ಸಾಲ ಅರ್ಜಿಗಳ ವಿಲೇವಾರಿಗೆ ಬ್ಯಾಂಕುಗಳಿಗೆ ಸೂಚನೆ: ಸಿಇಒ ಜಿ. ಪ್ರಭು

| Published : Jan 11 2024, 01:30 AM IST

ಸಾರಾಂಶ

ಸಾಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಬ್ಯಾಂಕುಗಳಿಗೆ ಜಿಲ್ಲಾ ಪಂಚಾಯತ್‌ ಸಿಇಒ ಜಿ. ಪ್ರಭು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಜ.20 ರೊಳಗಾಗಿ ತಪ್ಪದೇ ವಿಲೇವಾರಿ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಎಲ್ಲಾ ಬ್ಯಾಂಕ್‌ಗಳಿಗೂ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿವಿಧ ಇಲಾಖೆ ಹಾಗೂ ನಿಗಮಗಳಡಿ ಅನುಷ್ಠಾನವಾಗುವ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳು ಬ್ಯಾಂಕುಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ವಿನಾಕಾರಣ ತಿರಸ್ಕರಿಸಬಾರದು. ಸರ್ಕಾರದಿಂದ ಶೇ.೨೫ ರಿಂದ ಶೇ. ೯೦ರವರೆಗೂ ಸಹಾಯಧನ ಸೌಲಭ್ಯ ನೀಡಿದ್ದರೂ ಸಾಲ ನೀಡದೆ ಫಲಾನುಭವಿಗಳನ್ನು ಕಾಯಿಸುವುದು ಸರಿಯಲ್ಲ. ಬರಗಾಲ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರು, ಬಡವರು, ಮಹಿಳೆಯರು, ನಿರ್ಗತಿಕರ ಅರ್ಜಿಗಳಿಗೆ ಆದ್ಯತೆ ಮೇಲೆ ಸಾಲ ಮಂಜೂರಾತಿ ನೀಡಬೇಕು ಎಂದು ಸೂಚಿಸಿದರು.

ಕೆಲವು ರೈತರಿಗೆ ಸಾಲದ ಅರ್ಜಿಯೊಂದಿಗೆ ಬ್ಯಾಂಕಿಗೆ ಸಲ್ಲಿಸುವ ದಾಖಲೆಗಳ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಅಂತಹ ಮುಗ್ಧ ರೈತರಿಗೆ ದಾಖಲೆಗಳ ಸಲ್ಲಿಕೆ ಬಗ್ಗೆ ಇಲಾಖಾಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಇದರಿಂದ ದಾಖಲೆಗಳ ಕೊರತೆಯಿಂದ ಅರ್ಜಿ ತಿರಸ್ಕೃತವಾಗುವುದನ್ನು ತಡೆಯಬಹುದು. ಬ್ಯಾಂಕುಗಳಲ್ಲಿ ತಿರಸ್ಕೃತವಾದ ಸಾಲದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಮರು ಸಲ್ಲಿಕೆ ಮಾಡಲು ಸಂಬಂಧಿತ ಇಲಾಖೆಗಳು ಫಲಾನುಭವಿಗಳಿಗೆ ಸೂಚಿಸಬೇಕು. ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡದೆ ೩ ತಿಂಗಳಿಗೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುವ ಬ್ಯಾಂಕುಗಳ ವಿರುದ್ಧ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿಯವರಿಗೆ ಮಾತ್ರ ಸಾಲ ನೀಡಲು ಆಸಕ್ತಿ ತೋರುವ ಬ್ಯಾಂಕುಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಕಳೆದ ನವೆಂಬರ್ ಮಾಹೆಯಲ್ಲಿ ನಗರದಲ್ಲಿ ಒಂದೇ ಕುಟುಂಬದ ೫ ಮಂದಿ ಸಾಲದ ಬಡ್ಡಿ ಹಣ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದರು. ಬ್ಯಾಂಕಿನಿಂದ ಸಕಾಲದಲ್ಲಿ ಸಾಲ ದೊರೆತಿದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಯಾವುದೇ ಸಾಲದ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡಬೇಕು. ಮುಂದಿನ ಸಭೆಯೊಳಗೆ ಬ್ಯಾಂಕುಗಳು ಸುಧಾರಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕ್ಕೆ ಗುರಿಯಾಬೇಕಾಗುತ್ತದೆ. ಇದು ಅಂತಿಮ ಎಚ್ಚರಿಕೆ ಎಂದು ತಿಳಿಸಿದರಲ್ಲದೆ ಸಾಲ ಮಂಜೂರಾತಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಎಚ್.ಡಿ.ಎಫ್.ಸಿ. ಬ್ಯಾಂಕಿನ ವಿರುದ್ಧ ಶಿಸ್ತು ಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ದೇಶಿಸಿದರು.

