ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಜಂಟಿಯಾಗಿ ಗುರುವಾರ (ಏ.೯) ಬೆಂಗಳೂರಿನಿಂದ ಮೈಸೂರುವರೆಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ರೈಲು ನಿಲ್ದಾಣಗಳ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಜಂಟಿಯಾಗಿ ಗುರುವಾರ (ಏ.೯) ಬೆಂಗಳೂರಿನಿಂದ ಮೈಸೂರುವರೆಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ರೈಲು ನಿಲ್ದಾಣಗಳ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ ನಡೆಸುವರು.

ಬೆಳಗ್ಗೆ ೧೦ಕ್ಕೆ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡಲಿರುವ ಅವರು ಮಧ್ಯಾಹ್ನ ೧೨ ಗಂಟೆ ವೇಳೆಗೆ ಶೆಟ್ಟಿಹಳ್ಳಿ, ಮದ್ದೂರು ಮತ್ತು ಹನಕೆರೆ ರೈಲು ನಿಲ್ದಾಣಗಳನ್ನು ವೀಕ್ಷಣೆ ಮಾಡಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸುವರು. ಮಧ್ಯಾಹ್ನ ೧೨.೧೫ಕ್ಕೆ ಮಂಡ್ಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುವರು. ನಂತರ ಯಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ರೈಲು ನಿಲ್ದಾಣಗಳಲ್ಲಿ ಇಳಿದು ವಿಶೇಷವಾಗಿ ಪರಿಶೀಲನೆ ನಡೆಸಿ ನಂತರ ಮೈಸೂರಿಗೆ ತೆರಳುವರು. ಇವರೊಂದಿಗೆ ರಾಮನಗರ ಸಂಸದ ಡಾ.ಸಿ.ಎನ್.ಮಂಜುನಾಥ್, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸಾಥ್ ನೀಡಲಿದ್ದಾರೆ.ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಕೆ

ಮದ್ದೂರು:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ನಿಡಘಟ್ಟದಿಂದ ಗೆಜ್ಜಲಗೆರೆ ಗ್ರಾಮದವರೆಗೆ ಪ್ರಸ್ತಾವಿತ ರೈಲ್ವೆ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವರು, ಸಂಸದರಾದ ಡಾ.ಸಿ.ಎನ್.ಮಂಜುನಾಥ್, ಯಧುವೀರ್ ಒಡೆಯರ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಶೇಷ ರೈಲಿನಲ್ಲಿ ವಿಡೋ ಟ್ರಾವಲರ್‌ನಲ್ಲಿ ವೀಕ್ಷಣೆ ಮಾಡಲಿದ್ದಾರೆ. ಪಟ್ಟಣದ ಶಿವಪುರದ ಹಾಲಿ ಇರುವ ರೈಲು ನಿಲ್ದಾಣದ ಜೊತೆಗೆ ತೋಟಗಾರಿಕೆ ಹಿಂಭಾಗದಲ್ಲಿ ಉಪ ರೈಲು ನಿಲ್ದಾಣ ಸ್ಥಾಪನೆ ಹಾಗೂ ತಾಲೂಕಿನ ಆಯ್ದ ಸ್ಥಳಗಳಲ್ಲಿ ರೈಲ್ವೆ ಅಂಡರ್ ಪಾಸ್ ಕುರಿತಂತೆ ಕೇಂದ್ರ ಸಚಿವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮನವಿ ಸಲ್ಲಿಸಲಿದ್ದಾರೆ.ತಾಲೂಕಿನ ನಿಡಘಟ್ಟ, ಹೊಸಹಳ್ಳಿ, ಸೋಮನಹಳ್ಳಿ, ಕದಲೂರು ಗ್ರಾಮಗಳಲ್ಲಿ ಅಂಡರ್ ಪಾಸ್ ನಿರ್ಮಾಣ, ಚನ್ನೇಗೌಡನದೊಡ್ಡಿ, ವಳಗೆರೆಹಳ್ಳಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ವಳಗೆರೆಹಳ್ಳಿ - ಗೆಜ್ಜಲಗೆರೆ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ತಮ್ಮಣ್ಣ ಮನವಿ ಮಾಡಲಿದ್ದಾರೆ. ವೀಕ್ಷಣೆಗೆ ಆಗಮಿಸುತ್ತಿರುವ ಸಚಿವರು, ಸಂಸದರನ್ನು ಸ್ವಾಗತಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸುವಂತೆ ಕೋರಿದ್ದಾರೆ.