ಜೋಯಿಡಾ:

ತಾಲೂಕಿನ ಮುಡಿಯೆ ಗ್ರಾಮದ ವಿದ್ಯಾರ್ಥಿನಿ ಪ್ರಜಿತಾ ಪ್ರಕಾಶ್ ವೇಳಿಪ ಸಾವಿನ ಬಗ್ಗೆ ಕುಣಬಿ ಸಮಾಜದೊಂದಿಗೆ ಸಭೆ ನಡೆಸಿ ನಂತರ ಮನವಿ ಸ್ವೀಕರಿಸಿದ ಶಾಸಕ ಆರ್.ವಿ. ದೇಶಪಾಂಡೆ ಯಾವುದೇ ಕಾರಣಕ್ಕೂ ಕುಟುಂಬಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.

ಧಾರವಾಡ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತನಾಡಿ ತನಿಖೆ ಚುರುಕುಗೊಳಿಸಲು ಸೂಚಿಸಿದ್ದಾರೆ.

ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ್ ಗಾವಡಾ ಮಾತನಾಡಿ, ಬುಡಕಟ್ಟು ಕುಣಬಿ ಹಿಂದುಳಿದ ಜನಾಂಗವಾಗಿದೆ. ನಾಯಕತ್ವ, ಸಂಘಟನೆ ಇಲ್ಲ. ಸಮಾಜದಲ್ಲಿ ಇಂತಹ ಘಟನೆಗಳು ನಡೆದಾಗ ಒಂದಾಗಿ ಹೋರಾಟ ಮಾಡಬೇಕು. ಈ ಪ್ರಕರಣದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿತರಾದರು ನಿಷ್ಪಕ್ಷಪಾತ ತನಿಖೆ ನಡೆಸಿ ಬಂಧಿಸಬೇಕು ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ತನಿಖೆಗೆ ಸರಕಾರ ಸಂಪೂರ್ಣ ಬೆಂಬಲ ನೀಡಲಿದೆ. ನನ್ನ ಕ್ಷೇತ್ರದಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಸ್ಥಳೀಯವಾಗಿ ಶಿಕ್ಷಣಕ್ಕೆ ಉತ್ತಮ ವಾತಾವರಣ ಇದೆ. ಇಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಇದೆ ಆದರೂ ಕೆಲವರು ಈ ಸುಂದರ ಪರಿಸರ ಬಿಟ್ಟು ಸಿಟಿಗೆ ಯಾಕೆ ಹೋಗುತ್ತಾರೆ ತಿಳಿಯುತ್ತಿಲ್ಲ. ಎಲ್ಲೇ ಕಲಿಯಲಿ ನಮ್ಮ ಆಕ್ಷೇಪ ಇಲ್ಲ ಎಂದು ಮೃತ ವಿಧ್ಯಾರ್ಥಿನಿ ತಂದೆ ಪ್ರಕಾಶ್ ವೇಳಿಪ ಗೆ ಧೈರ್ಯ ನೀಡಿದರು.


ಈ ಸಂದರ್ಭ ಗೋವಾ ಮಾಜಿ ಶಾಸಕ ಪ್ರಸಾದ ಗಾಂವ್ಕರ್, ಕುಣಬಿ ಸಮಾಜ ಜಿಲ್ಲಾ ಅಧ್ಯಕ್ಷ ಸುಭಾಷ್ ಗಾವಡಾ, ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ಕಾರ್ಯದರ್ಶಿ ದಯಾನಂದ ಕುಮಗಾಳಕ, ಪ್ರಮುಖರಾದ ಮಾಬಳು ಕುಂಡಲಕರ, ಪ್ರಸನ್ನ ಗಾವಡಾ, ದಿವಾಕರ ಕುಂಡಲಕರ, ದಯಾನಂದ ನಾಯ್ಕ, ಬುಧೊ ಕಾಲೇಕರ, ಸುಭಾಷ್ ಮಿರಾಶಿ, ಸುರೇಶ್ ಗಾವಡಾ, ಸುನಿಲ್ ಗಾವಡಾ ಸಿಸೈ ಮುಂತಾದವರು ಇದ್ದರು.