ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಡ್ರಗ್ಸ್ ಘಟಕದ ಮೇಲೆ ದಾಳಿ ನಡೆಸಿದ ವಿಷಯ ಕುರಿತು ಈ ಭಾಗದ ಪ್ರತಿನಿಧಿಯಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ. ಅದನ್ನು ಟೀಕಿಸುವ ಬದಲು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದ ಡ್ರಗ್ಸ್ ಘಟಕದ ಮೇಲೆ ದಾಳಿ ನಡೆಸಿದ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿದೆ. ಇದನ್ನು ಟೀಕಿಸುತ್ತಿದ್ದಾರೆ. ಮೈಸೂರಿನ ಪ್ರತಿಷ್ಠೆ ಹಾಳಾಗುತ್ತಿದೆ. ಮೈಸೂರಿನಲ್ಲಿ ನಡೆಸುತ್ತಿದ್ದ ಡ್ರಗ್ಸ್ ಘಟಕದ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದು ಆಶ್ಚರ್ಯದ ಸಂಗತಿ. ಇದು ಮೈಸೂರಿನ ಮರ್ಯಾದೆ, ಪ್ರತಿಷ್ಠೆಯ ಪ್ರಶ್ನೆ. ಇದನ್ನು ಸಂಸತ್ತಿನಲ್ಲಿ ಹೇಳಿದ್ದನ್ನು ಟೀಕಿಸುವ ಬದಲು ತಡೆಗಟ್ಟಲು ಸಹಕರಿಸಿ ಎಂದರು.ಡ್ರಗ್ಸ್ ತಯಾರಿಕೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲವಾದರೇ ಹೇಗೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಮಹಾರಾಷ್ಟ್ರದ ಪೊಲೀಸರು ಇಲ್ಲಿ ಬಂದು ದಾಳಿ ನಡೆಸುತ್ತಾರೆ ಎಂದರೆ, ನಮ್ಮ ಕಾನೂನು ವ್ಯವಸ್ಥೆ ಹೇಗಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆ ಹೊರತು ಟೀಕೆ ಮಾಡುವುದು ತರವಲ್ಲ ಎಂದು ತಿಳಿಸಿದರು.ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನಿನ ಮುಂದೆ ಎಲ್ಲರೂ ಸಮಾನರೆ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಭದ್ರವಾಗಿರುವುದರಿಂದ ಸ್ಪಷ್ಟವಾದ ತೀರ್ಪು ನೀಡಿದ್ದು, ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ ಎಂದರು.