ರೇಷ್ಮೆ ಬೆಳೆಯಲ್ಲಿ ಮಾಸಿಕ ನಿವ್ವಳ 70 ಸಾವಿರ ರು.ಗಳಿಕೆ

| N/A | Published : May 11 2025, 01:31 AM IST / Updated: May 11 2025, 01:21 PM IST

ಸಾರಾಂಶ

ಐದು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ 10/5 ಅಳತೆಯಲ್ಲಿ ವಿ1 ತಳಿಯ ಮರಗಡ್ಡಿ ಹಿಪ್ಪುನೇರಳೆ ತೋಟ ನಿರ್ಮಿಸಿದ್ದಾರೆ

 ಅಂಶಿ ಪ್ರಸನ್ನಕುಮಾರ್‌

 ಮೈಸೂರು : ಟಿ. ನರಸೀಪುರ ತಾಲೂಕು ವಿಜಯಪುರದ ರಮೇಶ್‌ ಅವರು ರೇಷ್ಮೆ ಹಾಗೂ ಅಂತರ ಬೆಳೆಯಿಂದ ಭರ್ಜರಿ ಲಾಭ ಮಾಡುತ್ತಿದ್ದಾರೆ.

ಅವರಿಗೆ ಐದು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಈ ಪೈಕಿ ಎರಡು ಎಕರೆಯಲ್ಲಿ 10/5 ಅಳತೆಯಲ್ಲಿ ವಿ1 ತಳಿಯ ಮರಗಡ್ಡಿ ಹಿಪ್ಪುನೇರಳೆ ತೋಟ ನಿರ್ಮಿಸಿದ್ದಾರೆ. ಅಂತರ ಬೆಳೆಯಾಗಿ ರಾಗಿ, ನೆಲಗಡಲೆ, ಹಸಿಕಡಲೆ, ಮತ್ತು ಹಿಪ್ಪುನೇರಳೆ ನರ್ಸರಿ ಇತ್ತು. ಪ್ರಸ್ತುತ ತಲಾ ಒಂದು ಎಕರೆಯಲ್ಲಿ ರಾಗಿ, ಉದ್ದು ಇದೆ.ತೆಂಗು- 100, ನುಗ್ಗೆ-10, ನಿಂಬೆ- 2, ಮಾವು- 2 ಮರಗಳಿವೆ. ಮನೆ ಅಳತೆಗೆ ಬೇಕಾದ ಭತ್ತ, ತೊಗರಿ, ಅವರೆ, ಕಾಳುಗಳನ್ನು ಬೆಳೆದುಕೊಳ್ಳುತ್ತಾರೆ. ಮಿನಿ ಟ್ರ್ಯಾಕ್ಟರ್‌, ಟಿಲ್ಲರ್‌ ಮೊದಲಾದ ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಾರೆ.

ರೇಷ್ಮೆ ಇಲಾಖೆ ವತಿಯಿಂದ 4.13 ಲಕ್ಷ ರು. ಸಹಾಯಧನ ಪಡೆದಿದ್ದು, ರೇಷ್ಮೆ ಮನೆ, ಚಂದ್ರಿಕೆ ಸಹಿತ ತೋಟ ನಿರ್ಮಾಣಕ್ಕೆ ಬಳಸಿಕೊಂಡರು.

ಹಿಂದೆ 1,281 ಕೆಜಿ ರೇಷ್ಮೆಗೂಡನ್ನು ಉತ್ಪಾದಿಸಿ, ವಾರ್ಷಿಕ 6.65 ಲಕ್ಷ ರು, ಅಂತರ ಬೆಳೆಯಿಂದ 1 ಲಕ್ಷ ರು. ಆದಾಯ ಗಳಿಸುತ್ತಿದ್ದರು. ಪ್ರಸ್ತುತ ವಾರ್ಷಿಕ 1,500- 1600 ಕೆಜಿ ರೇಷ್ಮೆ ಉತ್ಪಾದಿಸಿ, ತಿಂಗಳಿಗೆ ಖರ್ಚು- ವೆಚ್ಚ ಕಳೆದು 60-70 ಸಾವಿರ ರು. ನಿವ್ವಳ ಆದಾಯ ಪಡೆಯುತ್ತಿದ್ದಾರೆ.

