ಸಾರಾಂಶ
ಹನುಮಸಾಗರ ಸಮೀಪದ ಬೀಳಗಿ ಗ್ರಾಮದ ಕೆರೆಯ ಹತ್ತಿರ ಒಂದೇ ಸ್ಥಳದಲ್ಲಿ ಎರಡು ಶಾಸನ
ಕನ್ನಡಪ್ರಭ ವಾರ್ತೆ ಹನುಮಸಾಗರಸಮೀಪದ ಬೀಳಗಿ ಗ್ರಾಮದ ಕೆರೆಯ ಹತ್ತಿರ ಉರಿ ಉಯ್ಯಾಲೆಯ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಇದನ್ನು ಬಲಿದಾನ ಸ್ಮಾರಕ ಶಿಲ್ಪಗಳ ಗುಂಪಿಗೆ ಸೇರಿಸಲಾಗುತ್ತದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.
ಉರಿ ಉಯ್ಯಾಲೆ ಎಂದರೇನು?:ಉರಿ ಉಯ್ಯಾಲೆ ಎಂದರೆ ಬೆಂಕಿ(ಉರಿ)ಯ ಮೇಲೆ ತೂಗಾಡುವುದು ಎಂದರ್ಥ. ಆತ್ಮಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷ. ಮಂಡ್ಯ ಜಿಲ್ಲೆಯ ತೊಣಚಿ ಗ್ರಾಮದ ಶಾಸನದಲ್ಲಿ ಉರಿ ಉಯ್ಯಾಲೆಯ ಉಲ್ಲೇಖವಿದೆ. ಈ ರೀತಿಯ ಶಿಲ್ಪಗಳು ಕರ್ನಾಟಕದಲ್ಲಿ ಬೆರಳೆಣಿಕಿಯಷ್ಟು ದೊರೆತಿವೆ. ಅವುಗಳಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಎರಡು, ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಒಂದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಲಸೂರು ಗ್ರಾಮದಲ್ಲಿ ಒಂದು ಪತ್ತೆಯಾಗಿವೆ. ನಂತರ ಈಗ ಕುಷ್ಟಗಿ ತಾಲುಕಿನ ಬೀಳಗಿ ಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಎರಡು ಅಪರೂಪದ ಶಾಸನ ಶಿಲ್ಪಗಳು ಪತ್ತೆಯಾಗಿವೆ.
ಬೀಳಗಿಯಲ್ಲಿವೆ ಶಾಸನ:ಬೀಳಗಿ ಗ್ರಾಮದ ಎರಡೂ ಶಾಸನ ಶಿಲ್ಪಗಳು ಮೂರು ಹಂತಗಳನ್ನು ಒಳಗೊಂಡಿವೆ. ಮೊದಲನೆಯ ಹಂತದಲ್ಲಿ ದೊಡ್ಡಾದದ ಕಲ್ಲಿನ ಚೌಕಟ್ಟಿನ ಮಧ್ಯಭಾಗದಲ್ಲಿ ವ್ಯಕ್ತಿಯೊರ್ವನು ತೂಗಾಡುವ ಜೊಕಾಲಿಯ ಮೇಲೆ ನಿಂತಿದ್ದಾನೆ. ಅವನ ಕೆಳಭಾಗದಲ್ಲಿ ದೊಡ್ಡದಾದ ಅಗ್ನಿ ಕುಂಡಲವಿದ್ದು, ಅದು ಉರಿಯುವಂತಿದೆ. ಇವನ ಎರಡು ಕಡೆಗೆ ವಾದ್ಯಕಾರರು ಮೃದಂಗ, ಝುಲ್ಲರಿಯನ್ನು ಹಿಡಿದು ಬಾರಿಸುತ್ತಿದ್ದಾರೆ. ಇಲ್ಲಿ ಉರಿ ಉಯ್ಯಾಲೆಗೆ ಒಳಪಡುವ ವೀರನು ಮುಡಿಯನ್ನು ನೆತ್ತಿಯ ಮೇಲೆ ಕಟ್ಟಿದ್ದು, ಎರಡು ಕೈಗಳನ್ನು ಉರಿ ಉಯ್ಯಾಲೆಯಾಡುವ ಹಗ್ಗವನ್ನು ಹಿಡಿದು ನಿಂತಿರುವ ಚಿತ್ರಣ ಕ್ರಿಯಾ ಸೂಚನೆಯಾಗಿದೆ. ಎರಡನೇ ಹಂತದಲ್ಲಿ ಸ್ವರ್ಗದ ಕಲ್ಪನೆ ನೀಡುವುದಾಗಿದೆ. ಉರಿ ಉಯ್ಯಾಲೆಯಲ್ಲಿ ಮರಣ ಹೊಂದಿರುವ ವೀರನನ್ನು ಅಪ್ಸರೆಯರು ಎರಡು ಕೈಗಳನ್ನು ಹಿಡಿದುಕೊಂಡು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಚಾಮರ ಹಿಡಿದಿದ್ದಾರೆ. ಮೂರನೇ ಹಂತದಲ್ಲಿ ವೀರನು ಮಧ್ಯಭಾಗದ ಪೀಠದ ಮೇಲೆ ಕುಳಿತಿದ್ದು, ಇವನ ಎರಡು ಬದಿಯಲ್ಲಿ ಅಪ್ಸರೆಯರು ಚಾಮರ ಹಿಡಿದು ನಿಂತಿದ್ದಾರೆ. ಇದೇ ಸ್ಥಳದಲ್ಲಿ ಇನ್ನೊಂದು ಸ್ಮಾರಕ ಶಿಲ್ಪವಿದೆ. ಅದು ಬಹುತೇಕ ಇದೇ ಲಕ್ಷಣ ಹೊಂದಿದೆ. ಆದರೆ ಮೊದಲನೆಯ ಹಂತದಲ್ಲಿ ಉರಿ ಉಯ್ಯಾಲೆಯಾಗುವ ವ್ಯಕ್ತಿಯ ಪ್ರಾಣವನ್ನು ತಡೆಯುವಂತೆ ವಾದ್ಯಗಾರನ ಕಾಲನ್ನು ಹಿಡಿದು ಬೇಡುತ್ತಿದ್ದಂತೆ ಒಬ್ಬನು ಕಾಲಬಳಿ ಕುಳಿತಿದ್ದಾನೆ. ಇವು ಎರಡು ಸ್ಮಾರಕ ಶಿಲ್ಪಗಳ ಶಿಲೆ ಮತ್ತು ಶಿಲ್ಪದ ಲಕ್ಷಣದ ಆಧಾರದ ಮೇಲೆ ಇವುಗಳನ್ನು ೯ನೇ ಶತಮಾನದ ಸ್ಮಾರಕ ಶಿಲ್ಪಗಳೆಂದು ಗುರುತಿಸಲಾಗಿದೆ.