ಸಾರಾಂಶ
ಲಕ್ಷ್ಮೇಶ್ವರ: ಭೂಕೈಲಾಸ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನೆಗೆ ಈಗ ಕಾಲ ಕೂಡಿ ಬಂದಿದೆ. ಶೀಘ್ರದಲ್ಲಿ ತ್ರಿಕೋಟಿ ಲಿಂಗಗಳ ಪ್ರತಿಷ್ಠಾಪನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿಬಸವ ದೇಸಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗು ಸ್ಥಾಪನೆಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ರಂಭಾಪುರಿ ಪೀಠದ ಜಗದ್ಗುರು ಲಿಂ. ವೀರಗಂಗಾಧರ ಮಹಾಸ್ವಾಮಿಗಳ ಇಷ್ಟದಂತೆ ತ್ರಿಕೋಟಿ ಲಿಂಗಗಳ ಸ್ಥಾಪನೆ ಮಾಡುವ ಕಾಲ ಈಗ ಕೂಡಿ ಬಂದಿದೆ. ಕಳೆದ ಹಲವು ವರ್ಷಗಳಿಂದ ಹಲವು ಕಾರಣಾಂತರಗಳಿಂದ ತ್ರಿಕೋಟಿ ಲಿಂಗಗಳ ಸ್ಥಾಪನೆ ನೆನಗುದಿಗೆ ಬಿದ್ದಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶ್ರೀಗಳ ಹಾಗೂ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀಗಳ ಆಶಯದಂತೆ ತ್ರಿಕೋಟಿ ಲಿಂಗ ಸ್ಥಾಪನೆ ಮಾಡುವಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ಕಂಪನಿಯು 11 ತಿಂಗಳಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ಮಾಡುವ ಕಾರ್ಯದ ಸಂಪೂರ್ಣ ಹೊಣೆ ಹೊತ್ತುಕೊಂಡಿದೆ. ಉಪ ಮುಖ್ಯಮಂತ್ತ್ರಿ ಡಿ.ಕೆ. ಶಿವಕುಮಾರ ಅವರ ಪ್ರಯತ್ನದ ಫಲವಾಗಿ ಪ್ರಥಮ ಹಂತದಲ್ಲಿ ತ್ರಿಕೋಟಿ ಲಿಂಗು ಸ್ಥಾಪನೆಗೆ 5 ಕೋಟಿ ಹಣ ಬಿಡುಗಡೆಯಾಗಿದೆ. ಪ್ರಥಮ ಹಂತವಾಗಿ ಭೂಮಿಯ ಸಮತಟ್ಟು ಕಾರ್ಯ ಮಾಡುವ ಮೂಲಕ ಲಿಂಗಗಳ ಸ್ಥಾಪನೆಗೆ ವೇದಿಕೆ ಸಿದ್ಧಪಡಿಸಲಾಗುವುದು. ಮುಂದಿನ ಹಂತದಲ್ಲಿ ಕಾಂಪೌಂಡ್ ನಿರ್ಮಿಸುವ ಕಾರ್ಯ ಮಾಡಲಾಗುವುದು, ನಂತರ ಲಿಂಗಗಳ ಸ್ಥಾಪನೆಯು ಮೂರನೆ ಹಂತದಲ್ಲಿ ನೆರವೇರುತ್ತದೆ ಎಂದು ಹೇಳಿದ ಅವರು ತ್ರಿಕೋಟಿ ಲಿಂಗಗಳ ಸ್ಥಾಪನೆಯಾದ ನಂತರ ಮುಕ್ತಿಮಂದಿರಕ್ಕೆ ಹೊಸ ಕಳೆ ಬರುತ್ತದೆ. ಅಂತಹ ಸುಂದರ ಕ್ಷಣಗಳನ್ನು ಅನುಭವಿಸುವ ನಾವು ಧ್ಯನ್ಯರು ಎಂದು ಹೇಳಿದ ಅವರು ಇಂತಹ ಪವಿತ್ರ ಕಾರ್ಯಕ್ಕೆ ಎಲ್ಲ ರೀತಿಯ ಸಹಾಯ ಸಹಕಾರವನ್ನು ಪೀಠದ ಭಕ್ತರು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿದರು. ಮುಕ್ತಿಮಂದಿರದ ಧರ್ಮಕ್ಷೇತ್ರದ ವಿಮಲ ರೇಣುಕ ವೀರಮುಕ್ತಿ ಮುನಿ ಸ್ವಾಮಿಗಳು ತ್ರಿಕೋಟಿ ಲಿಂಗು ಸ್ಥಾಪನೆಗೆ ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.ಸಭೆಯಲ್ಲಿ ಡಿ.ಎಸ್. ಮ್ಯಾಕ್ಸ್ ಕಂಪನಿಯ ರಾಜೇಶ್, ನಟೇಶ್, ವ್ಯವಸ್ಥಾಪಕ ಶಂಭಣ್ಣ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ. ಚನ್ನಪ್ಪ ಜಗಲಿ, ಶಂಕ್ರಪ್ಪ ಗೊರವರ, ಪುಲಕೇಶಿ ಉಪನಾಳ, ಪ್ರವೀಣ ಬಾಳಿಕಾಯಿ, ಜಯಕ್ಕ ಕಳ್ಳಿ, ರಾಜು ಕುಂಬಿ, ಎಸ್.ಎಸ್.ಸಾಲಿಮಠ, ವಿರುಪಾಕ್ಷಪ್ಪ ಆದಿ ಸೇರಿಂದತೆ ಅನೇಕರು ಇದ್ದರು.