ಮೆರವಣಿಗೆಗೆ ಅವಮಾನಿಸಿ, ಕೊಲ್ಲುವ ಸಂಚಿನ ಬಗ್ಗೆ ದೂರು

| Published : Sep 22 2024, 01:58 AM IST

ಮೆರವಣಿಗೆಗೆ ಅವಮಾನಿಸಿ, ಕೊಲ್ಲುವ ಸಂಚಿನ ಬಗ್ಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವ ನಗರ ಠಾಣೆಗೆ ಹೆಡ್ ಕಾನ್‌ಸ್ಟೆಬಲ್ ಫಕೃದ್ದೀನ್ ಅಲಿ ನೀಡಿರುವ ದೂರಿನ ಎಫ್ಐಆರ್ ಪ್ರತಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಗಣೇಶ ಮೆರವಣಿಗೆಯನ್ನು ಅವಮಾನಿಸಿ, ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ 80-100 ಜನ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಆಘಾತಕಾರಿ ಸಂಗತಿಯು ಇದೀಗ ಹೊರ ಬಿದ್ದಿದೆ.

ಗಣೇಶ ಮೆರವಣಿಗೆಯಲ್ಲಿದ್ದವರನ್ನು ಕೊಲ್ಲುವ ಸಂಚಿನೊಂದಿಗೆ ಅನ್ಯ ಕೋಮಿನ ಗುಂಪು ಕಲ್ಲು ತೂರಾಟ ನಡೆಸಿದ್ದ ಬಗ್ಗೆ ಸ್ಪೋಟಕ ವಿಚಾರವು ಸ್ವತಃ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಇಲ್ಲಿನ ಬಸವ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಬಯಲಾಗಿದೆ.

ಬಸವ ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಫಕೃದ್ದೀನ್ ಅಲಿ ಸೆ.19ರಂದು ಸಂಜೆ ಕೆಆರ್ ರಸ್ತೆಯ ಮುದೇಗೌಡ್ರ ಮಲ್ಲಮ್ಮ ಮುರಿಗೆಪ್ಪ ಪ್ರೌಢಶಾಲೆ ಪಕ್ಕದ ಪಾರ್ಕ್‌ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸುಮಾರು70-80 ಜನ ಮುಸ್ಲಿಂ ಯುವಕರ ಗುಂಪು ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳ 13ನೇ ದಿನದ ವಿಸರ್ಜನಾ ಮೆರವಣಿಗೆಗಳು ಇದ್ದ ದಿನ ಮೆರವಣಿಗೆಗೆ ಅ‍ವಮಾನಿಸಲು, ಮೆರವಣಿಗೆಯಲ್ಲಿದ್ದವರ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.

ಕೆಆರ್ ರಸ್ತೆ, ಚೌಕಿಪೇಟೆಗಲ್ಲಿ ಅಂದು ಸಂಜೆ ಮೆರ‍ಣಿಗೆಗಳ ಬಂದೋಬಸ್ತ್‌ನಲ್ಲಿರುವಾಗ ಕೆಆರ್ ರಸ್ತೆಯಲ್ಲಿದ್ದಾಗ ಅರಳಿ ಮರ ವೃತ್ತದ ಕಡೆಯಿಂದ ಬಂದ ವೆಂಕಾ ಭೋವಿ ಕಾಲನಿಯ ಕಂಟಮ್ಮ ದೇವಿ ಯುವಕರ ಸಂಘದ ಮೆರವಣಿಗೆ ಸಂಜೆ ಕೆಆರ್ ರಸ್ತೆಯ ಜಗಳೂರು ಬಸ್ಸು ನಿಲ್ದಾಣದ ಪಕ್ಕ ವಾಟರ್ ಟ್ಯಾಂಕ್‌ ಸಮೀಪ ಬರುತ್ತಿದ್ದಂತೆಯೇ ನರಸರಾಜ ಪೇಟೆ ಮುಖ್ಯರಸ್ತೆ ಕಡೆಯಿಂದ ಬಂದ ಸುಮಾರು 70-80 ಮುಸ್ಲಿಂ ಯುವಕರು ಏಕಾಏಕಿ ಮೆರವಣಿಗೆ ಕಡೆಗೆ ಕಲ್ಲು ತೂರಿದರು ಎಂದು ಅವರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೂ ಕಲ್ಲಿನೇಟು ಬಿದ್ದು, ಚಿಕ್ಕಪುಟ್ಟ ಗಾಯಗಳಾಗಿವೆ. ತಕ್ಷಣ ಗುಂಪನ್ನು ಚೆದುರಿಸಿ, ಮೆರವಣಿಗೆ ಮುಂದೆ ಸಾಗಿಸಲಾಯಿತು. ಗಲಾಟೆ ಮಾಡಿದ ಯುವಕರು ಮುಸ್ಲಿಂ ಕೋಮಿಗೆ ಸೇರಿದವರಾಗಿದ್ದು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಧಾರ್ಮಿಕ ಶ್ರದ್ಧೆಯನ್ನು ಅವಮಾನಿಸುವ ಉದ್ದೇಶದಿಂದ ಹಾಗೂ ಮೆರವಣಿಗೆಯಲ್ಲಿದ್ದವರನ್ನು ಕೊಲೆ ಮಾಡುವ ಉದ್ದೇಶದಿಂದ ಪ್ರಚೋದನಾಕಾರಿಯಾಗಿ ಕಲ್ಲು ತೂರಾಟ ಮಾಡಿರುವದು ತಿಳಿದು ಬಂದಿದೆ ಎಂದು ಅವರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಗಲಾಟೆ ಮಾಡಿ, ಕಲ್ಲು ತೂರಾಟ ನಡೆಸಿದ ಪ್ರಮುಖ 10ಜನರ ಜೊತೆಗೆ ಇತರೆ ಸುಮಾರು 70-80 ಯುವಕರ ಗುಂಪು ಇದ್ದು, ಅವರನ್ನು ಮರಳಿ ನೋಡಿದರೆ ಗುರುತಿಸಬಹುದು. ಕಲ್ಲು ತೂರಾಟ ಮಾಡಿದವರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಸವ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಫಕೃದ್ದೀನ್ ಅಲಿ ಮನವಿ ಮಾಡಿದ್ದಾರೆ. ಹೆಡ್ ಕಾನ್ಸ್‌ಟೇಬಲ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ಪ್ರತಿಗಳು ಮಾಧ್ಯಮಗಳ ಲಭ್ಯವಾಗಿದ್ದು. ಸ್ವತಃ ಮಾಧ್ಯಮದವರನ್ನೂ ಬೆಚ್ಚಿ ಬೀಳಿಸಿದ ಸಂಗತಿ ಇದಾಗಿತ್ತು.