ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಸ್ತೆಯಲ್ಲಿ ಹೋಗುವಾಗ ಎದುರಾಗುವ ಗುಂಡಿಗಳು ಅದೆಷ್ಟೋ ಸಂದರ್ಭದಲ್ಲಿ ವಾಹನ ಸವಾರರಿಗೆ ಅಪಘಾತ ಉಂಟು ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಗುಂಡಿಗಳದ್ದೆ ಕಾರುಬಾರು. ಇಂತಹ ಸವಾಲುಗಳನ್ನು ಅರಿತ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ''''''''ಜೆ.ಎನ್.ಎನ್.ಸಿ.ಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್'''''''' ಎಂಬ ಉತ್ಪನ್ನ ಆವಿಷ್ಕರಿಸಿದೆ.ಡಾಂಬರಿನ ರಸ್ತೆಗಳಲ್ಲಿ ಸಾಮಾನ್ಯವಾಗಿ ಗುಂಡಿಗಳು ಬಿರುಕು ಅಥವಾ ಆಳದ ತೀವ್ರತೆಯಿಂದ ಕೂಡಿರುತ್ತದೆ. ಅಸಮರ್ಪಕ ರಸ್ತೆಯ ರಚನೆಯಿಂದಾಗಿ ಡಾಂಬರಿನ ಮೇಲೆ ಆಗುವ ಹಿಗ್ಗು-ಕುಗ್ಗುವಿಕೆಯಿಂದಲು ಬಿರುಕು ಸಂಭವಿಸುತ್ತದೆ. ರಸ್ತೆಯ ರಚನೆಯು ಸಂಚಾರದ ದಟ್ಟನೆ ಮತ್ತು ಭಾರಕ್ಕೆ ಅನುಗುಣವಾಗಿ ಬಲವಾಗಿ ಮತ್ತು ಕಠಿಣವಾಗಿ ಇಲ್ಲದ್ದಿದ್ದರೇ ರಸ್ತೆಯ ಮಾರ್ಗವು ಚಕ್ರಗಳ ಹೊರೆಗಳ ಅಡಿಯಲ್ಲಿ ಭಾಗುತ್ತದೆ. ಇದರಿಂದ ರಸ್ತೆಯಲ್ಲಿ ಬಿರುಕು ಮತ್ತು ಗುಂಡಿಗಳು ಹೆಚ್ಚಗಲು ಕಾರಣವಾಗುತ್ತದೆ. ಜೊತೆಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ನೀರು ಹರಿಯುವುದು ಕೂಡ ಡಾಂಬರು ಬಿರುಕು ಮೂಡಲು ಮತ್ತು ಜಲ್ಲಿ ಮಿಶ್ರಣವು ಶಿಥಿಲಗೊಳ್ಳಲು ಕಾರಣವಾಗುತ್ತದೆ.