ಆರ್ಥಿಕ ವರ್ಷಾಂತ್ಯ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾಗಬೇಕು. ಡಾ.ಬಿ.ಆರ್‌. ಅಂಬೇಡ್ಕರ್ ಅಭಿವೃದ್ಧಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಆದಿ ಜಾಂಬವಂತ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ನೀಡುವಲ್ಲಿ ಹಿನ್ನಡೆ ತೋರುವ ಬ್ಯಾಂಕುಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ)ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರಲ್ಲದೆ ಸಭೆಗೆ ಗೈರು ಹಾಜರಾದ ಬ್ಯಾಂಕಿನ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದೆಂದು ಎಚ್ಚರಿಸಿದರು.

ನಂತರ ಕೃಷಿ, ತೋಟಗಾರಿಕೆ, ಕೈಗಾರಿಕೆ, ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಡಿ ಸಾಲ ವಿತರಣೆಯಾಗಿರುವ ಬಗ್ಗೆ ಪ್ರಗತಿ ಪರಿಶೀಲಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ ವಾರ್ಷಿಕ ಸಾಲ ಯೋಜನೆಯಡಿ ೪೩೮೮.೩೦ ಕೋಟಿ ರು.ಗಳ ಸಾಲ ನೀಡಲು ಗುರಿ ಹೊಂದಲಾಗಿತ್ತು. ಇದರಲ್ಲಿ ೨೭೧೮.೧೯ ಕೋಟಿ ರು.ಗಳ ಕೃಷಿ ಸಾಲ, ಕೃಷಿಗೆ ಪೂರಕವಾದ ಚಟುವಟಿಕೆಗಳಿಗಾಗಿ ೩೧೫.೩೨ ಕೋಟಿ ರು., ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ ೧೩೬೬.೭೩ ಕೋಟಿ ರು. ಹಾಗೂ ವ್ಯಾಪಾರ ಮತ್ತು ಸೇವೆಗಳಿಗಾಗಿ ೨೬೦.೯೬ ಕೋಟಿ ರು. ಸೇರಿದಂತೆ ೪೬೬೧.೨೦ ಕೋಟಿ ರು.ಗಳ ಸಾಲ ಒದಗಿಸಲಾಗಿದೆ ಈ ಪೈಕಿ ೪೬೬೧.೨೦ಕೋಟಿ ರು.ಗಳ ಸಾಲ ನೀಡುವ ಮೂಲಕ ಶೇ.೧೦೬ರಷ್ಟು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವುದರಿಂದ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮೂಲಕ ಜಮೆಯಾಗುವ ಯಾವುದೇ ಗ್ಯಾರಂಟಿ ಯೋಜನೆಗಳ ಹಣವನ್ನು ವಜಾ ಮಾಡದಂತೆ ಬ್ಯಾಂಕುಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಬಾರ್ಡ್ ಬ್ಯಾಂಕಿನಿಂದ ಹೊರತಂದಿರುವ ಜಿಲ್ಲೆಯ ಸಂಭಾವ್ಯತಾಯುಕ್ತ ಸಾಲ ಯೋಜನಾ ಪುಸ್ತಕ ಹಾಗೂ ಜಿಲ್ಲಾ ಪಂಚಾಯತಿಯಿಂದ ಹೊರತಂದಿರುವ ೨೦೨೪ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ನಬಾರ್ಡ್‌ನ ಕೀರ್ತಿಪ್ರಭಾ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.