ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕುಡಿವ ನೀರಿನ ಯೋಜನೆಗಳಿಗೆ ಅಡ್ಡಿ ಪಡಿಸುವುದು, ವಿರೋಧಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದುರ್ಗ, ಅಜ್ಜಂಪುರ, ತರಿಕೆರೆ ಭಾಗದ ಗ್ರಾಮೀಣ ಪ್ರದೇಶಗಳಿಗೆ ಕುಡಿವ ನೀರು ಪೂರೈಕೆಗೆ ದಾವಣಗೆರೆ ಕೆಲವರು ವಿರೋಧಿಸುತ್ತಿದ್ದಾರೆ. ಕುಡಿವ ನೀರು ಪೂರೈಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಕುಡಿವ ನೀರನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದಿದೆ. ಹಾಗಾಗಿ ವಿರೋಧಿಸುವ ಮಂದಿ ಅರ್ಥ ಮಾಡಿಕೊಳ್ಳಬೇಕೆಂದು ಪರೋಕ್ಷವಾಗಿ ರೇಣುಕಾಚಾರ್ಯ ಹಾಗೂ ಅವರ ಅನುಯಾಯಿಗಳಿಗೆ ಮನವಿ ಮಾಡಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಎರಡು ಹಂತಗಳಲ್ಲಿ ಹೊಸದುರ್ಗ ಪಟ್ಟಡ ಕುಡಿವ ನೀರು ಯೋಜನೆಗೆ ಅನುಮತಿ ನೀಡಿ ಹಣ ಮಂಜೂರು ಮಾಡಿದೆ. ಇದಕ್ಕಾಗಿ ಭದ್ರಾ ಜಲಾಶಯದಲ್ಲಿ 1 ಟಿಎಂಸಿ ನೀರು ಕಾಯ್ದಿರಿಸಲಾಗಿದೆ. ದಾವಣಗೆರೆ ಮಂದಿಗೆ ನಾವೇನೂ ಪಾಕಿಸ್ತಾನದವರಲ್ಲ. ಕೃಷ್ಣಾ ನದಿ ಒಣಗಿದಾಗ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ. ಇದಲ್ಲದೇ ಮಹಾರಾಷ್ಟ್ರದ ಜತ್ ತಾಲೂಕಿಗೆ ಕರ್ನಾಟಕದಿಂದ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವುದೇ ಕಾರಣದಿಂದ ಹೊಸದುರ್ಗದ ಕುಡಿವ ನೀರು ಯೋಜನೆ ಕಾಮಗಾರಿ ನಿಲ್ಲಿಸುವಂತಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಬೇಗ ತಾವೇ ಬಂದು ಉದ್ಘಾಟನೆ ಮಾಡಲಿ.
ನಾವೂ ಸಹಿತ ಪಾಲ್ಗೊಳ್ಳುತ್ತೇವೆ ಎಂದರು.ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಐಐಎಸ್ಸಿ ಎಂಜಿನಿಯರ್‌ಗಳ ತಂಡ ಭದ್ರಾ ಕಾಲುವೆಯಿಂದ ನೀರು ಪಡೆವ ಯೋಜನೆಗೆ ತಾಂತ್ರಿಕವಾಗಿ ಸಾಧು ಎಂಬ ವರದಿ ನೀಡಿದೆ. ಹೊಸದುರ್ಗ ತಾಲೂಕಿನ 364 ಹಳ್ಳಿಗಳ ಪೈಕಿ 210ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವಿದೆ. ಇವರಿಗೆ ಕುಡಿವ ನೀರು ಪೂರೈಕೆ ವಿರೋಧಿಸಿದರೆ ಪರಿಣಾಮಗಳ ಎದುರಿಸಬೇಕಾಗುತ್ತದೆ. ಸರ್ಕಾರ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ನೀರು ಕೊಡಲಿ ಎಂದು ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಖಂಜಾಚಿ ಮಾಧುರಿ ಗಿರೀಶ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್, ವಕ್ತಾರ ನಾಗರಾಜ್ ಬೇದ್ರೇ, ಹೊಸದುರ್ಗ ಪುರಸಭೆಯ ಉಪಾಧ್ಯಕ್ಷೆ ಗಿರಿಜ, ರಾಜೇಶ್ವರಿ ಆನಂದ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಪಂ ಮಾಜಿ ಸದಸ್ಯ ಗುರುಸ್ವಾಮಿ, ದ್ಯಾಮಣ್ಣ ಇದ್ದರು.