ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ತಿಪಟೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಕೆ.ಆರ್. ಬಡವಾಣೆಯಲ್ಲಿ ಜ. 28ರಂದು ಅನುಸೂಯ ರಾಜ್ ಎಂಬ ಮಹಿಳೆ ದಿನಸಿ ಅಂಗಡಿಗೆ ಹೋಗುತ್ತಿರುವಾಗ, ಹಿಂದಿನಿಂದ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯ ಕೊರಳಿನಲ್ಲಿದ್ದ ಸುಮಾರು 80 ಗ್ರಾಂ ತೂಕದ 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆಂದು ದೂರು ನೀಡಿದ್ದ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ, ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿನಾಯಕ ಶೆಟಗೇರಿರವರ ಮಾರ್ಗಸೂಚನೆ ಮೇರೆಗೆ, ತಿಪಟೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ವೆಂಕಟೇಶ್, ಸಬ್ ಇನ್ಸ್‌ಪೆಕ್ಟರ್ ಡಿ.ಕೃಷ್ಣಪ್ಪ, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಿಕ್ಕಲಕ್ಕೇಗೌಡ, ಉಸ್ಮಾನ್ ಸಾಬ್ ಮತ್ತು ಸಿಬ್ಬಂದಿ ಮೋಹನ್‌ಕುಮಾರ್, ಮೋಹನ್, ಲೋಕೇಶ್, ಯತೀಶ್, ಸಾಗರ್ ಅಂಬಿಗೇರ್, ಮಂಜುನಾಥ ಕುಪ್ಪಾಡ, ಮನೋಜ್ ರವರು ಕಾರ್ಯಾಚರಣೆ ಮಾಡಿ, ಪ್ರಕರಣ ದಾಖಲಾದ ಕೇವಲ 10 ದಿನಗಳೊಳಗೆ ಅಂದರೆ ಫೆ.7ರಂದು ಆರೋಪಿಗಳಾದ ಇರ್ಪಾನ್ (35), ಉಪ್ಪಳಿ, ಚಿಕ್ಕಮಗಳೂರು ನಗರ, ಅಸ್ಫಾನ್ (23) ಟಿಪ್ಪು ನಗರ, ಚಿಕ್ಕಮಗಳೂರು ನಗರ ಹಾಗೂ ಅಖಿಬ್ ಶರೀಫ್ (24) ಬೇಲೂರು ತಾ. ಹಾಸನ ಜಿಲ್ಲೆ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಸದರಿ ಆರೋಪಿಗಳು ಕಡೂರು ರೈಲ್ವೆ ಸ್ಟೇಷನ್ ಬಳಿ ಕಳ್ಳತನ ಮಾಡಿದ್ದ, ಮಾರುತಿ 800 ಕಾರು ಹಾಗೂ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಲು ಉಪಯೋಗಿಸಿದ್ದ ಡಿಸ್ಕವರ್ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಈ ಮೂರು ಜನ ಆರೋಪಿಗಳು ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್‌ನಲ್ಲಿರುವ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಲು, ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್ ಸಲಕರಣೆ, ಒಂದು ಹರಿತವಾದ ಕಬ್ಬಿಣದ ಹಾರೆ ಸಮೇತ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ತಿಪಟೂರು ನಗರ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳಿಂದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ 5,40,000 ರು. ಮೌಲ್ಯದ ಕಾರು, ಬೈಕು, ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ವಿ. ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.