ಶೀಘ್ರ ಕಾಮಗಾರಿ ಪೂರೈಸಲು ಸೂಚಿಸಲಾಗುವುದು: ಸಚಿವ ನಾರಾಯಣಸ್ವಾಮಿ

| Published : Feb 23 2024, 01:45 AM IST

ಸಾರಾಂಶ

ಕಾಮಗಾರಿ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ಧೂಳಿನಿಂದ ಆರೋಗ್ಯದಲ್ಲಿ ತುಂಬಾ ವ್ಯತ್ಯಯ ಉಂಟಾಗಿದ್ದು, ಗಮನಕ್ಕೆ ಬಂದಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಹಾಕಿ ಕಾಮಗಾರಿ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿಲ್ಲ.

ಹೊಸದುರ್ಗ: ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ರಸ್ತೆ ಕಾಮಗಾರಿ ವೀಕ್ಷಿಸಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ನಗರದ ಹೊಳಲ್ಕೆರೆ, ಹೊಸದುರ್ಗ, ಹಾಗೂ ತರೀಕೆರೆ ಮುಖ್ಯ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ಧೂಳಿನಿಂದ ಆರೋಗ್ಯದಲ್ಲಿ ತುಂಬಾ ವ್ಯತ್ಯಯ ಉಂಟಾಗಿದ್ದು, ಗಮನಕ್ಕೆ ಬಂದಿದೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರು ಹಾಕಿ ಕಾಮಗಾರಿ ಕೆಲಸವನ್ನು ಗುತ್ತಿಗೆದಾರರು ಮಾಡುತ್ತಿಲ್ಲ ಮತ್ತು ನಗರ ಭಾಗದ ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲವೆಂಬ ದೂರು ಬಂದಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ದೇಶದಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಭಕ್ತರ ಸಂಘಟನೆಯಾಗಿ ಬಲಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಮಾನಸದಲ್ಲಿ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾಗಿ ಬದ್ಧತೆ ಮೆರೆದಿದ್ದಾರೆ. ರೈತರು ಜನಸಾಮಾನ್ಯರಿಗೆ ತಲುಪವ ಯೋಜನೆ ರೂಪಿಸಿದ್ದು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಮತ್ತು ರಾಷ್ಟ್ರಭಕ್ತರು ಮೋದಿ ಅವರನ್ನು 3ನೇ ಬಾರಿಗೆ ಆಯ್ಕೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಎಂದರು.

ಪ್ರಸ್ತುತ ಮಳೆಯಿಲ್ಲದೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಾದ್ಯಂತ ತೀವ್ರ ಬರಗಾಲ ತಲೆದೋರಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿ ಬಹುತೇಕ ಬೋರ್‌ವೆಲ್‌ಗಳು ಸಂಪೂರ್ಣವಾಗಿ ನೀರು ಬಾರದೆ ಬತ್ತಿಹೋಗಿವೆ. ವಿವಿ ಸಾಗರ ನಾಲೆಯಲ್ಲಿ ಪ್ರಸ್ತುತ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನೀರನ್ನು ಹರಿಸುತ್ತಿದ್ದು, ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹದ ಮಾಹಿತಿ ತರಿಸಿ, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಸಿಗೆಯಲ್ಲಿ ಹೆಚ್ಚು ನೀರು ಹರಿಸಲಾಗುವುದು ಎಂದರು.

ಇದೇ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಉದ್ಯಮಿ ಸದ್ಗುರು ಪ್ರದೀಪ್, ಲಿಂಗದೇವರು, ಪುರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ್ ಸದಸ್ಯರಾದ ದಾಳಿಂಬೆ ಗಿರೀಶ್, ಮಂಜುನಾಥ್, ನಾಗರಾಜು, ಮುಖಂಡರಾದ ಶಿವು ಮಠ, ಹೇರೂರು ಮಂಜುನಾಥ್, ಬಾಗೂರು ಅರುಣ್, ಪುರುಷೋತ್ತಮ್,ನಾಗರಾಜ್ ಜಮಾಪುರ, ಹಾಗೂ ಕಾರ್ಯಕರ್ತರು ಹಾಜರಿದ್ದರು.