ಮ.ಬೆಟ್ಟದಲ್ಲಿ ಶಿವರಾತ್ರಿ, ಯುಗಾದಿ ಜಾತ್ರೆ ಸಿದ್ಧತೆಗೆ ಸೂಚನೆ

| Published : Feb 18 2025, 12:30 AM IST

ಮ.ಬೆಟ್ಟದಲ್ಲಿ ಶಿವರಾತ್ರಿ, ಯುಗಾದಿ ಜಾತ್ರೆ ಸಿದ್ಧತೆಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಸಂಬಂಧ ಶಾಸಕರಾದ ಎಂ.ಆರ್. ಮಂಜುನಾಥ್ ವರ್ಚುವಲ್ ಮೂಲಕ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪೂರ್ವಸಿದ್ದತಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಸೌಲಭ್ಯಕ್ಕೆ ಅಗತ್ಯ ಸಿದ್ಧತೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕೆಂದು ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ವರ್ಚುವಲ್ ಮೂಲಕ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭಾಗವಹಿಸುವ ಮೂಲಕ ಸಭೆ ನಡೆಸಿದರು. ಮಲೆಮಹದೇಶ್ವರ ಕ್ಷೇತ್ರಕ್ಕೆ ನಾಡಿನ ನಾನಾ ಭಾಗಗಳಲ್ಲದೇ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಜಾತ್ರೆಗೆ ಆಗಮಿಸಲಿದ್ದಾರೆ. ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಾಸ್ತವ್ಯ, ದಾಸೋಹ, ದೇವರ ದರ್ಶನಕ್ಕೆ ಅಗತ್ಯ ಸೌಕರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಕಲ್ಪಿಸಬೇಕು. ಹೀಗಾಗಿ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವುದರಿಂದ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು. ಪಾದಯಾತ್ರೆಯಲ್ಲಿ ಸಾಕಷ್ಟು ಮಂದಿ ಕ್ಷೇತ್ರಕ್ಕೆ ಆಗಮಿಸುವುದರಿಂದ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು, ಇತರೆ ತ್ಯಾಜ್ಯಗಳನ್ನು ಕೊಂಡೊಯ್ಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಜಾತ್ರಾ ಸಂದರ್ಭದಲ್ಲಿ ನೆರಳಿನ ವ್ಯವಸ್ಥೆ ಇರಬೇಕು. ಶೌಚಾಲಯ, ಸ್ನಾನದ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯರು, ಸಿಬ್ಬಂದಿ ನಿಯೋಜಿಸಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪಾದಯಾತ್ರಿಗಳು ಬರುವ ಹಿನ್ನೆಲೆಯಲ್ಲಿ ಕೌದಳ್ಳಿ ಆರೋಗ್ಯ ಕೇಂದ್ರದಲ್ಲಿಯೂ ಪೂರ್ಣ ಅವಧಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕು. ಪಾದಯಾತ್ರೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಜಾತ್ರಾ ಅವಧಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳು ಕಾರ್ಯಾಚರಣೆಯಾಗಲಿ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ತಮಿಳುನಾಡು ರಾಜ್ಯದ ಭಾಗಗಳಿಂದಲೂ ಅಲ್ಲಿನ ಸರ್ಕಾರಿ ಬಸ್ಸುಗಳು ಹೆಚ್ಚು ನಿಯೋಜನೆಯಾಗಲಿ. ನಿಗಮದ ಅಧಿಕಾರಿಗಳನ್ನು ಕ್ಷೇತ್ರಕ್ಕೆ ನಿಯೋಜಿಸಿ ಜನರ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳನ್ನು ಮುಂಚಿತವಾಗಿಯೇ ಹಾಕುವ ವ್ಯವಸ್ಥೆಯಾಗಲಿ. ಬಸ್ಸುಗಳಿಗೆ ಯಾವುದೇ ಕೊರತೆಯಾಗದಿರಲಿ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ, ಗಣ್ಯರು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡುವ ಕಾರ್ಯ ಸಮರ್ಪಕವಾಗಿರಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಸಿಬ್ಬಂದಿ ನಿಯೋಜನೆಯಾಗಬೇಕು. ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆ ಇನ್ನಿತರ ಕೈಂಕರ್ಯಗಳ ಬಗ್ಗೆ ಎಲ್.ಇ.ಡಿ ಮೂಲಕ ವೀಕ್ಷಣೆಗೆ ಅವಕಾಶವಾಗಬೇಕು. ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಯಾಗಬೇಕು. ಸುಸೂತ್ರವಾಗಿ ಜಾತ್ರೆ ನಡೆಯಲು ಪೂರಕವಾಗಿರುವ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದರು.

