ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ ಸದ್ಗುರು ಜಗ್ಗಿ ವಾಸುದೇವ್ ಅವರು ತಾಲೂಕಿನ ಆವಲಗುರ್ಕಿಯ ಈಶಾ ಪೌಂಡೇಶನ್ ನ 112 ಅಡಿ ಎತ್ತರದ ಆದಿಯೋಗಿ ವಿಗ್ರಹದ ಸದ್ಗುರು ಸನ್ನಿಧಿಯಲ್ಲಿ ಮಹಾಶೂಲ ಮತ್ತು ನಂದಿಯನ್ನು ಪ್ರತಿಷ್ಠಾಪಿಸಿದರು.
21 ಅಡಿಗಳ ನಂದಿ ಮತ್ತು 54 ಅಡಿ ಎತ್ತರದ ಮಹಾಶೂಲವು, ಸದ್ಗುರು ಸನ್ನಿಧಿಯಲ್ಲಿರುವ 112 ಅಡಿಗಳ ಆದಿಯೋಗಿಯ ಭವ್ಯತೆ ಮತ್ತು ಅನುಗ್ರಹವನ್ನು ಇಮ್ಮಡಿಗೊಳಿದೆ. ಈ ಐತಿಹಾಸಿಕ ಘಟನೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಈ ವೇಳೆ, ಭಕ್ತರು ನಂದಿಗೆ ಎಣ್ಣೆಯನ್ನು ಅರ್ಪಿಸಿದರು. ಬಳಿಕ, ಮಾದೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಕಂಸಾಳೆ ನೃತ್ಯ, ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದಿತು.
ಸಂಜೆ, ವರ್ಣರಂಜಿತ ಧ್ವನಿ ಮತ್ತು ಬೆಳಕಿನ ಪ್ರದರ್ಶನ, ವಿಶೇಷ ಲೇಸರ್ ಪ್ರದರ್ಶನ ಭಕ್ತರ ಮನಸೂರೆಗೊಂಡಿತು.ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಪ್ರತಿಯೊಂದು ಶಿವ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು.
ನಂದಿಯು ಅವಿರತ ಕಾಯುವಿಕೆಯ ಸಂಕೇತವಾಗಿದೆ. ಸುಮ್ಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥನಾಗಿರುತ್ತಾರೆ. ಜನರು ಯಾವಾಗಲೂ ಧ್ಯಾನವನ್ನು ಒಂದು ರೀತಿಯ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಆದರೆ, ಇದು ಒಂದು ಗುಣಧರ್ಮ. ಪ್ರಾರ್ಥನೆ ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ ಎಂದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಜ.22 ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ.
ಆದರೆ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮ ಇರುವುದರಿಂದ ಹೋಗಲು ಆಗುತ್ತಿಲ್ಲ. ಇದು ನನ್ನ ದುರದೃಷ್ಟ ಎಂದರು. ಅಪೂರ್ಣ ಮಂದಿರ ಉದ್ಘಾಟನೆ ಸಂಬಂಧ ಕೆಲ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ದರೆ ಎಷ್ಟು ಮಾಡಿದರೂ ಸಾಕಾಗಲ್ಲ ಅನಿಸುತ್ತೆ.
ದೇವಾಲಯ ಅನ್ನೋದು ಎಂದೂ ಮುಗಿಯಲ್ಲ. ಮಾಡ್ತಾನೆ ಇದ್ದರೆ ಮಾಡ್ತಾನೆ ಇರಬೇಕು. ಭಕ್ತನ ಆಶಯವೂ ಅದು. ಈಗ ಅದು ಮೂರು ಅಂತಸ್ತು ಇದೆ. ಒಂದು ಅಂತಸ್ತು ಮುಗಿದಿದೆ. ರಾಮಲಲ್ಲಾ ಅಲ್ಲಿ ಪ್ರತಿಷ್ಠಾಪನೆ ಆಗಲಿದೆ. ಮುಂದೆ ಉಳಿದ ಎಲ್ಲವೂ ಮಾಡಲಿದ್ದಾರೆ. ಹಾಗಾಗಿ, ಅದು ಅಪೂರ್ಣ ಅಲ್ಲ ಎಂದರು.
ಭಾರತ ಸಂವಿಧಾನದಲ್ಲಿ ಯಾರಿಗೇ ಆಗಲಿ ದೇವಾಲಯ ಪ್ರವೇಶಿಸಲು ನಿಷೇಧವಿಲ್ಲ. ಯಾರು ಬೇಕಾದರೂ ಯಾವ ದೇವಾಲಯವನ್ನಾದರೂ ಪ್ರವೇಶಿಸಬಹುದು. ಯಾರೋ ಕೆಲ ಕಿಡಿಗೇಡಿ ಮತಾಂಧರುಗಳು ಮಾತ್ರ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಾರೆ. ಎಲ್ಲಾ ರಂಗಗಳಲ್ಲಿ ಇರುವಂತೆ ಆಧ್ಯಾತ್ಮ ರಂಗದಲ್ಲೂ ಕೆಲ ಕಳ್ಳರಿದ್ದಾರೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))