ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಸವಾದಿ ಶರಣರ ತತ್ವಗಳನ್ನು ಪಾಲಿಸುವುದರಿಂದ ನಿಜ ವ್ಯಕ್ತಿತ್ವದ ಅರಿವು ಉಂಟಾಗುತ್ತದೆ. ಅಂತರಂಗದ ಅರಿವು ಜಾಗೃತಿಯಾಗುತ್ತದೆ. ಭವ-ಬಂಧನಗಳನ್ನು ಮೀರಿದಂಥ ಆಧ್ಯಾತ್ಮಿಕ ಸಿರಿ ದೊರೆಯುತ್ತದೆ. ಇದರಿಂದ ಬದುಕು ದಿವ್ಯವಾಗುತ್ತದೆ, ಭವ್ಯವಾಗುತ್ತದೆ ಎಂದು ಶೀಲ ಸಂಪಾದನಾ ಮಠದ ಪೀಠಾಧ್ಯಕ್ಷ ಡಾ.ಸಿದ್ಧಲಿಂಗ ಶ್ರೀಗಳು ಹೇಳಿದರು.ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್ ವತಿಯಿಂದ ಶುಕ್ರವಾರ ಸಂಜೆ ಶಂಕರಘಟ್ಟ ಸಮೀಪದ ಗೋಣಿಬೀಡಿನ ಶೀಲಸಂಪಾದನಾ ಮಠದಲ್ಲಿ ಹಮ್ಮಿಕೊಂಡಿದ್ದ ಅನುಭಾವ ಸಂಗಮ-100 ಶತಮಾಸೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕಲ್ಯಾಣದ ಬಸವ ಬೆಳಕು ಜ್ಯೋತಿಗೆ ಭವ್ಯ ಸ್ವಾಗತ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಮನಸ್ಸಿನಲ್ಲಿ ಅಡಗಿರುವ ದುರ್ಗುಣ ದೂರ ಮಾಡಿ ಸದ್ಗುಣಗಳನ್ನು ಮೈಗೂಡಿಸುವುದು ಅನುಭಾವ ಸಂಗಮದ ಮೂಲ ಉದ್ದೇಶವಾಗಿದೆ. ಸದ್ಗುಣಗಳಿಂದ ಕೂಡಿದ ಆಂತರಿಕ ವಿಕಾಸದಿಂದ ಬದುಕಿಗೆ ನೆಮ್ಮದಿ ಹಾಗೂ ಜೀವನದ ಉನ್ನತಿ ಸಾಧ್ಯ ಎಂದರು.ಮನುಷ್ಯನಲ್ಲಿ ವಿಕಾಸ ಹಾಗೂ ಅಭಿವೃದ್ಧಿ ಹೊಂದಬೇಕು ಎನ್ನುವ ಅಪೇಕ್ಷೆ ಸಹಜ. ನಿರ್ಜಿವ ವಸ್ತುಗಳಿಂದ ವಿಕಾಸ ಹೊಂದುವುದು ಸಾಧ್ಯವಿಲ್ಲ. ಮನಸ್ಸಿನಲ್ಲಿ ಅಡಗಿರುವ ಕಲ್ಮಶಗಳು ದೂರವಾದಾಗ ನಿಜವಾದ ಅಭಿವೃದ್ಧಿ ಮತ್ತು ಬದಲಾವಣೆ ಸಾಧ್ಯ. ಸಿಟ್ಟು, ಲೋಭಗಳಿಂದ ದೂರವಾಗಲು ಸದ್ಗುಣಗಳ ಪ್ರವೇಶ ಅವಶ್ಯ. ಇದರಿಂದ ಅಂತರಂಗ ಮತ್ತು ಬಹಿರಂಗದ ಶುದ್ಧಿ ಕಾಣುತ್ತೇವೆ ಎಂದು ತಿಳಿಸಿದರು.
ಬಸವಕಲ್ಯಾಣದಿಂದ ಶ್ರೀ ಮಠಕ್ಕೆ ಆಗಮಿಸಿದ ಬಸವ ಜ್ಯೋತಿಯನ್ನು ಹಣತೆಯೊಂದಿಗೆ ಹಾಗೂ ಸಕಲ ಕಲಾ ತಂಡಗಳು ಮೆರವಣಿಗೆಯ ಮೂಲಕ ಭಕ್ತಿ ಪೂರ್ವಕವಾಗಿ ಬರ ಮಾಡಿಕೊಳ್ಳಲಾಯಿತು.ತಾವರೆಕೆರೆ ಶಿಲಾ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ತುಮಕೂರು ಸಿದ್ಧರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿ, ಶಾಸಕ, ಕೆ.ಆರ್‍ಐಡಿಎಲ್ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ, ವಿಧಾನ ಪರಿಷತ ಮಾಜಿ ಸದಸ್ಯ ಎಸ್. ರುದ್ರೇಗೌಡ, ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಕಾಳೇನಹಳ್ಳಿ ಶ್ರೀ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಸ್ಪಿರಿಚ್ಯುಯಲ್ ಫೌಂಡೇಷನ್ ಕಾರ್ಯಾಧ್ಯಕ್ಷ ಎಸ್. ದಯಾಶಂಕರ್, ಕುರಿಕೋಟದ ಸಂಗಣ್ಣ ಎಂ. ಚಿಲಶೆಟ್ಟಿ, ಶಿವರಾಜ್ ಎ. ಗೌಡಪ್ಪಗೊಳ್, ಚನ್ನವೀರಪ್ಪ ಸಲಗಾರ್, ಶಾಂತಲಿಂಗ ಚಿಲ ಶೆಟ್ಟಿ, ವಿಘ್ನೇಶ್ವರ ವಿ. ಸೊಲ್ಲಾಪುರ, ತಾವರಘಟ್ಟ ಕಂಬದಾಳ್ ಹೊಸೂರು ಹಾಗೂ ನಿಂಗನಮನೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಉಪಾಧ್ಯಕ್ಷರು, ಸದ್ಯಸರು ಮತ್ತಿತರರಿದ್ದರು.