ಗುಂಡಿಗಳ ದುರಸ್ತಿಗೆ ಪರಿಹಾರವೆಂದು ಹೇಳಿಕೊಳ್ಳುವ ಅನೇಕ ಬಿಟಮಿನ್ ಕೋಲ್ಡ್ ಡಾಂಬರ್ ಪ್ಯಾಚಿಂಗ್ ವಸ್ತುಗಳು ಮಾರುಕಟ್ಟೆಯಲ್ಲಿ ವರ್ಷಗಳಿಂದ ಇವೆ. ಅದರೇ ಈ ಉತ್ಪನ್ನಗಳು ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚು ಪೂರಕವಾಗಿಲ್ಲ. ಜೊತೆಯಲ್ಲಿ ಕೋಲ್ಡ್ ಡಾಂಬರ್ ಪ್ಯಾಚಿಂಗ್ ಸಾಮಾಗ್ರಿಗಳ ಸಂಗ್ರಹಣೆ, ದಾಸ್ತಾನು, ರಸ್ತೆಯಲ್ಲಿನ ತೇವಾಂಶದ ಸಂಭವ ಮಿಶ್ರಣದ ಸಂದರ್ಭದಲ್ಲಿ ಅಸಮಂಜಸ ಬೆರಕೆಗಳಿಂದ ಅನೇಕ ಸಮಸ್ಯೆಗಳಿವೆ. ಬೆಲೆಯಲ್ಲಿಯು ದುಬಾರಿಯಾಗಿದೆ. ರಸ್ತೆಯಲ್ಲಿನ ಗುಂಡಿ ಮುಚ್ಚುವುದಕ್ಕೆ ಪ್ರಸ್ತುತ ಹಾಟ್ ಮಿಕ್ಸ್ (ಜಲ್ಲಿ ಡಾಂಬಾರು) ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಈ ಹಾಟ್ ಮಿಕ್ಸ್ ಗಳನ್ನು ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆಯು ಬರುವುದಿಲ್ಲ.ಈ ಎಲ್ಲಾ ಅಂಶಗಳನ್ನು ಮನಗಂಡ ಜೆ.ಎನ್.ಎನ್.ಸಿ.ಇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ಡಾಂಬರ್ ಇಲ್ಲದ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಆವಿಷ್ಕರಿಸಿ ಜನರಿಗೆ ಅರ್ಪಿಸಿದ್ದಾರೆ. ಇದು ಸಿದ್ಧಪಡಿಸಿದ ಮಿಶ್ರಣವಾಗಿದ್ದು, ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ, ದಟ್ಟ ವಾಹನ ಸಂಚಾರದ ನಡುವೆಯೂ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು.
ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ2021 ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದರಿಂದ ಉತ್ಪನ್ನ ಸೇರಿದಂತೆ ಸಿವಿಲ್ ವಿಭಾಗದ ಅನೇಕ ಸಂಶೋಧನಾ ಚಟುವಟಿಕೆಗಳಿಗೆ ಪೂರಕ ಶಕ್ತಿ ದೊರೆತಂತಾಗಿತ್ತು.
ಪೇಟೆಂಟ್ ಪ್ರಕಟ: ಸುಮಾರು ನಾಲ್ಕು ವರ್ಷಗಳ ನಿರಂತರ ಸಂಶೋಧನೆ ಪ್ರಯತ್ನದ ನಂತರ ಉತ್ಪನ್ನದ ಪೇಟೆಂಟ್ ಪ್ರಕ್ರಿಯೆಯಲ್ಲಿ ಈಗಾಗಲೇ ಪೇಟೆಂಟ್ ಪ್ರಕಟಗೊಂಡಿದ್ದು, ಮುಂದಿನ ವರ್ಷದೊಳಗೆ ಪೇಟೆಂಟ್ ದೊರೆಯುವ ನಿರೀಕ್ಷೆಯಿದೆ.ಕೋಲ್ಡ್ ಮಿಕ್ಸ್ ಹೇಗೆ ವಿಭಿನ್ನ:ಹಾಟ್ ಮಿಕ್ಸ್ ಗಳನ್ನು ಮಳೆಗಾಲ ಹೊರತಾದ ಕಾಲಾವಧಿಯಲ್ಲಿ ಬಳಸಬಹುದು, ಆದರೆ, ಕೋಲ್ಡ್ ಮಿಕ್ಸ್ ಯಾವುದೇ ಕಾಲದಲ್ಲಿ ಬೇಕಾದರೂ ಬಳಸಬಹುದು.