ಸಾರಾಂಶ
ರಾಜ್ಯ ಸರ್ಕಾರ ಒಳ ಮೀಸಲಾತಿಯ ಕುರಿತು ಅ. 28ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದನ್ನು ವಿರೋಧಿಸಿ ಬಂಜಾರ ಸಮುದಾಯದ ರಾಷ್ಟ್ರೀಯ ಗೋರ್ ಸೇನಾ ಸಂಘಟನೆ ರಾಜ್ಯ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ರಾಜ್ಯ ಸರ್ಕಾರ ಒಳ ಮೀಸಲಾತಿಯ ಕುರಿತು ಅ. 28ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದನ್ನು ವಿರೋಧಿಸಿ ಬಂಜಾರ ಸಮುದಾಯದ ರಾಷ್ಟ್ರೀಯ ಗೋರ್ ಸೇನಾ ಸಂಘಟನೆ ರಾಜ್ಯ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.
ಒಳಮೀಸಲಾತಿ ಮತ್ತು ವರ್ಗೀಕರಣವನ್ನು ರಾಷ್ಟ್ರೀಯ ಗೋರ್ ಸೇನಾ ಸಂಘಟನೆ ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ಅ. 28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದನ್ನು ಸಹ ಖಂಡಿಸುತ್ತದೆ. ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಒಂದು ಗುಂಪಿಗೆ ಸೇರಿಸಿ, ಈ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಹೊರಗಿಡಬೇಕೆನ್ನುವ ಯತ್ನ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿ ಅಸಂವಿಧಾನಾತ್ಮಕ ಹಾಗೂ ಅವೈಜ್ಞಾನಿಕವಾಗಿ ವರ್ಗೀಕರಣವನ್ನು ಸರ್ಕಾರ ಮಾಡಕೂಡದು. ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಹಾಗೂ ವೈಜ್ಞಾನಿಕವಾಗಿ ಸರಿಯಾದ ದತ್ತಾಂಶ ಸಂಗ್ರಹಿಸಲಾರದೇ ತರಾತುರಿಯಲ್ಲಿ ಮಾಡಿಕೊಡದು. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗಳು, ರಾಜಕೀಯ ಸ್ಥಾನಮಾನ, ಹಾಗೂ ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ-ಅಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೇ ಒಳಮೀಸಲು ಹಂಚಿಕೆಯ ನಿರ್ಧಾರ ಸಮಂಜಸವಾದ ನಡೆಯಲ್ಲ. ಕರ್ನಾಟಕ ರಾಜ್ಯದ ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳ ಪರವಾಗಿ ಸರಿಯಾದ ಅಧ್ಯಯನ ಇಲ್ಲದೆ ವರ್ಗೀಕರಿಸಬಾರದೆಂದು ಗೋರ್ ಸೇನಾ ಸಂಘಟನೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅ. 2ರಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಒಳ ಮೀಸಲಾತಿಯ ಕುರಿತು ಅ. 28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ವಿರೋಧಿಸಿ ರಾಜ್ಯದ ಎಲ್ಲ ಬಂಜಾರ, ಭೋವಿ , ಕೊರಚ, ಕೊರಮ ಸಮುದಾಯಗಳಿಗೆ ಯಾವುದೇ ಅನ್ಯಾಯ ಅಗಕೂಡದು. ಹಿಂದಿನ ಬಿಜೆಪಿ ಹಠಾವ್ ತಾಂಡಾ ಬಚಾವ್ ಎಂಬ ಘೋಷಣೆಯೂ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಠಾವ್ ತಾಂಡಾ ಬಚಾವ್ ಎಂದು ಬದಲಾಗದಂತೆ ನಿಗಾವಹಿಸಲು ಎಚ್ಚರಿಸುತ್ತಿದ್ದೇವೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ರಾಮಪ್ಪ ನಾಯಕ, ಸೋಮಪ್ಪ ಲಮಾಣಿ, ಬೀರಪ್ಪ ಲಮಾಣಿ, ದಾನಪ್ಪ ಪೂಜಾರ, ಹಾಲೇಶ ಲಮಾಣಿ, ಮಾಲತೇಶ ಲಮಾಣಿ, ಚಂದ್ರು ಲಮಾಣಿ, ಮಾರುತಿ ಲಮಾಣಿ, ಆನಂದ ಲಮಾಣಿ, ದೇವಲಪ್ಪ ಲಮಾಣಿ ಮತ್ತಿತರರಿದ್ದರು.