ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ಅನ್ಯಾಯ

| Published : Oct 27 2024, 02:22 AM IST

ಸಾರಾಂಶ

ಜೋಳ ತಿನ್ನಲು ಅಲ್ಲ, ಕೈಯಲ್ಲಿ ಹಿಡಿಯಲು ಕೂಡಾ ಯೋಗ್ಯವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ

ಗದಗ: ಗದಗ ನಗರ ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸಕ್ತ ತಿಂಗಳು ಪಡಿತರ ಕಾರ್ಡ್‌ದಾರರಿಗೆ ವಿತರಣೆ ಮಾಡಲು ಪೂರೈಕೆ ಮಾಡಿರುವ ಜೋಳ ಅತ್ಯಂತ ಕಳಪೆಯಾಗಿದೆ. ಪೂರೈಕೆಯಾಗಿರುವ ಜೋಳ ತಿನ್ನಲು ಅಲ್ಲ, ಕೈಯಲ್ಲಿ ಹಿಡಿಯಲು ಕೂಡಾ ಯೋಗ್ಯವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ರೀತಿ ಕಳಪೆ ಜೋಳ ಪೂರೈಕೆ ಮಾಡಿದ ಪ್ರಕರಣ ಜಿಲ್ಲೆಯ ಕೋಟುಮಚಗಿ ಗ್ರಾಮದಲ್ಲಿ ಮೊದಲು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ರೀತಿಯ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವು. ಗದಗ ನಗರದ ರಾಜೀವಗಾಂಧಿ ನಗರ ಸೇರಿದಂತೆ ವಿವಿಧೆಡೆ ಈ ರೀತಿಯ ಸಮಸ್ಯೆಗಳ ಕಂಡು ಬಂದಿವೆ.

ರಿಯಾಲಿಟಿ ಚೆಕ್: ಧೂಳು, ಕಸ, ಕಡ್ಡಿ ಹುಳು ತುಂಬಿದ ಜೋಳ ಪೂರೈಕೆಯಾಗಿರುವ ಕುರಿತು ''''ಕನ್ನಡಪ್ರಭ'''' ರಿಯಾಲಿಟಿ ಚೆಕ್ ವೇಳೆ ಕಳಪೆ ಜೋಳ ಕಂಡುಬಂದಿದೆ. ಗದಗ ನಗರ, ಗ್ರಾಮಾಂತರ ವಿಭಾಗದ ಕೆಲವು ಪಡಿತರ ಅಂಗಡಿಗಳಲ್ಲಿಯೂ ಇಂತಹ ಜೋಳ ಪೂರೈಕೆಯಾಗಿರುವುದು ಪತ್ತೆಯಾಗಿದೆ. ಈಗಾಗಲೇ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಒದ್ದಾಡುತ್ತಿರುವ ಫಲಾನುಭವಿಗಳು ಕಳಪೆ ಜೋಳ ಪೂರೈಕೆಯಿಂದ ಮತ್ತಷ್ಟು ರೋಸಿ ಹೋದ ಘಟನೆ ಅಲ್ಲಲ್ಲಿ ಕಂಡು ಬಂತು.

ಪ್ರತಿ‌ ತಿಂಗಳು ಚಲೊ ಇರ್ತಿತ್ತು.. ಈ ತಿಂಗಳು ಹಿಂಗ ಬಂದೇತಿ, ಈ ಜ್ವಾಳಾ ತಿಂದ್ರ ದವಾಖಾನಿಗೆ ಅಡ್ಯಾಡ್ಬೇಕು, ಇಂಥವು ಕಳಸ್ತಾರ ಅಂದ್ರ ಏನ್ ಹೇಳ್ಬೇಕ್ರೀ? ಇವುಗಳನ್ನು ತಿಂದ್ರೆ ಹೊಟ್ಟೆ ನೋವು ಬರುತ್ತದೆ ಎಂದು ಪಡಿತರ ಅಂಗಡಿಗಳ ಮುಂದೆ ನಿಂತಿದ್ದ ಹಲವಾರು ಹೇಳಿದರು.

ಉತ್ತರ ಕರ್ನಾಟಕದ ಜನರಿಗೆ ಜೋಳ ಕೊಡ್ತೇವೆ ಅಂತಾ ಸರ್ಕಾರ ಹೇಳುತ್ತದೆ. ಆ ಜೋಳ ಕೊಡುವ ಮುಂಚೆ ಅದು ಯೋಗ್ಯವಾಗಿದೆಯಾ ಎಂದು ಪರಿಶೀಲಿಸಬೇಕು. ಪಡಿತರ ತೆಗೆದುಕೊಳ್ಳುವವರು ಬಡವರು ಹೇಗಾದರೂ ಇದ್ದರೂ ತಿನ್ನುತ್ತಾರೆ ಎಂದು ಕಳಪೆ ಆಹಾರ ಪೊರೈಕೆ ಮಾಡಿದರೆ ಹೇಗೆ? ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಭಾಗದಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿರುವುದಕ್ಕೆ ಕಳಪೆ ಆಹಾರ ಪೂರೈಕೆ ಮಾಡಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದ್ದಾರೆ.