ಸಾರಾಂಶ
- ಮಾವ, ಪತಿ ಹೀಗೆ ಕಾಂಗ್ರೆಸ್ಸಿನ ಸರಣಿ ಸೋಲಿನ ಸೇಡು ತೀರಿಸಿಕೊಂಡ್ರು ಡಾ.ಪ್ರಭಾ ।
- ಕಾಂಗ್ರೆಸ್ಸಿಗೆ ಕಬ್ಬಿಣದ ಕಡಲೆಯಾಗಿದ್ದ ಕ್ಷೇತ್ರ ಹುರಿಗಡಲೆಯೆಂದು ತೋರಿದ ಫಲಿತಾಂಶ ।- ಶಾಮನೂರು-ಮಲ್ಲಿಕಾರ್ಜುನಪ್ಪ ಕುಟುಂಬದ ರಾಜಕೀಯ ಜಿದ್ದಿನಲ್ಲಿ ಕಡೆಗೂ ಮೇಲುಗೈ
- - -ನಾಗರಾಜ ಎಸ್. ಬಡದಾಳ್
ಕನ್ನಡಪ್ರಭ ವಾರ್ತೆ, ದಾವಣಗೆರೆಎರಡೂವರೆ ದಶಕದಿಂದ ಕಾಂಗ್ರೆಸ್ಸಿನ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಕಡೆಗೂ ಕಾಂಗ್ರೆಸ್ ವಶವಾಗಿದೆ. ಈ ಕ್ಷೇತ್ರಕ್ಕೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ, ಅದೇ ಬಿಜೆಪಿ ವಿರುದ್ಧ 26094 ಮತಗಳ ಅಂತರದಲ್ಲಿ ಜಯಿಸುವ ಜೊತೆಗೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಎಂಬ ಸಾಧನೆ ಮೆರೆಯುವ ಮೂಲಕ ಡಾ.ಪ್ರಭಾ ಮಲ್ಲಿಕಾರ್ಜುನ ಲೋಕಸಭೆ ಪ್ರವೇಶಿಸಿದ್ದಾರೆ.
ಲೋಕಸಭಾ ಕ್ಷೇತ್ರವು 1977ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ಈವರೆಗೆ ಒಟ್ಟು 13 ಚುನಾವಣೆ ಕಂಡಿದೆ. 2019ರವರೆಗೂ ಸಮಬಲ ಸಾಧಿಸಿದ್ದ ಕಾಂಗ್ರೆಸ್-ಬಿಜೆಪಿ ಪೈಕಿ ಇದೀಗ ಕಾಂಗ್ರೆಸ್ ಪಾಲಿಗೆ 1999ರಿಂದಲೂ ಈ ಕ್ಷೇತ್ರ ಹುಳಿ ದ್ರಾಕ್ಷಿಯಂತಾಗಿತ್ತು. ಕಾಂಗ್ರೆಸ್ಸಿನ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೋಲಿನೊಂದಿಗೆ ಶುರುವಾದ ಸರಪಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪವರೆಗೆ ಸತತ 5 ಚುನಾವಣೆಯಲ್ಲಿ ಸೋಲು ಕಂಡಿದ್ದ ಕ್ಷೇತ್ರವಿದು.ಮಾವ ಶಾಮನೂರು ಶಿವಶಂಕರಪ್ಪ, ಪತಿ ಎಸ್.ಎಸ್. ಮಲ್ಲಿಕಾರ್ಜುನ ಸೋತಿದ್ದ ಕ್ಷೇತ್ರದಲ್ಲೇ ಸ್ಪರ್ಧಿಸಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ ಇಡೀ ರಾಜ್ಯದ ಗಮನ ಸೆಳೆದಿದ್ದರು. ಸತತ 4 ಚುನಾವಣೆ ಗೆದ್ದು, ಮತ್ತೊಂದು ಚುನಾವಣೆ ಗೆಲ್ಲುವ ಉಮೇದಿನಲ್ಲಿದ್ದ ಸಂಸದ ಜಿ.ಎಂ. ಸಿದ್ದೇಶ್ವರಗೆ ಸ್ವಪಕ್ಷೀಯರಿಂದಲೇ ತೊಡಕುಂಟಾಗಿದ್ದರಿಂದ ಅನಿವಾರ್ಯವಾಗಿ ಪಕ್ಷದ ವರಿಷ್ಠರ ಸೂಚನೆಯಂತೆ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದರು. ಶಾಮನೂರು ಶಿವಶಂಕರಪ್ಪ ಅವರ ಮನೆ ಕಿರಿಯ ಸೊಸೆ, ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಮನೆ ಹಿರಿಯ ಸೊಸೆ ಮಧ್ಯೆ ಚುನಾವಣೆ ಇದಾಗಿತ್ತು. ಸಂಬಂಧದಲ್ಲಿ ತಾಯಿ-ಮಗಳಾಗಿದ್ದರೂ, ಮತದಾರರು ಮಗಳಿಗೆ ಸಂಸದೆಯಾಗುವಂತೆ ಆಶೀರ್ವದಿಸಿದ್ದಾರೆ.
