ಜಿಲ್ಲೆಯಾದ್ಯಂತ ಮತ್ತೆ ಚುರುಕುಗೊಂಡ ಮಳೆ: ಹಲವೆಡೆ ಹಾನಿ

| Published : May 26 2024, 01:33 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಬೆಳಿಗ್ಗೆವರೆಗೆ ಬಿಡುವಿಲ್ಲದೆ ಧಾರಾಕಾರವಾಗಿ ಸುರಿಯಿತು. ಶನಿವಾರ ಇಡೀ ದಿನ ಮೋಡದ ಕವಿದ ವಾತಾವರಣ ಇತ್ತು.

ಧರೆಗುರುಳಿದ ವಿದ್ಯುತ್ ಕಂಬಗಳು । ಸಂಪರ್ಕದಲ್ಲಿ ವ್ಯತ್ಯಯ । ಜಿಲ್ಲೆಯಲ್ಲಿ ಪ್ರತಿಕೂಲ ಹವಾಮಾನ । ನದಿಗಳ ನೀರಿನ ಮಟ್ಟದಲ್ಲಿ ಏರಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಬೆಳಿಗ್ಗೆವರೆಗೆ ಬಿಡುವಿಲ್ಲದೆ ಧಾರಾಕಾರವಾಗಿ ಸುರಿಯಿತು. ಶನಿವಾರ ಇಡೀ ದಿನ ಮೋಡದ ಕವಿದ ವಾತಾವರಣ ಇತ್ತು.

ಏಪ್ರಿಲ್‌ ಮಾಹೆಯಲ್ಲಿ ಅತಿ ಕಡಿಮೆ ಮಳೆ ಕಂಡಿದ್ದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮಲೆನಾಡಿನ ಪ್ರಮಾಣದಷ್ಟೇ ಮಳೆ ಮುಂದುವರಿದಿದೆ. ಕಳೆದ ಒಂದೆರಡು ದಿನ ಮಳೆ ಇಳಿಮುಖವಾಗಿತ್ತು. ಆದರೆ, ಶುಕ್ರವಾರ ರಾತ್ರಿ ಯಿಂದ ಮತ್ತೆ ಚುರುಕುಗೊಂಡಿದೆ.

ಕೊಪ್ಪ, ತರೀಕೆರೆ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಮಳೆ ಗಾಳಿಗೆ ವಿದ್ಯುತ್‌ ಕಂಬಗಳು ಬಿದ್ದು ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿ ಹುಲಿ ತಿಮ್ಮಾಪುರ, ಮಲ್ಲೇನಹಳ್ಳಿ, ಕೆಂಚಪುರ, ಗುಳ್ಳದ ಮನೆ ಸೇರಿದಂತೆ ಸುತ್ತಮುತ್ತ ಸುಮಾರು12ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಿದ್ದಿವೆ. ಗುಳ್ಳದಮನೆ- ದೊಡ್ಡ ಲಿಂಗೇನಹಳ್ಳಿ ನಡುವೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಾಗಿ ತಂದಿದ್ದ ಇಟಾಚಿ ಯಂತ್ರ ಸಮೀಪದಲ್ಲಿ ದೊಡ್ಡ ಮಟ್ಟದಲ್ಲಿ ಹಳ್ಳದ ನೀರು ಹರಿದು ಬಂದಿದ್ದರಿಂದ ಇಟಾಚಿ ಯಂತ್ರ ನೀರಿನಲ್ಲಿ ಮುಳುಗಡೆಯಾಗಿತ್ತು. ಗಿರಿ ಪ್ರದೇಶದಲ್ಲಿ ಪ್ರತಿದಿನ ಮಳೆ ಬೀಳುತ್ತಿರುವುದರಿಂದ ಕಲ್ಲತಗಿರಿ ಫಾಲ್ಸ್‌ ನಲ್ಲಿ ಬೆಳಿಗ್ಗೆ ಸ್ವಲ್ಪಮಟ್ಟಿಗೆ ನೀರು ಬಿದ್ದಿತಾದರೂ ನಂತರದಲ್ಲಿ ಮುಂದುವರಿ ಯಲಿಲ್ಲ, ಕಾರಣ, ಬೆಳಿಗ್ಗೆಯಿಂದ ಗಿರಿಯಲ್ಲಿ ಮಳೆ ಬಿಡುವು ನೀಡಿತ್ತು.

ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ 8 ಗಂಟೆಗೆ ಸ್ವಲ್ಪ ಪ್ರಮಾಣದಲ್ಲಿ ಆರಂಭವಾದ ಮಳೆ, 10 ಗಂಟೆ ನಂತರ ಜೋರಾಗಿದ್ದು ಬೆಳಿಗ್ಗೆ ವರೆಗೆ ನಿರಂತರವಾಗಿ ಬರುತ್ತಲೇ ಇತ್ತು. ಮೂಡಿಗೆರೆ ತಾಲೂಕಿ ನಾದ್ಯಂತ ಮಳೆಯಾಗಿದೆ. ಶೃಂಗೇರಿ ತಾಲೂಕಿನಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಶನಿವಾರ ಬೆಳಿಗ್ಗೆ ನಂತರ ಮಳೆಯ ಆರ್ಭಟ ಇಳಿಮುಖವಾಗಿತ್ತು. ಆದರೂ ಮುಂದುವರಿದಿತ್ತು.

ಕಳೆದ ಮೂರು ದಿನಗಳಿಂದ ಬಿಡುವು ನೀಡಿದ ಮುಂಗಾರು ಪೂರ್ವ ಮಳೆ ಶುಕ್ರವಾರ ನಡುರಾತ್ರಿ ಮಿಂಚು, ಗುಡುಗಿನ ಆರ್ಭಟದೊಂದಿಗೆ ಧಾರಕಾರವಾಗಿ ಸುರಿದಿದೆ. ಕೊಪ್ಪ ಗ್ರಾಮೀಣ ಪ್ರದೇಶಗಳಾದ ಕಾಚ್ಗಲ್ ಸಮೀಪದ ಆರೂರು ಜಂಕ್ಷನ್ ಬಳಿ 33 ಕೆವಿ ಯ ಮೂರ್ನಾಲ್ಕು ಕಂಬಗಳು ಉರುಳಿ ಬಿದ್ದಿವೆ, ಕುದ್ರೆಗುಂಡಿ ಸಮೀಪದ ತಲಮಕ್ಕಿ ಹಂತವಾನಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಒಟ್ಟಾರೆ, ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.ಮಳೆಯ ವಿವರ:

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಬಿದ್ದ ಮಳೆ ವಿವರ.

ಚಿಕ್ಕಮಗಳೂರು ನಗರ- 26.1 ಮಿ.ಮೀ., ವಸ್ತಾರೆ- 36.4, ಆಲ್ದೂರು- 47, ಸಂಗಮೇಶ್ವರಪೇಟೆ- 70, ಬ್ಯಾರವಳ್ಳಿ- 65.2, ಮಳಲೂರು- 21, ಕಳಸಾಪುರ- 16.6, ಕೊಪ್ಪ- 53, ಹರಿಹರಪುರ- 28.6, ಜಯಪುರ- 49.4, ಬಸರೀಕಟ್ಟೆ- 59.4, ಕಮ್ಮರಡಿ- 50.4, ಅಜ್ಜಂಪುರ- 18, ಶಿವನಿ- 32, ಬುಕ್ಕಾಂಬೂದಿ- 35, ಮೂಡಿಗೆರೆ- 20.6, ಕೊಟ್ಟಿಗೆಹಾರ- 27.4, ಜಾವಳಿ- 50, ಶೃಂಗೇರಿ- 66.6, ಕಿಗ್ಗಾ- 81.2, ಎನ್‌.ಆರ್‌.ಪುರ- 48, ಬಾಳೆಹೊನ್ನೂರು- 60, ಮೇಗರಮಕ್ಕಿ- 43, ತರೀಕೆರೆ- 24.1, ಅಮೃತಾಪುರ- 38.4, ಲಕ್ಕವಳ್ಳಿ- 36.5, ಕಡೂರು- 14.2, ಬೀರೂರು- 17.5 ಮಿ.ಮೀ. ಮಳೆ ಬಂದಿದೆ.

