ದಲಿತ ಸಂಘಟನೆಗಳ ಕಾರ್ಯಕರ್ತರು ಬೌದ್ಧಿಕ ಜ್ಞಾನ ಬೆಳೆಸಿಕೊಂಡಲ್ಲಿ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ. ಬಿ.ಕೃಷ್ಣಪ್ಪ ಅವರ ಅನುಯಾಯಿಗಳು ಎಂದು ಹೇಳಲು ಅರ್ಹರಾಗುತ್ತಾರೆಂದು ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಅಭಿಪ್ರಾಯಪಟ್ಟಿದ್ದಾರೆ.
- ಅಂಬೇಡ್ಕರ್ 69ನೇ ಮಹಾಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ರುದ್ರಪ್ಪ ಅಭಿಮತ
- - -ಕನ್ನಡಪ್ರಭ ವಾರ್ತೆ ಹರಿಹರ
ದಲಿತ ಸಂಘಟನೆಗಳ ಕಾರ್ಯಕರ್ತರು ಬೌದ್ಧಿಕ ಜ್ಞಾನ ಬೆಳೆಸಿಕೊಂಡಲ್ಲಿ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ. ಬಿ.ಕೃಷ್ಣಪ್ಪ ಅವರ ಅನುಯಾಯಿಗಳು ಎಂದು ಹೇಳಲು ಅರ್ಹರಾಗುತ್ತಾರೆಂದು ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 69ನೇ ಮಹಾಪರಿನಿಬ್ಬಾಣ ನಿಮಿತ್ತ ನಗರದ ಹೊರವಲಯದ ಮೈತ್ರಿವನದಲ್ಲಿ ಶನಿವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನೆ, ವೈಚಾರಿಕ ಬೆಳಕಿನೆಡೆಗೆ ಸಾಗೋಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಧ್ಯಯನವಿಲ್ಲದೇ, ವಿಚಾರ ತಿಳಿಯದೇ ಅಂಬೇಡ್ಕರ್ ಮತ್ತು ಪ್ರೊ.ಕೃಷ್ಣಪ್ಪ ಅವರ ಹೆಸರು ಹೇಳುತ್ತಾ ಸಾಗಿದರೆ, ನಮ್ಮ ಹೋರಾಟ ಜೊಳ್ಳಾಗುತ್ತದೆ. ಅಂತಃಸತ್ವದಿಂದ ಗಟ್ಟಿಯಾದರೆ, ಮಾತ್ರ ಆ ಮಹನೀಯರು ಮಾಡಿದ ತ್ಯಾಗ, ಹೋರಾಟಕ್ಕೆ ಬೆಲೆ ಸಿಗುತ್ತದೆ. ಜೊತೆಗೆ ದಲಿತರ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ಪ್ರತಿಪಾದಿಸಿದರು.ಕೊಪ್ಪಳ ಭಾಗದಲ್ಲಿ ಕ್ಷೌರ ಮಾಡುವ ವಿಚಾರದಲ್ಲಿ ದಲಿತ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಸ್ಥಳಕ್ಕೆ ಆ ಭಾಗದ ಡಿಸಿ, ಎಸಿ, ತಹಶೀಲ್ದಾರ್ ಭೇಟಿ ನೀಡಿಲ್ಲ, ಈ ಭಾಗದ ಯಾವ ದಲಿತ ಸಂಘಟನೆಗಳು ಈ ವಿಷಯವನ್ನಿಟ್ಟುಕೊಂಡು ಹೋರಾಟ ಮಾಡಿದ್ದೀರಿ, ಸ್ಥಳಕ್ಕೆ ಹೋಗಿ ಬಂದಿದ್ದೀರಿ ಎಂದು ಪ್ರಶ್ನಿಸಿದರು.
ನಗರದ ಎ.ಕೆ.ಕಾಲೋನಿಯಲ್ಲಿರುವ ಪ್ರೊ.ಬಿ.ಕೃಷ್ಣಪ್ಪರು ಹುಟ್ಟಿದ ಮನೆಯನ್ನು ಸ್ಮಾರಕ ಮಾಡುವಷ್ಟು ವಿಸ್ತಾರವಾಗಿಲ್ಲ. ಆ ಭಾಗದಲ್ಲಿ ಚಿಕ್ಕದಾದ ಗುರುತು ಮಾಡಿ ನಗರದ ಬೇರೆ ಭಾಗದಲ್ಲಿ ಸ್ಮಾರಕ ರಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಹಳೆಯ ಕೋರ್ಟ್ ನಿವೇಶನದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಹಾಗೂ ಪ್ರೊ.ಬಿ.ಕೃಷ್ಣಪ್ಪರ ಸ್ಮಾರಕ ನಿರ್ಮಾಣದ ವಿಷಯವನ್ನು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಅಂಬೇಡ್ಕರ್ ಜಯಂತಿ ದಿನವನ್ನು ಜಾಗತಿಕ ಬೌದ್ಧಿಕ ದಿನವಾಗಿ ಘೋಷಿಸಬೇಕು. ಅಂಬೇಡ್ಕರ್ ಮತ್ತು ಕೃಷ್ಣಪ್ಪ ಅವರು ಇರದಿದ್ದರೆ, ದೇಶದ ದಲಿತರ ಸ್ಥಿತಿ ಹೀನಾಯವಾಗಿರುತ್ತಿತ್ತು. ಬದುಕಿನ ಕೊನೆಗಾಲದಲ್ಲಿ ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ಮತಾಂತರವಾಗಿದ್ದು, ದೇಶದ ಸಾಮಾಜಿಕ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಎಚ್.ಜೆ. ಹಾಗೂ ನಗರಸಭೆ ಮಾಜಿ ಸದಸ್ಯ ಎಂ.ಬಿ.ಅಣ್ಣಪ್ಪ ಮಾತನಾಡಿ, ಧರ್ಮಾಚರಣೆ ಮತ್ತು ಮೌಢ್ಯತೆ ಭಿನ್ನವಾಗಿದೆ. ಧರ್ಮದ ಹೆಸರಲ್ಲಿ ಮೌಢ್ಯ, ಕಂದಾಚಾರ ಆಚರಣೆಗಳ ಬಿಟ್ಟು ವೈಜ್ಞಾನಿಕತೆ, ವೈಚಾರಿಕತೆಗೆ ಬೆಳೆಸಿಕೊಳ್ಳಬೇಕು ಎಂದರು.
ಕಬ್ಬಳಿ ಮೈಲಪ್ಪ, ಗ್ರಾಮಾಂತರ ಪಿಎಸ್‌ಐ ಯುವರಾಜ್ ಕಂಬಳಿ, ಮುಖಂಡರಾದ ಎಂ.ಬಿ.ಅಣ್ಣಪ್ಪ, ಸುಭಾಷ್‌ಚಂದ್ರ ಭೋಸ್, ಎಂ.ಮಂಜುನಾಥ್, ಬಿ.ಮಗ್ದುಮ್, ಹೂವಿನಮಡು ಅಂಜಿನಪ್ಪ, ರಾಜನಹಳ್ಳಿ ಮಂಜುನಾಥ್ ಜಿ.ಎಂ., ಜಿಗಳಿ ಆನಂದಪ್ಪ, ಪ್ರಕಾಶ್ ಮಂದಾರ ಹಾಜರಿದ್ದರು.- - -
-07HRR.02:ಮೈತ್ರಿವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿಬ್ಬಾಣ ದಿನ ಆಚರಿಸಲಾಯಿತು.