ಸಂಕ್ರಮಣ ಬರಮಾಡಿಕೊಂಡ ಜಾನಪದ ಸಂಶೋಧನಾ ಸಂಸ್ಥೆ

| Published : Jan 14 2025, 01:00 AM IST

ಸಾರಾಂಶ

ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ತಮ್ಮ ಜಾನಪದ ಸಂಶೋಧನಾ ಕೇಂದ್ರದ ಮೂಲಕ ಶುರು ಮಾಡಿರುವ ಸಂಕ್ರಮಣ ಸಂಭ್ರಮವನ್ನು ಅವರ ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಧಾರವಾಡ:

ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ. ಎಳ್ಳು ಮಿಶ್ರಿತ ಸ್ನಾನ ಮಾಡಿ ಎಳ್ಳು ಬೆಲ್ಲ ತಿಂದು ಕುಟುಂಬ ಸಮೇತ ಪೂಜೆ ಹಾಗೂ ಸಿಹಿ ಭೋಜನ ಮಾಡುವುದು ಹಬ್ಬದ ವಿಶೇಷ. ಅಂತಹ ಸಂಕ್ರಮಣ ಹಬ್ಬವನ್ನು ಯುವ ಜನತೆಗೆ ತಿಳಿಸಲು ಜಾನಪದ ಸಂಶೋಧನ ಸಂಸ್ಥೆಯು ಹಬ್ಬದ ಮುನ್ನಾದಿನ ಸೋಮವಾರ ಆಚರಿಸಿತು.

ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ತಮ್ಮ ಜಾನಪದ ಸಂಶೋಧನಾ ಕೇಂದ್ರದ ಮೂಲಕ ಶುರು ಮಾಡಿರುವ ಈ ಹಬ್ಬದ ಸಂಭ್ರಮವನ್ನು ಅವರ ಪತ್ನಿ ವಿಶ್ವೇಶ್ವರಿ ಹಾಗೂ ಪುತ್ರ ಭೂಷಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸೋಮವಾರ ಇಲ್ಲಿಯ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಸಂಸ್ಥೆಯ ಹಲವು ಮಹಿಳೆಯರೊಂದಿಗೆ ಅರ್ಥಪೂರ್ಣವಾಗಿ ಸಂಕ್ರಮಣ ಆಚರಿಸಿತು.

ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ಸಂಕ್ರಮಣದ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿಕೊಂಡು ಸಂಕ್ರಾಂತಿ ಹಾಡುಗಳನ್ನು ಹಾಡುತ್ತಾ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದರು. ಎಳ್ಳು ಬೆಲ್ಲ ಸೇರಿದಂತೆ ಸಜ್ಜೆ, ಜೋಳದ ರೊಟ್ಟಿ, ಬದನೆಕಾಯಿ ಬರ್ತಾ, ಮಡಕಿಕಾಳು, ಅವರೆಕಾಳು, ಬದನೆಕಾಯಿ ಎಣ್ಣೆಗಾಯಿ, ಕರಿಹಿಂಡಿ, ಶೇಂಗಾಚೆಟ್ಟಿ, ಗುರೆಳ್ಳ ಚೆಟ್ಟಿ, ಹಿಟ್ಟಿನ ಪಲ್ಲೆ, ಮಾದಲಿ, ಶೇಂಗಾ ಹೋಳಿಗೆ, ಚಿತ್ರನ್ನ, ಮೊಸರನ್ನ, ತರಕಾರಿ ಅಂತಹ ತರಹೇವಾರಿ ಅಡುಗೆ ಹಬ್ಬಕ್ಕೆ ಮತ್ತಷ್ಟು ಕಳೆ ತಂದಿತು.

ಕಳೆದ ಹನ್ನೊಂದು ವರ್ಷಗಳಿಂದ ಜಾನಪದ ಸಂಶೋಧನಾ ಸಂಸ್ಥೆಯು ಹಬ್ಬಗಳ ಮಹತ್ವ ತಿಳಿಸುವ ಕಾರ್ಯಕ್ರಮ ಮಾಡುತ್ತಿದೆ. ಸಂಕ್ರಮಣದಲ್ಲಿ ಗಂಗೆ ಪೂಜೆ ಮಾಡಿ ಹಬ್ಬದ ನಿಮಿತ್ತ ಸುಗ್ಗಿ ಹಾಡು, ಮಾದಲಿ ಹಬ್ಬ ಬಂದೈತಿ, ಸಂಕ್ರಾಂತಿ ತಂದೈತಿ ಅಂತಹ ಹಾಡುಗಳನ್ನು ಹಾಡಿ ಮಕ್ಕಳಿಗೆ ಕರೆ ಎರೆದು ಎಲ್ಲರೂ ಕೂಡಿ ಭೋಗಿ ಮಾಡುತ್ತೇವೆ ಎಂದು ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ ಮಾಹಿತಿ ನೀಡಿದರು.

ಪ್ರಸ್ತುತ ಯುವ ಜನಾಂಗಕ್ಕೆ ಹಬ್ಬಗಳ ಮಹತ್ವ ಗೊತ್ತಿಲ್ಲ. ಕಾಟಾಚಾರಕ್ಕೆ ಹಬ್ಬದೂಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪಂಚಮಿ, ಹೋಳಿ ಹಬ್ಬ, ಸಂಕ್ರಮಣ ಅಂತಹ ಹಬ್ಬಗಳ ಮುನ್ನಾ ದಿನ ಹಬ್ಬಗಳ ಮಹತ್ವ, ಆಚರಣೆಯನ್ನು ಸಂಸ್ಥೆಯು ಹತ್ತು ವರ್ಷಗಳಿಂದ ಮಾಡುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಈ ಸಮಯದಲ್ಲಿ ಖೈರುನ್ನಿಸಾ, ವಿದ್ಯಾ ದೇಸಾಯಿ, ಆಶಾ ಸೈಯದ್‌, ಇಂದಿರಾ ಶಶಿಧರ, ರಾಜೇಶ್ವರಿ ಕಟ್ಟಿಮನಿ, ರಾಜೇಶ್ವರ ಕಬ್ಬೂರ, ಪಲ್ಲವಿ ಗಂಗಾ, ನಂದಾ ಗುಳೇದಗುಡ್ಡ, ಸುಜಾತಾ ಹಡಗಲಿ, ಗಿರಿಜಾ ಶಕ್ತಿ, ಅನುಪಮಾ, ಭಾರತಿ ಕಲ್ಮಠ, ವೀಣಾ ಹೊಸಮನಿ, ಸುಮಿತ್ರಾ, ಜಯಶ್ರೀ ಇದ್ದರು.