--

ಮರ ಉರುಳಿ ರಸ್ತೆ ಸಂಚಾರಕ್ಕೆ ಅಡ್ಡಿ

ಕಡೂರು: ಜೋರಾಗಿ ಸುರಿದ ಮಳೆಯಿಂದಾಗಿ ಕಡೂರು ತಾಲೂಕಿನ ಎಮ್ಮೇದೊಡ್ಡಿ ಭಾಗದ ಮರವೊಂದು ಉರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆ ನಡೆದಿದೆ.ತಾಲೂಕಿನ ಅಯ್ಯನ ಕೆರೆಗೆ ತೆರಳುವ ಎಮ್ಮೇದೊಡ್ಡಿ ಭಾಗದ ಲಕ್ಕೇನಹಳ್ಳಿ-ಸಿದ್ದರಹಳ್ಳಿ ಗ್ರಾಮದ ಮಾರ್ಗದ ಮದ್ಯೆ ಮರ ಹಾಗು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ ಇದರಿಂದ ಜನ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು ತಾಲೂಕಿನ ಪಂಚನಹಳ್ಳಿ ಹೋಬಳಿಯ ಉಪ್ಪಿನ ಹಳ್ಳಿ ಗ್ರಾಮದಲ್ಲಿ ಭರತಮ್ಮ ಕೊಂ ಮಹೇಶ್ವರಪ್ಪ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ ಅದೃಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

--

ಮಳೆ ಆರ್ಭಟಕ್ಕೆ ಧರೆಗುರುಳಿದ ವಿದ್ಯುತ್ ಕಂಬಗಳು । ವಿದ್ಯುತ್ ವ್ಯತ್ಯಯ

ಕೊಪ್ಪ: ಕೊಪ್ಪ ಕಳೆದ ಮೂರು ದಿನಗಳಿಂದ ಬಿಡುವು ನೀಡಿದ ಮುಂಗಾರು ಪೂರ್ವ ಮಳೆ ಶುಕ್ರವಾರ ನಡುರಾತ್ರಿ ಮಿಂಚು, ಗುಡುಗಿನ ಆರ್ಭಟದೊಂದಿಗೆ ಧಾರಕಾರವಾಗಿ ಸುರಿದಿದೆ. ಕೊಪ್ಪ ಗ್ರಾಮೀಣ ಪ್ರದೇಶಗಳಾದ ಕಾಚ್ಗಲ್ ಸಮೀಪದ ಆರೂರು ಜಂಕ್ಷನ್ ಹಾಗೂ ಪಟ್ಟಣದ ಹೊರವಲಯದ ಕೌರಿಗುಡ್ಡದಲ್ಲಿ ೩೩ ಕೆ.ವಿ.ಯ ಮೂರ್ನಾಲ್ಕು ಕಂಬಗಳು ಉರುಳಿ ಬಿದ್ದಿವೆ. ಕುದ್ರೆಗುಂಡಿ ಸಮೀಪದ ತಲಮಕ್ಕಿ ಹಂತವಾನಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಮೆಸ್ಕಾಂನವರು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಶನಿವಾರ ಬೆಳಗಿನಿಂದಲೆ ಮೋಡದ ವಾತಾವರಣವಿದೆ.ಕಳೆದ ೨೪ ಗಂಟೆಗಳಲ್ಲಿ ಕೊಪ್ಪ ೫೩ ಮಿ.ಮೀ, ಹರಿಹರಪುರ ೨೮.೬ ಮಿ.ಮೀ, ಜಯಪುರ ೪೯.೪ ಮಿ.ಮೀ, ಬಸ್ರಿಕಟ್ಟೆ ೫೯.೪ ಮಿ.ಮೀ, ಕಮ್ಮರಡಿ ೫೦.೪ ಮಿ.ಮೀ ಮಳೆ ಸುರಿದಿದೆ. ಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ವರ್ಷ ಮೇ. ೨೪ರವರೆಗೆ ಒಟ್ಟು ೮ ಸೆಂ.ಮೀ. ಮಳೆ ಸುರಿದಿತ್ತು. ಪ್ರಸ್ತುತ ವರ್ಷ ಮೇ.೨೪ರವರೆಗೆ ಒಟ್ಟು ೩೦.೯೯ ಸೆಂ.ಮೀ. ಮಳೆ ಪ್ರಮಾಣ ದಾಖಲಾಗಿದೆ.