ಬೇರೆಯ ಕಂಪನಿಗಳಲ್ಲಿ ಲಭ್ಯವಿರುವ ಕೋಲ್ಡ್ ಮಿಕ್ಸ್ ಮಾದರಿಯ ಪರಿಕರಗಳು 50 ಕೆಜಿಗೆ ₹1700 ಇದೆ. ಆದರೆ, ಈ ನೂತನ ಆವಿಷ್ಕಾರಕ್ಕೆ ಕೇವಲ ₹800 ಆಗಲಿದೆ.ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಈ ನೂತನ ಉತ್ಪನ್ನ ಬಳಸಿ ಗುಂಡಿ ಮುಚ್ಚಬಹುದು.ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಸಂಪನ್ಮೂಲ, ಇತರೆ ಯಂತ್ರೋಪಕರಣಗಳು ಬೇಕಾಗಿಲ್ಲ.ಕೇಂದ್ರ ಸರ್ಕಾರಕ್ಕೆ ಉತ್ಪನ್ನ ಪರಿಚಯಿಸುವೆ: ಬಿ.ವೈ. ರಾಘವೇಂದ್ರ
ವಿದ್ಯಾರ್ಥಿಗಳ ನಾವೀನ್ಯ ಚಿಂತನೆಗಳನ್ನು ಯೋಜನೆಯಾಗಿ ರೂಪಿಸುವಲ್ಲಿ ವಿದ್ಯಾಸಂಸ್ಥೆ ನೀಡುತ್ತಿರುವ ಆತ್ಮವಿಶ್ವಾಸ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ಉತ್ಪನ್ನದ ಕುರಿತಾಗಿ ಚರ್ಚಿಸಿ ರಾಷ್ಟ್ರಮಟ್ಟದಲ್ಲಿ ಉತ್ಪನ್ನವನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕು ಹೆಚ್ಚು ಅಪಘಾತ ಪ್ರಕರಣಗಳು ರಸ್ತೆ ಗುಂಡಿಗಳಿಂದ ಆಗುತ್ತಿದೆ. ಮಳೆಗಾಲದಲ್ಲಿ ಬೀಳುವ ರಸ್ತೆ ಗುಂಡಿಗಳನ್ನು ತಕ್ಷವೇ ಮುಚ್ಚಬಹುದಾದ ಯೋಜನೆ ಅಭಿನಂದನಾರ್ಹ ಎಂದು ತಿಳಿಸಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಕಟ್‌ಬ್ಯಾಗ್ ಎಮಲ್ಷನ್ ಬಳಸಿ ನಿರ್ಮಾಣ ಮಾಡಿರುವ ಈ ಉತ್ಪನ್ನವನ್ನು ಬಳಸಲು ವಿಶೇಷ ಪರಿಣಿತಿಯ ಅವಶ್ಯಕತೆಯಿಲ್ಲ. ರೋಡ್ ಕಟ್ಟಿಂಗ್ ಗಳಿಗೆ, ರಸ್ತೆ ಗುಂಡಿಗಳಿಗೆ ಈ ಉತ್ಪನ್ನ ಉಪಯುಕ್ತವಾಗಿದ್ದು, ಸುಮಾರು ಎರಡರಿಂದ ಐದು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ರಸ್ತೆಯಲ್ಲಿ ಅನುಷ್ಟಾನಗೊಂಡ ಕೆಲವೇ ಸೆಕೆಂಡುಗಳಿಗೆ ವಾಹನಗಳು ಮುಕ್ತವಾಗಿ ಸಂಚಿರಸಬಹುದಾಗಿದೆ. ಈಗಾಗಲೇ ಬೆಂಗಳೂರು ಹಾಗೂ ಶಿವಮೊಗ್ಗದ ರಸ್ತೆಗಳಲ್ಲಿ ಸಂಶೋಧನೆಗಾಗಿ ಪ್ರಾಯೋಗಿಕ ಅನುಷ್ಠಾನ ಮಾಡಲಾಗಿದ್ದು, ಅದರಲ್ಲಿ ಯಶಸ್ಸು ಕಂಡಿದ್ದೇವೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಎನ್‍ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಜೆ ಎನ್ ಎನ್ ಸಿ ಪ್ರಾಂಶುಪಾಲರು ವಿಜಯ್ ಕುಮಾರ್ ಸೇರಿ ಇತರರು ಇದ್ದರು.