ಶ್ರೀಗಂಡಿ ಬಸವೇಶ್ವರ ದೇಗುಲ ಬಳಿ ಶಿಲಾಶಾಸನ ಪತ್ತೆ

| Published : May 20 2024, 01:36 AM IST

ಸಾರಾಂಶ

ಈ ಶಾಸನವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಬಳಿ ಇರಿಸಿ ಅದರ ಪಕ್ಕ ಪುರಾತನ ಶಿಲಾಶಾಸನ ಎಂಬ ಫಲಕ ಅಳವಡಿಸಿದ್ದಾರೆ.

ಸಂಡೂರು: ಇಲ್ಲಿನ ಸಂಡೂರು-ತಾರಾನಗರ ಮಧ್ಯದ ನಾರಿಹಳ್ಳ ಜಲಾಶಯದ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ನವೀಕರಣ ವೇಳೆ ಶಿಲಾ ಶಾಸನವೊಂದು ಪತ್ತೆಯಾಗಿದೆ.

ದೊಡ್ಡ ಬಂಡೆ ಕಲ್ಲಿನ ಮೇಲೆ ಅಕ್ಷರಗಳನ್ನು ಕೆತ್ತಲಾಗಿದೆ. ನವೀಕರಣದ ಸಂದರ್ಭದಲ್ಲಿ ದೊರೆತ ಈ ಶಾಸನವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಬಳಿ ಇರಿಸಿ ಅದರ ಪಕ್ಕ ಪುರಾತನ ಶಿಲಾಶಾಸನ ಎಂಬ ಫಲಕ ಅಳವಡಿಸಿದ್ದಾರೆ. ಇದರಲ್ಲಿ ಕನ್ನಡ ಅಕ್ಷರಗಳು ಕಂಡು ಬರುತ್ತಿವೆ. ಬಹುಕಾಲ ನೆಲದ ಒಳಗೆ ಹೂತು ಹೋಗಿದ್ದರಿಂದ ಕೆಲ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ದೇವಸ್ಥಾನದ ಅರ್ಚಕ ಎನ್.ಎಂ. ವೀರಯ್ಯಸ್ವಾಮಿ ಶಾಸನ ಕುರಿತು ಮಾತನಾಡಿ, ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ನೆಲದಲ್ಲಿ ಈ ಶಾಸನ ಹೂತು ಹೋಗಿತ್ತು. ದೇವಸ್ಥಾನದ ನವೀಕರಣದ ಸಂದರ್ಭದಲ್ಲಿ ಭೂಮಿ ಅಗೆಯುವಾಗ ಈ ಶಾಸನ ಗೋಚರವಾಯಿತು. ಇದನ್ನು ಆರ್ಥೈಸುವ ಕಾರ್ಯ ಆಗಬೇಕಿದೆ ಎಂದರು.

ದೇವಸ್ಥಾನದ ಬಳಿಯಲ್ಲಿ ದೊರೆತಿರುವ ಶಾಸನದ ಮೇಲೆ ಬೆಳಕು ಚೆಲ್ಲುವ ಕಾರ್ಯ ಶಾಸನ ಶಾಸ್ತ್ರಜ್ಞರಿಂದ ನಡೆಯಬೇಕಿದೆ.