--

ತರೀಕೆರೆಯಲ್ಲಿ ರಾತ್ರಿ ವೇಳೆ ಸುರಿದ ಧಾರಾಕಾರ ಮಳೆ

ಕನ್ನಡಪ್ರಭ ವಾರ್ತೆ, ತರೀಕೆರೆತರೀಕೆರೆ ಪಟ್ಟಣ ಮತ್ತು ಸುತ್ತಮುತ್ತ ಕಳೆದ ಎರಡು ದಿವಸಗಳಿಂದ ಧಟ್ಟ ಮಳೆ ಸುರಿಯುತ್ತಿದೆ. ಇಡೀ ದಿನ ಬಿಡುವು ನೀಡಿದ್ದ ಮಳೆ ಶುಕ್ರವಾರ ರಾತ್ರಿ 11.50 ರಿಂದ ಪಟ್ಟಣ ಮತ್ತು ಸುತ್ತಮುತ್ತ ಭಾರಿ ಗಾಳಿ ಸಹಿತ ಮಿಂಚು ಗುಡುಗಿನೊಂದಿಗೆ ಬಿಟ್ಟು ಬಿಟ್ಟು ಧಾರಾಕಾರವಾಗಿ ಮಳೆ ಶನಿವಾರ ಬೆಳಗಿನ ತನಕ ಸುರಿಯಿತು.

ಧಾರಾಕಾರ ಮಳೆಯಿಂದಾಗಿ ಪಟ್ಟಣದ ರಸ್ತೆ ಚರಂಡಿಗಳಲ್ಲಿ ಯಥೇಚ್ಚವಾಗಿ ನೀರು ತುಂಬಿ ಹರಿಯಿತು. ರಾತ್ರಿ ವೇಳೆಯಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಬಾರಿ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿತ್ತು, ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಮುಕ್ಕಾಲು ಅಡಿ ನೀರು ಹರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಕಲ್ಯಾಣ್ ಕುಮಾರ್ ನವಲೆ ತಿಳಿಸಿದ್ದಾರೆ.

ಸಮೀಪದ ಲಿಂಗದಹಳ್ಳಿ ಹೋಬಳಿಯಲ್ಲಿ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಹುಲಿ ತಿಮ್ಮಾಪುರದಲ್ಲಿ 3, ಮಲ್ಲೇನ ಹಳ್ಳಿಯಲ್ಲಿ 2, ಕೆಂಚಾಪುರದಲ್ಲಿ 3, ಗುಳ್ಳದಮನೆಯಲ್ಲಿ 2, ಮಲ್ಲೇನಹಳ್ಳಿಯಲ್ಲಿ 2 ಒಟ್ಟು 12 ವಿದ್ಯುತ್ ಕಂಬಗಳ ತಂತಿ ಮೇಲೆ ಮರ ಬಿದ್ದು ಮತ್ತು ಭಾರಿ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಲಿಂಗದಹಳ್ಳಿ ಹೋಬಳಿಯಲ್ಲಿ ಸುರಿದ ಮಳೆಯಿಂದಾಗಿ ಗುಳ್ಳದ ಮನೆ ದೊಡ್ಡಲಿಂಗೇನಹಳ್ಳಿ ಗ್ರಾಮದ ನಡುವೆ ನಡೆಯುತ್ತಿರುವ ರಸ್ತೆ ಕಾಮಗಾರಿ ಸ್ಥಳದಲ್ಲಿ ಸೇತುವೆ ಇದ್ದು ಹಳ್ಳದಲ್ಲಿ ನೀರು ಹರಿಯುತ್ತಿದ್ದು, ಹಳ್ಳದಲ್ಲಿ ಹೆಚ್ಚು ನೀರು ಹರಿದುದರಿಂದ ಅಲ್ಲಿದ್ದ ಇಟಾಚಿ ಯಂತ್ರ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಸಮೀಪದ ಲಕ್ಕವಳ್ಳಿಯಲ್ಲೂ ಶುಕ್ರವಾರ ರಾತ್ರಿ ಧಟ್ಟವಾಗಿ ಮಳೆ ಸುರಿದಿದೆ.ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 7

ಕೊಪ್ಪದ ಕಾಚ್ಗಲ್ ಸಮೀಪದ ಆರೂರು ಜಂಕ್ಷನ್ ಬಳಿ ವಿದ್ಯುತ್‌ ಕಂಬ ಬಿದ್ದಿರುವುದು.