ಎಸ್‌ಎಸ್‌ಎಂ ತಂತ್ರಗಾರಿಕೆಗೆ ಫಲ:ದಾವಣಗೆರೆ ಕ್ಷೇತ್ರದ ಫಲಿತಾಂಶ ಮಾತ್ರ ಯಾರೂ ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅದಕ್ಕೆ ಇಂಬು ನೀಡುವಂತೆ ಯಾವ ಕ್ಷೇತ್ರ ಮುನ್ನಡೆ ಕೊಡಬಹುದು, ಯಾವ ಕ್ಷೇತ್ರ ಕೈಕೊಡಬಹುದೆಂಬ ಲೆಕ್ಕಾಚಾರವೂ ಇಲ್ಲಿ ಬಿಜೆಪಿ ಪಾಲಿಗೆ ತಲೆ ಕೆಳೆಗಾಯಿತು. ತಮ್ಮ ತಂದೆ, ತಮ್ಮ ಸೋಲು ಹಾಗೂ 2019ರಲ್ಲಿ ಎಚ್.ಬಿ.ಮಂಜಪ್ಪ ಸೋಲು ಇದೆಲ್ಲದರಿಂದ ಅತ್ಯಂತ ಜಾಣ್ಮೆಯ ರಾಜಕೀಯ ತಂತ್ರಗಾರಿಕೆ ಹೆಣೆದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಎದುರಾಳಿ ಪಕ್ಷದ ಬಲಹೀನತೆಯನ್ನೇ ಅಸ್ತ್ರವಾಗಿ ಮಾಡಿಕೊಂಡರು. ದಶಕಗಳ ನಂತರ ಎಸ್.ಎಸ್. ಮಲ್ಲಿಕಾರ್ಜುನ ಮೈಚಳಿ ಬಿಟ್ಟು, ಮುಂಚಿನಂತೆಯೇ ರಾಜಕಾರಣ ಮಾಡುವ ಮೂಲಕ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಬಿಜೆಪಿಗೆ ತಕ್ಕ ತಿರುಗೇಟು ನೀಡಿದ್ದಾರೆ.
- - - ಬಿಜೆಪಿಗೆ ಸ್ವಪಕ್ಷೀಯರೇ ಆರಂಭಿಕ ಅಡ್ಡಗಾಲು?ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ. ಸಿದ್ದೇಶ್ವರ, ಕೆಲ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಹಸ್ರಾರು ಕಾರ್ಯಕರ್ತರು ತಮ್ಮ ಮನೆ-ಮಠ ಬಿಟ್ಟು ಕೆಲಸ ಮಾಡಿದರು. ಆದರೆ, ಸ್ವಪಕ್ಷೀಯರ ನಿರಾಸಕ್ತಿ, ವೈಯಕ್ತಿಕ ಪ್ರತಿಷ್ಠೆಗೆ ಅಪಾರ ಕಾರ್ಯಕರ್ತರ ಶ್ರಮವು ಹೊಳೆಯಲ್ಲಿ ಹುಣಸೇ ತೊಳೆದಂತಾಯಿತು. ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಮುನ್ನಡೆ ಕೊಟ್ಟಿದ್ದು ದಾವಣಗೆರೆ ಉತ್ತರ ಹಾಗೂ ಹರಪನಹಳ್ಳಿ ಮಾತ್ರ. ಉಳಿದ ಕಡೆ ಕನಿಷ್ಠ ಮುನ್ನಡೆಯೂ ಸಿಗದಿರುವುದು ಈಗ ಸ್ವತಃ ಬಿಜೆಪಿ ರಾಜ್ಯ ನಾಯಕರನ್ನು ಚಿಂತೆಗೆ ಹಚ್ಚಿದೆ.ಶಾಮನೂರು ಶಿವಶಂಕರಪ್ಪ- ಮಲ್ಲಿಕಾರ್ಜುನಪ್ಪ ರಾಜಕೀಯ ಜಿದ್ದಾಜಿದ್ದಿ 1996ರಿಂದಲೂ ಇದೆ. ಇದು ಒಮ್ಮೆ ಶಾಮನೂರು, ಮತ್ತೊಮ್ಮೆ ಜಿ.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. 