ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ವಿತರಣೆಯಲ್ಲಿ ಉಂಟಾಗಿರುವ ಲೋಪದೋಷಗಳು ಮತ್ತು ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಸಿದ ಶಾಸಕ ಸಿಮೆಂಟ್‌ ಮಂಜು ಅಧಿಕಾರಿಗಳು ಹಾಗೂ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.ಸಭೆಯಲ್ಲಿ ಗ್ಯಾಸ್ ಸಿಲಿಂಡರ್‌ ಬುಕ್ಕಿಂಗ್ ಮಾಡಿದ ಬಳಿಕ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಸಿಲಿಂಡರ್‌ ವಿತರಣೆ ಆಗದಿರುವುದು, ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ, ದಾಸ್ತಾನು ಕೊರತೆ ಹಾಗೂ ವಿತರಕರ ನಿರ್ಲಕ್ಷ್ಯದ ಕುರಿತು ಚರ್ಚೆ ನಡೆಯಿತು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ಸ್ಥಳೀಯವಾಗಿ ಸಮಸ್ಯೆ ಉಲ್ಬಣಗೊಳ್ಳದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಗೆ ಬುಕ್ಕಿಂಗ್ ಮಾಡಿದ ಬಳಿಕ ನಿಗದಿತ ಅವಧಿಯೊಳಗೆ ವಿತರಣೆ ಮಾಡಬೇಕು. ಗ್ರಾಹಕರು ಸಿಲಿಂಡರ್‌ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ವಿತರಣೆಯಲ್ಲಿ ನಡೆಯುತ್ತಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ, ಮುಂದಿನ ದಿನಗಳಲ್ಲಿ ಯಾವುದೇ ನಿರ್ಲಕ್ಷ್ಯ ಮರುಕಳಿಸದಂತೆ ವಿತರಕರು ಎಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಲಾಯಿತು. ಗ್ಯಾಸ್ ವಿತರಣೆಯಲ್ಲಿ ಕಂಡುಬರುವ ಅಕ್ರಮ, ದುರ್ಬಳಕೆ ಹಾಗೂ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಇದೇ ಪರಿಸ್ಥಿತಿ ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಲ್ಲದೆ, ಯಾವ ಕಂಪನಿಯ ಎಷ್ಟು ಸಿಲಿಂಡರ್‌ ದಾಸ್ತಾನು ಲಭ್ಯವಿದೆ, ಬುಕ್ಕಿಂಗ್ ಪ್ರಮಾಣ ಎಷ್ಟು, ವಿತರಣೆಯಲ್ಲಿ ಎಷ್ಟು ದಿನಗಳ ಅಂತರ ಉಂಟಾಗಿದೆ ಎಂಬ ವಿವರಗಳನ್ನು ಪ್ರತಿದಿನ ಆಹಾರ ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು, ಗ್ಯಾಸ್ ಕಂಪನಿ ಅಧಿಕಾರಿಗಳು ಹಾಗೂ ವಿತರಕರಿಗೆ ಸೂಚಿಸಲಾಯಿತು. ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಯಾವುದೇ ಗೊಂದಲ ಅಥವಾ ಅಸಮಾಧಾನ ಉಂಟಾಗದಂತೆ ಶಾಂತಿಯುತವಾಗಿ ಸೇವೆ ನೀಡಬೇಕು ಎಂಬುದಕ್ಕೂ ಸಭೆಯಲ್ಲಿ ವಿಶೇಷವಾಗಿ ಒತ್ತು ನೀಡಲಾಯಿತು.ಸಭೆಯಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು, ಗ್ಯಾಸ್ ಕಂಪನಿಗಳ ಪ್ರತಿನಿಧಿಗಳು ಹಾಗೂ ವಿತರಕರು ಉಪಸ್ಥಿತರಿದ್ದರು.