ಜಿಪಂ ಸಿಇಒ ಮೋನಾ ರೋತ್ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು. ಶುದ್ಧ ಕುಡಿಯುವ ನೀರು ಸಂಗ್ರಹಣೆ ಪೂರೈಕೆ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುವುದು. ಗ್ರಾಪಂ ವತಿಯಿಂದ ಜಾತ್ರಾ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಮಾತನಾಡಿ, ಶಿವರಾತ್ರಿ ಜಾತ್ರೆಗೆ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುತ್ತಿದೆ. ಇಬ್ಬರು ಡಿವೈಎಸ್‌ಪಿ, 9 ಇನ್ಸ್‌ಪೆಕ್ಟರ್, 32 ಸಬ್‌ಇನ್ಸ್‌ಪೆಕ್ಟರ್, 62 ಸಹಾಯಕ ಸಬ್‌ಇನ್ಸ್ ಪೆಕ್ಟರ್, 421 ಕಾನ್ಸ್ ಟೇಬಲ್, 98 ಮಹಿಳಾ ಪೊಲೀಸರು, 401 ಗೃಹ ರಕ್ಷಕರು, ಡಿಆರ್ 4 ತುಕಡಿ, ಕೆಎಸ್‌ಆರ್‌ಪಿ 1 ತುಕಡಿಯನ್ನು ನಿಯೋಜಿಸಲಾಗಿದೆ.

ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ ರಘು ಮಾತನಾಡಿ, ಮಹಾಶಿವರಾತ್ರಿ ಜಾತ್ರೆ ಫೆ.25 ರಿಂದ ಆರಂಭವಾಗಲಿದ್ದು ಮಾ.೧ ರವರೆಗೆ ನಡೆಯಲಿದೆ. ಯುಗಾದಿ ಜಾತ್ರಾ ಮಹೋತ್ಸವ ಮಾ.27 ರಿಂದ 30 ರವರೆಗೆ ಜರುಗಲಿದೆ. ಜಾತ್ರಾ ಅವಧಿಯಲ್ಲಿ ಭಕ್ತಾಧಿಗಳಿಗೆ ವಿಶೇಷ ದಾಸೋಹ ಇರಲಿದ್ದು, ಬೆಳಗ್ಗೆ 7 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರವಾಗಿ ನಡೆಯಲಿದೆ. ಭಕ್ತಾಧಿಗಳ ಮೂಲ ಸೌಕರ್ಯಕ್ಕಾಗಿ ಎಲ್ಲ ವ್ಯವಸ್ಥೆಗಳಿಗೆ ಕ್ರಮ ವಹಿಸಲಾಗಿದೆ ಎಂದರು.

ಸಾಲೂರು ಬೃಹನ್ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿ, ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗಂಗನತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ.ಬಿ, ಮರಿಸ್ವಾಮಿ, ಆರ್‌ಎಸ್.ಕುಮಾರ ವಿಜಯ, ದೇವಾಲಯದ ಅರ್ಚಕರಾದ ಕೆ.ವಿ. ಮಾದೇಶ್, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಜಾನಪದ ಜಾತ್ರೆ ಮುಂದೂಡಿಕೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಘಟಕ ಉಪಯೋಜನೆಯಡಿ ಫೆ.21ರಂದು ಮಲೆಮಹದೇಶ್ವರಬೆಟ್ಟದಲ್ಲಿ ನಿಗದಿಯಾಗಿದ್ದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮುಂದೂಡಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.