ಮೂಲತಃ ಕೋಲಾರದವನಾದ ನಾನು ಬೆಂಗಳೂರಿನಲ್ಲಿ ಹದಿನೈದು ವರ್ಷ ಜನರಲ್‌ ಸ್ಟೋರ್‌ ನಡೆಸಿದೆ. ಕೃಷಿಗೆ ಮರಳಬೇಕು ಎಂಬ ತವಕ ಇದ್ದೇ ಇತ್ತು. ಎಂಟು ವರ್ಷಗಳ ಹಿಂದೆ ವಿಜಯಪುರ ಬಳಿ ಜಮೀನು ಖರೀದಿಸಿ, ವ್ಯವಸಾಯದಲ್ಲಿ ತೊಡಗಿಸಿಕೊಂಡೆ. ಈಗ ರೇಷ್ಮೆ ಕೃಷಿಯಲ್ಲಿ ಯಶಸ್ವಿಯಾಗಿದ್ದೇನೆ. ಮುಂದೆ ಹಂತ ಹಂತವಾಗಿ ಹಸುಗಳು, ಮೇಕೆ, ಕುರಿ, ಮೀನು, ಕೋಳಿ ಸಾಕಾಣಿಕೆ ಮಾಡುವ ಉದ್ದೇಶ ಇದೆ ಎನ್ನುತ್ತಾರೆ ರಮೇಶ್‌.

ನಮ್ಮ ಜಮೀನಿನ ಮಣ್ಣಿನ ಫಲವತ್ತತೆ ಚೆನ್ನಾಗಿದೆ. ದ್ವಿದಳ ಧಾನ್ಯ ಬೆಳೆದ ನಂತರ ಅಪ್‌ ಸೆಣಬು ಸೇರಿಸಿ, ಮಳೆಗಾಲದಲ್ಲಿ ಜಮೀನಿನಲ್ಲಿಯೇ ಗೊಬ್ಬರ ಮಾಡುತ್ತೇವೆ. ರೈತ ಮಿತ್ರ ಎರೆಹುಳು ಮಣ್ಣಿನ ಪದರದಲ್ಲಿ ಹೇರಳವಾಗಿವೆ. ಯಾವ ಬೆಳೆ ಹಾಕಿದರೂ ಅತ್ಯುತ್ತಮವಾಗಿ ಬರುತ್ತದೆ. ನಾವು ನೀರನ್ನ ಯಥೇಚ್ಛವಾಗಿ ಬಳಸುವುದಿಲ್ಲ. ಮಿತವಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಜಮೀನಿಗೆ ಹಾಯಿಸುತ್ತೇವೆ. ಮನುಷ್ಯನ ಆರೋಗ್ಯದಂತೆ ಪರಿಸರದ ಆರೋಗ್ಯವನ್ನು ಕಾಪಾಡಬೇಕು. ಪರಿಸರ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಬೆಳೆಯೂ ಚೆನ್ನಾಗಿ ಬರುತ್ತದೆ. ಜಮೀನಿನ ಸುತ್ತಮುತ್ತ ಹಸಿರಿನ ವಾತಾವರಣ ಇದ್ದಲ್ಲಿ ಕೃಷಿ ಮಾಡುವಾಗ ನೆಮ್ಮದಿ ಇರುತ್ತದೆ ಎಂದರು.

ರೇಷ್ಮೆ ಕೃಷಿಯಲ್ಲಿನ ಸಾಧನೆಗಾಗಿ ರಮೇಶ್‌ ಅವರನ್ನು 2024 ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ತಲಕಾಡಿನಲ್ಲಿ ಕೃಷಿ ಪ್ರೋತ್ಸಾಹ ಎಂದು 4,500 ರು. ಬಹುಮಾನ ನೀಡಲಾಗಿದೆ. ಹಾಗೂ ಟಿ. ನರಸೀಪುರದಲ್ಲಿ ಕೂಡ ಅಭಿನಂದಿಸಲಾಗಿದೆ.

ಸಂಪರ್ಕ ವಿಳಾಸಃ

ರಮೇಶ್‌ ಬಿನ್‌ ಹುಚ್ಚಪ್ಪ

ವಿಜಯಪುರ

ತಲಕಾಡು ಹೋಬಳಿ,

ಟಿ. ನರಸೀಪುರ ತಾಲೂಕು.

ಮೈಸೂರು ಜಿಲ್ಲೆ

ಮೊ.97401 65530

ಕೃಷಿಯಿಂದ ಖಂಡಿತವಾಗಿ ರೈತರಿಗೆ ಉಪಯೋಗವಾಗುತ್ತದೆ. ರೈತರು ಹಣದ ಹಿಂದೆ ಹೋಗಬಾರದು. ಹಣದ ಹಿಂದೆ ಹೋದಲ್ಲಿ ಕೃಷಿಯಲ್ಲಿ ನಷ್ಟವಾಗಿಬಿಡುತ್ತದೆ. 10-15 ಸಾವಿರ ರು. ಸಂಬಳಕ್ಕೆ ಅವರಿವರ ಬಳಿ ಹೋಗಿ ನಿಲ್ಲುವ ಬದಲು ಸರಿಯಾಗಿ ಪ್ಲಾನ್‌ ಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡರೆ ತಿಂಗಳಿಗೆ 1-2 ಲಕ್ಷ ರು.ವರೆಗೂ ದುಡಿಯಬಹುದು. ರೇಷ್ಮೆ ಒಂದೇ ಅಲ್ಲ, ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು.

- ರಮೇಶ್‌ ವಿಜಯಪುರ