ಕನ್ನಡಪ್ರಭ ವಾರ್ತೆ ಮದ್ದೂರು

ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಂ.ಉದಯ್ ಮದ್ದೂರು ಕೆರೆ ಹಾಗೂ ಅದರ ವ್ಯಾಪ್ತಿಗೆ ಒಳಪಡುವ ಕೆಮ್ಮಣ್ಣು ನಾಲೆ ಸೇರಿದಂತೆ ಇತರೆ ನಾಲೆಗಳ ಆಧುನೀಕರಣ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದರು.

ಕಾವೇರಿ ನೀರಾವರಿ ನಿಯಮಿತ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ಮಹೇಶ್, ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಸ್ತುತ ಕೆಲಸಗಳ ಸ್ಥಿತಿಗತಿ ವೀಕ್ಷಿಸಿ, ಅಗತ್ಯ ಸೂಚನೆ ನೀಡಿದರು.

ಪಟ್ಟಣ ವ್ಯಾಪ್ತಿಯ ವಿಶ್ವೇಶ್ವರಯ್ಯನಗರ, ನಂಜಪ್ಪ ಕಲ್ಯಾಣ ಮಂಟಪ, ಚನ್ನೇಗೌಡನದೊಡ್ಡಿ ಮಾರ್ಗದ ಕೆಮ್ಮಣ್ಣುನಾಲೆ ಆಧುನೀಕರಣವನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿ ಅಪೂರ್ಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸುಮಾರು 90 ಕೋಟಿ ರು. ವೆಚ್ಚದಲ್ಲಿ ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಈ ಭಾಗದ ಸಾವಿರಾರು ಎಕರೆಗೆ ಸಮರ್ಪಕ ಸಕಾಲದಲ್ಲಿ ಕೊನೇ ಭಾಗದ ಜಮೀನುಗಳಿಗೆ ನೀರು ಹರಿದು ರೈತರು ಉತ್ತಮ ಬೇಸಾಯ ಮಾಡಲು ಅಗತ್ಯವಾಗಿ ಬೇಕಾಗಿರುವ ರಸ್ತೆ, ಸೇತುವೆ ಇನ್ನಿತರ ವ್ಯವಸ್ಥೆ ಕಲ್ಪಿಸಬೇಕು ಎಂದರು.


ಒಂದು ತಿಂಗಳೊಳಗಾಗಿ ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಬೇಸಾಯಕ್ಕೆ ರೈತರಿಗೆ ನೀರು ಹರಿಸಲು ಕ್ರಮ ವಹಿಸುವ ಜತೆಗೆ ಬೆಳೆ ಬೆಳೆಯಲು ಅನುಕೂಲ ಕಲ್ಪಿಸಲಾಗುವುದು. ರೈತರ ಮನವಿ ಮೇರೆಗೆ ಸರಕಾರದಿಂದ ಅನುದಾನ ತಂದು ನಾಲೆ ಅಭಿವೃದ್ಧಿಗೆ ಕ್ರಮ ವಹಿಸಿರುವುದಾಗಿ ತಿಳಿಸಿದರು.

ಭಾರತೀನಗರ ವ್ಯಾಪ್ತಿಯ ಸೂಳೆಕೆರೆ, ಹೆಬ್ಬಕವಾಡಿ ಹಾಗೂ ಮದ್ದೂರುಕೆರೆ ಮತ್ತು ನಾಲೆಗಳನ್ನು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಕೆಮ್ಮಣ್ಣುನಾಲೆ ಕಾಮಗಾರಿ 3.5 ಕಿ.ಮೀ. ಮಾತ್ರ ಬಾಕಿ ಉಳಿದಿದೆ. ಮುಂದಿನ ೨೦ ದಿನಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮದ್ದೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಈಗಾಗಲೇ ಇಲಾಖಾ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ, ಸರ್ವೇ ಗಡಿ ಗುರುತು ಇನ್ನಿತರ ಕಾರ್ಯ ಕೈಗೊಳ್ಳಲಾಗಿದೆ. ಸುಮಾರು 15 ಕೋಟಿ ರು. ಅನುದಾನ ಬಿಡುಗಡೆಯಾದರೆ ಹೂಳು ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಮದ್ದೂರು ಕೆರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಜೊತೆಗೆ ಹೆಚ್ಚು ನೀರು ಸಂಗ್ರಹವಾಗಿ ರೈತರು ಎರಡು ಬೆಳೆ ಬೆಳೆಯಲು ಅನುಕೂಲ ಕಲ್ಪಿಸಲಾಗುವುದು ಎಂದರು.

ಸೋಮನಹಳ್ಳಿ ಜಿಪಂ ವ್ಯಾಪ್ತಿಯ 30 ಕೆರೆಗಳಿಗೆ ಏತನೀರಾವರಿ ಮೂಲಕ ನೀರು ತುಂಬಿಸಿ ಶಾಶ್ವತ ಯೋಜನೆ ಕಲ್ಪಿಸಲು 130 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೆರೆ ಆಧುನೀಕರಣಕ್ಕಾಗಿ 10 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಉಪಾಧ್ಯಕ್ಷ ಸ್ಟಾರ್‌ ಚಂದ್ರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಪಕ ನಿರ್ದೇಶಕ ಮಹೇಶ್, ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಮಹೇಶ್, ಇ.ಇ.ನಂಜುಂಡೇಗೌಡ, ಎ.ಇ.ಇ ನಾಗರಾಜು, ಮುಖಂಡರಾದ ಆರ್.ಸಿ.ಮಹೇಶ್, ಕಿಸಾನ್ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ಕುಮಾರ್, ಸುನೀಲ್‌ಕುಮಾರ್, ಕಿಟ್ಟಿ, ಕುಶಾಲ್‌ಗೌಡ, ಶಿವಣ್ಣ, ಡಿ.ಸಿ.ರಾಜು, ಕೆ.ರವಿ ಇತರರಿದ್ದರು.