ಮೋಸದ ಜಾಲಕ್ಕೆ ಸಿಲುಕಿ 20ಕ್ಕೂ ಹೆಚ್ಚು ಜನರು ಲಕ್ಷಾಂತರ ರು. ನಷ್ಟ

ಬಿಜಿಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ದೂರದಲ್ಲೆಲ್ಲೋ ಕೇಳಿ ಬರುತ್ತಿದ್ದ ಆನ್‌ಲೈನ್ ವಂಚನೆಯ ಸದ್ದು ತಾಲೂಕಿಗೂ ಮೆಲ್ಲನೆ ಕಾಲಿರಿಸಿದೆ. ಪರಿಣಾಮ ಅವರು ಹೆಣೆದ ಮೋಸದ ಜಾಲಕ್ಕೆ ಸಿಲುಕಿ 20ಕ್ಕೂ ಹೆಚ್ಚು ಜನರು ಲಕ್ಷಾಂತರ ರು. ಕಳೆದುಕೊಂಡು ಮಮ್ಮಲ ಮರುಗುವಂತಾಗಿದೆ.

ಬದಲಾದ ಕಾಲ ಘಟ್ಟದಲ್ಲಿ ತಂತ್ರಜ್ಞಾನವೂ ವೇಗವಾಗುತ್ತಿದೆ. ಪ್ರತಿಯೊಬ್ಬರ ಕೈಲಿ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಸೇರಿ ಇಂಟರ್‌ನೆಟ್ ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಇದರೊಟ್ಟಿಗೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ತಾಲೂಕಿನಲ್ಲಿ ಹಲವು ಅಮಾಯಕರು ವಂಚನೆಗೆ ಬಲಿಯಾಗಿ ಲಕ್ಷಾಂತರ ರು. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ವಂಚಕರು ಬೇರೆಲ್ಲೂ ಕುಳಿತು ಪೋನ್ ಕರೆಗಳ ಮೂಲಕ ಬ್ಯಾಂಕ್ ಇ-ಕೆವೈಸಿ ಹೊಸದಾಗಿ ಹೆಸರು ನೋಂದಣಿ, ಪಾರ್ಟ್ ಟೈಂ ಜಾಬ್, ಮೊಬೈಲ್‌ ಸಂಖ್ಯೆ ಅಪ್‌ಡೇಟ್‌, ಬೆಸ್ಕಾಂ, ತಕ್ಷಣಕ್ಕೆ ಸಾಲ, ಮನೆಯ ನವೀಕರಣ,ವೈಯಕ್ತಿಕ ಸಾಲ, ಖಾತೆ ಮರು ಇ ಕೆವೈಸಿ ಸೇರಿ ಹತ್ತು ಹಲವು ಸಂದೇಶಗಳ ಮೂಲಕ ಜನರನ್ನು ವಂಚಿಸುತ್ತಿರುವುದು ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡರೂ ಕಳ್ಳರ ಕೈಚಳಕದಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಹಲವು ರೂಪ ಪಡೆದುಕೊಳ್ಳುತ್ತಿರುವ ವಂಚನೆಯ ಜಾಲ ಹಲವು ಅಮಾಯಕರು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇನ್ನಾದರೂ ಸಾರ್ವಜನಿಕರು ವಂಚಕರ ಕುರಿತು ಜಾಗೃತರಾಗಬೇಕು. ಒಟಿಪಿ ಸೇರಿದಂತೆ ಇನ್ನಿತರೆ ಬ್ಯಾಂಕಿನ ನಂಬರ್‌ಗಳು ಇತರರಿಗೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎನ್ನುವುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ.

ಎರಡು ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ವಂಚನೆ:

ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ 10 ಲಕ್ಷಕ್ಕೂ ಹೆಚ್ಚು ವಂಚನೆಯಾಗಿದೆ. ಯಾರಾಪೋತ ಜೋಗಿಹಳ್ಳಿ 21,075, ಮುಬಾರಕ್ ಮೊಹಲ್ಲಾ 50 ಸಾವಿರ, ಕೋನಸಾಗರ 44,358, ದೇವಸಮುದ್ರ 95,500,

ಯರೇನಹಳ್ಳಿ 100,899, ಬಿಜಿಕೆರೆ 6,900, ಕೊಂಡ್ಲ ಹಳ್ಳಿ 8,800,ಪವನ್ ಕುಮಾರ್ 1,75,400, ಕೋನಸಾಗರ 72200, ಕೋನಸಾಗರ 1,40,000, 86,500, ತುಮಕೂರ್ಲಹಳ್ಳಿ 11,000, ಕೊಂಡ್ಲಹಳ್ಳಿ 7,400,ಬೈರಾಪುರ 5,800, ಹಿರೇಕೆರೆಹಳ್ಳಿ ಹೊನ್ನೂರ ಸ್ವಾಮಿ 2750, ಕೊಂಡ್ಲಹಳ್ಳಿ 5000, ಕೊಂಡ್ಲಹಳ್ಳಿ 25,000, ಮಾರುತಿ ಬಡಾವಣೆ , 26,000, ನೇರ್ಲಹಳ್ಳಿ 15000, ನೇರ್ಲ ಹಳ್ಳಿ 30000, ಮೊಳಕಾಲ್ಮೂರು 50,000, ಡಿ.ಎಸ್.ಮಂಜುನಾಥ 4,32,860 ರೂಗಳು ವಂಚನೆಯ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಜಾಗೃತಿ ಅಗತ್ಯ. ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಂದ ಸಾರ್ವಜನಿಕರು ಜಾಗೃತರಾಗಬೇಕು

ಬ್ಯಾಂಕ್ ಖಾತೆಯನ್ನು ವಂಚಕರಿಂದ ಸುರಕ್ಷಿತವಾಗಿಡಲು ಬ್ಯಾಂಕ್ ಅಧಿಕಾರಿಗಳ ಸಲಹೆಗಳನ್ನು ಅನುಸರಿಸಬೇಕು.ಅಪರಿಚಿತ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಿ ಡಿಜಿಟಲ್ ಅರೆಸ್ಟ್ ಸೇರಿದಂತೆ

ಅನಗತ್ಯ ಕರೆಗಳನ್ನು ಸ್ವೀಕರಿಸದೆ ನಿರ್ಲಕ್ಷ ವಹಿಸಬೇಕು.ಅಲ್ಲದೆ ಕೆಲ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡದಂತೆ ಎಚ್ಚರಿಕೆ ವಹಿಸಬೇಕು.