1999ರಲ್ಲಿ ಶಾಮನೂರು ವಿರುದ್ಧ ಜಿ.ಮಲ್ಲಿಕಾರ್ಜುನಪ್ಪ ಗೆದ್ದು ಬೀಗಿದ್ದರು. ಅನಂತರ ಮಲ್ಲಿಕಾರ್ಜುನಪ್ಪ ನಿಧನದಿಂದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. 2004, 2009, 2014ರ ಚುನಾವಣೆಯಲ್ಲಿ ತಮ್ಮ ರಾಜಕೀಯ ಕಡುವೈರಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಗೆದ್ದು ಬೀಗಿದ್ದ ಸಂಸದ ಜಿ.ಎಂ. ಸಿದ್ದೇಶ್ವರ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ವಿರುದ್ಧ ದಾಖಲೆ ಅಂತರದ ಜಯ ಸಾಧಿಸಿದ್ದರು. ಅಲ್ಲದೇ, ಕ್ಷೇತ್ರದಿಂದ ಸತತ 4 ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. ಈಗ ಅದೇ ಬಿಜೆಪಿ ದಾಖಲೆ ಸರಣಿಯನ್ನು ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಬ್ರೇಕ್ ಮಾಡಿದ್ದಾರೆ.
- - - ಜಾದೂ ಮಾಡದ ಪಕ್ಷೇತರ ವಿನಯಕುಮಾರ ಕಾಂಗ್ರೆಸ್ ಟಿಕೆಟ್ ವಂಚಿತ ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ, ಕುರುಬ ಸಮಾಜದ ಜಿ.ಬಿ.ವಿನಯಕುಮಾರ ಹೆಚ್ಚು ಮತ ಪಡೆದರೆ ಕಾಂಗ್ರೆಸ್ಸಿಗೆ ನಷ್ಟ, ಬಿಜೆಪಿಗೆ ಲಾಭವೆಂಬ ಲೆಕ್ಕಾಚಾರ ಇತ್ತು. ಆದರೆ, ಸಿಎಂ ಸಿದ್ದರಾಮಯ್ಯ ಬಂದು ಹೋದ ನಂತರ ಹಿಂದುಳಿದ ವರ್ಗ ವಿಶೇಷವಾಗಿ ಕುರುಬ ಸಮುದಾಯವು ಮನಸ್ಸು ಬದಲಿಸಿ, ಕಾಂಗ್ರೆಸ್ಸಿಗೆ ಬೆನ್ನಿಗೆ ನಿಂತಿದ್ದು ಇಲ್ಲಿ ಕಾಂಗ್ರೆಸ್ಸಿನ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದೆ. ಕಾಂಗ್ರೆಸ್ಸಿನ ಶಾಸಕರು, ಮಾಜಿ ಶಾಸಕರು, ಸ್ವತಃ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಇದು ಕಾಂಗ್ರೆಸ್ಸಿನ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ದಾವಣಗೆರೆ ಕ್ಷೇತ್ರದ ಗೆಲವು ಹುರಿಗಡಲೆಯಷ್ಟೇ ಹಗುರ ಎಂಬುದಕ್ಕೆ ಈ ಶ್ರಮ ಸಾಕ್ಷಿಯಾಗಿಸಿದೆ. ಅತ್ತ ಸ್ವಯಂ ಕೃತಾಪರಾಧಕ್ಕೆ ಬೆಲೆ ತೆತ್ತ ಬಿಜೆಪಿ ಪಾಳೆಯದಲ್ಲಿ ಈಗ ಸ್ಮಶಾನ ಮೌನ.- - - -(ಫೋಟೋ ಬರಲಿವೆ)