ ಸರ್ಕಾರವಿರುವ ಆಂಧ್ರ ಮತ್ತು ಬಿಹಾರಕ್ಕೆ ನೀಡಲಾಗಿದೆ. ವಿಪಕ್ಷಗಳಿರುವ ರಾಜ್ಯಗಳಿಗೆ ಅನುದಾನ ನೀಡದೇ ಘೋರ ಅನ್ಯಾಯ ಮಾಡಲಾಗಿದೆ ಎಂದರು.ನಮ್ಮ ರಾಜ್ಯದಲ್ಲಿ 17 ಮಂದಿ ಬಿಜೆಪಿ ಮತ್ತು 2 ಮಂದಿ ಜೆಡಿಎಸ್ ಸಂಸದರಿದ್ದಾರೆ. ಅವರಲ್ಲಿ 5 ಮಂದಿ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ, ಆದರೂ ಬಜೆಟ್ ರಾಜ್ಯಕ್ಕೆ ಅನುದಾನ, ಯೋಜನೆಗಳು ಸಿಕ್ಕಿಲ್ಲ ಎಂದರೆ ಇದು ನಮ್ಮ ಸಂಸದರ ವಿಫಲತೆಯನ್ನು ತೋರಿಸುತ್ತಿದೆ ಎಂದವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ರಾಜ್ಯ ಕಾಂಗ್ರೆಸ್ ಹಿಂ.ವರ್ಗಗಳ ಘಟಕ ಅಧ್ಯಕ್ಷ ಡಿ.ಆರ್.ರಾಜು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಪಕ್ಷದ ನಾಯಕರಾದ ವೆರೋನಿಕಾ ಕರ್ನೆಲಿಯೋ, ಅಮೃತ್ ಶೆಣೈ, ಕೀರ್ತಿ ಶೆಟ್ಟಿ, ಮುರಳಿ ಶೆಟ್ಟಿ, ಹರೀಶ್ ಕಿಣಿ, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ರೆನೋಲ್ಡ್ ಪ್ರವೀಣ್ ಕುಮಾರ್, ಸುರೇಶ್ ಶೆಟ್ಟಿ ಬನ್ನಂಜೆ ಮುಂತಾದವರು ಭಾಗವಹಿಸಿದ್ದರು.