ಸಾರಾಂಶ
ನಗರದ ಟಕ್ಕೆಯಲ್ಲಿರುವ ಕಿರಿಯರ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ, ಬಾಲಮಂದಿರದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಟಕ್ಕೆಯಲ್ಲಿರುವ ಕಿರಿಯರ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ ನೀಡಿ, ಬಾಲಮಂದಿರದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ಬಾಲಮಂದಿರದ ಅಡುಗೆ ಕೊಠಡಿ ವೀಕ್ಷಣೆ ನಡೆಸಿ, ಅಡುಗೆ ಕೊಠಡಿಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಮಕ್ಕಳಿಗೆ ಪೂರೈಸಬೇಕು. ಬಾಲಮಂದಿರದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಮಕ್ಕಳಿಂದ ಕುಂದು ಕೊರತೆ ಆಲಿಸಿದ ಅವರು, ಮಕ್ಕಳಿಗೆ ಆರೋಗ್ಯ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಬಾಲಮಂದಿರದ ಆವರಣವನ್ನು ಸ್ವಚ್ಛವಾಗಿಡಬೇಕು. ಉತ್ತಮ ಗುಣಮಟ್ಟದ ಆಹಾರ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವುದನ್ನು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ:ನಗರದ ಟಕ್ಕೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಕಟ್ಟಡ ಪರಿಶೀಲನೆ, ಆಹಾರ ಧಾನ್ಯಗಳ ಸಂಗ್ರಹ ಕೊಠಡಿ, ಒದಗಿಸುತ್ತಿರುವ ವೈದ್ಯಕೀಯ ಸೇವೆ ಮಾಹಿತಿ, ಅಡುಗೆ ಕೊಠಡಿ, ಆಹಾರದ ಗುಣಮಟ್ಟ ಹಾಗೂ ಕುಡಿಯುವ ನೀರು ಸೇರಿದಂತೆ ಕಲ್ಪಿಸಿರುವ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ನಿರಾಶ್ರಿತರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ತರಬೇತಿ ಹಾಗೂ ಕಟ್ಟಡದ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಿ, ಪರಿಸರ ಪ್ರಜ್ಞೆ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ನಿರಾಶ್ರಿತರೊಂದಿಗೆ ಸಂವಾದ ನಡೆಸಿ, ಅವರ ಯೋಗಕ್ಷೇಮ ವಿಚಾರಿಸಿದರು. ೧೪೨ ಪರುಷ ಹಾಗೂ ೩೩ ಜನ ಮಹಿಳೆಯರೂ ಸೇರಿದಂತೆ ೧೭೫ ನಿರಾಶ್ರಿತರಿದ್ದು, ಅವರ ಆರೋಗ್ಯದ ಹಿತ ದೃಷ್ಟಿಯಿಂದ ಈ ಕೇಂದ್ರದಲ್ಲಿ ಹೊರ ಗುತ್ತಿಗೆ ಆಧಾರದ ಇಬ್ಬರೂ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ನಿರಾಶ್ರಿತರಿಗೆ ಪ್ರತಿನಿತ್ಯ ಬೆಳಿಗ್ಗೆ ಯೋಗಭ್ಯಾಸ ಮಾಡಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಬಸವರಾಜ್ ಎಸ್ ನಾಟೀಕಾರ ಸೇರಿದಂತೆ ವಿವಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.