ಸಾರಾಂಶ
ಬಿಜೆಪಿ ಮಹಿಳಾ ಮೋರ್ಚಾ, ಸೋನಿಯಾ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಾಂವಿಧಾನಿಕ ಹುದ್ದೆ
ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ ಹೇಳಿಕೆ ಖಂಡಿಸಿ ಭಾನುವಾರ ನಗರದ ದುರ್ಗದಬೈಲ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸೋನಿಯಾ ಗಾಂಧಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಡ ಮಹಿಳೆ ಎಂದು ಕರೆಯುವ ಮೂಲಕ ದೇಶದ ಸಾಂವಿಧಾನಿಕ ಹುದ್ದೆಯನ್ನು ಹಾಗೂ ಬುಡಕಟ್ಟು ಸಮುದಾಯವನ್ನು ಅವಮಾನಿಸಿದ ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಹೇಳಿಕೆ ಖಂಡಿಸುತ್ತೇವೆ. ಕಾಂಗ್ರೆಸ್‌ನವರು ಸದಾ ಒಂದಿಲ್ಲೊಂದು ಕ್ಷುಲ್ಲಕ, ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಹಿಂದುಳಿದ ವರ್ಗದವರು, ಬುಡಕಟ್ಟು ಜನಾಂಗದವರನ್ನು ಅವಮಾನಿಸುತ್ತ ಬಂದಿದ್ದು, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ. ಇನ್ನಾದರೂ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಈ ಕೂಡಲೇ ಸೋನಿಯಾ ಗಾಂಧಿ ಬಹಿರಂಗ ಕ್ಷಮೆ ಕೋರಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಮಹಿಳಾ ಬಿಜೆಪಿ ಮೋರ್ಚಾದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ವೇಳೆ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರತಿಭಾ ಪವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ ಶೇಜವಾಡಕರ, ನಿಕಟಪೂರ್ವ ಅಧ್ಯಕ್ಷ ಪ್ರಭು ನವಲಗುಮಠ, ಮುಖಂಡರಾದ ಚಂದ್ರಶೇಖರ ಗೋಕಾಕ, ವೆಂಕಟೇಶ್ ಕಾಟವೆ, ಜಗದೀಶ ಬುಳ್ಳಾನವರ, ಪ್ರವೀಣ ಕುಬಸದ, ಅನೂಪ ಬಿಜವಾಡ, ದೀಪಕ ಲಾಳಗೆ, ರಾಜು ಕೋರ್ಯಾನಮಠ, ವಿನಾಯಕ ಲದವಾ, ಅನುರಾಧಾ ಚಿಲ್ಲಾಳ, ಪೂರ್ಣಿಮಾ ಶಿಂದೆ, ನಾಗರತ್ನಾ ಬಳ್ಳಾರಿ, ಪೂಜಾ ರಾಯ್ಕರ, ಸವಿತಾ ಚವ್ಹಾಣ, ಗೋಪಾಲ ಕಲ್ಲೂರ ಹಲವರಿದ್ದರು.