ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವ್ಶೆಜ್ಞಾನಿಕ, ದುರುದ್ದೇಶದಿಂದ ಕೂಡಿದೆ. ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಸದಸ್ಯರು ಆಗ್ರಹಿಸಿದರು.ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದ ಸದಸ್ಯರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ ದುರುದ್ದೇಶ ಪೂರಿತ ಜೊತೆಗೆ ಸರ್ಕಾರದ ನಿಬಂಧನೆಗಳ ಉಲ್ಲಂಘನೆ ಹಾಗೂ ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಿಂದ ಕೂಡಿದೆ ಎಂದು ದೂರಿದರು.
ಆಯೋಗವು ನಡೆಸಿದ ಜಾತಿಗಳ ಸಮೀಕ್ಷೆಯಲ್ಲಿ ಗಣತಿದಾರರಿಗೆ ನೀಡಲಾಗಿದ್ದ ಟ್ಯಾಬ್‌ಗಳಲ್ಲಿ ಹಾಗೂ ಮೊಬೈಲ್‌ಗಳಲ್ಲಿ ಅಪ್ಲಿಕೇಷನ್ ಡೌನ್‌ಲೋಡ್ ಆಗದೆ ಲಕ್ಷಾಂತರ ಕುಟುಂಬಗಳ ಮಾಹಿತಿ ರದ್ದಾಗಿದೆ. ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಗಣತಿದಾರರ ಬದಲು ತರಬೇತಿ ಇಲ್ಲದವರೂ ಸಹ ಗಣತಿ ನಡೆಸಿರುವುದು ಅವೈಜ್ಞಾನಿಕವಾಗಿ ಕೂಡಿದೆ ಎಂದು ಆರೋಪಿಸಿದರು.ಒಂದು ವೇಳೆ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ರೀತಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ವರದಿ ಅಂಗೀಕರಿಸಿದ್ದಲ್ಲಿ ಅದರ ಪರಿಣಾಮವನ್ನು ಸರ್ಕಾರ, ಸಚಿವರು ಹಾಗೂ ಶಾಸಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೇ, ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಸಚಿವರು, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆವಿಗೂ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ತಹಸೀಲ್ದಾರ್ ಚೇತನಾ ಯಾದವ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ವೆಂಕಟೇಶ್, ಮಹದೇವಸ್ವಾಮಿ, ಸುರೇಶ್, ಚಂದ್ರಶೇಖರ್, ಸುರೇಶ್, ದೇವರಾಜು, ರಾಮಕೃಷ್ಣ ಸೇರಿದಂತೆ 50ಕ್ಕೂ ಹೆಚ್ಚು ಸದಸ್ಯರು ಇದ್ದರು.
ನಾಗಮೋಹನ್‌ದಾಸ್ ವರದಿ ಒಪ್ಪದಂತೆ ಆಗ್ರಹಕನ್ನಡಪ್ರಭ ವಾರ್ತೆ ಮಂಡ್ಯ
ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಶಿಫಾರಸ್ಸುಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು. ರಾಜ್ಯಸರ್ಕಾರ ಶೀಘ್ರವಾಗಿ ಒಳ ಮೀಸಲಾತಿ ನೀತಿ ಜಾರಿಗೊಳಿಸಲು ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.ಒಳ ಮೀಸಲಾತಿ ಮಾಡಲು ವೈಜ್ಞಾನಿಕ ಮತ್ತು ನ್ಯಾಯಸಮ್ಮತ ವರದಿ ಪಡೆಯಲು ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮುಂದಿನ ಚುನಾವಣೆ ಬರುವವರೆಗೂ ಕಾಲದೂಡುವ ಹುನ್ನಾರ ನಡೆಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಸ್.ಎಂ.ಕೃಷ್ಣರಿಂದ ನ್ಯಾ.ಹನುಮಂತಪ್ಪ ಆಯೋಗ, ಧರ್ಮಸಿಂಗ್ ಅವರಿಂದ ಎ.ಜೆ.ಸದಾಶಿವ ಆಯೋಗ ಹೀಗೆ ಸರ್ಕಾರಗಳು ೩೦ ವರ್ಷಗಳಿಂದ ಸಮೀಕ್ಷೆಗೆ ಆಯೋಗ ರಚಿಸಿ ಅವರ ವರದಿಯನ್ನು ತಿರಸ್ಕರಿಸುವುದಕ್ಕೆ ಸೀಮಿತಗೊಂಡಿವೆ. ಅಂತೆಯೇ ಸಿದ್ದರಾಮಯ್ಯ ಸರ್ಕಾರ ಇದೀಗ ಆಯೋಗದ ಹಲವು ನ್ಯೂನ್ಯತೆಗಳಿಂದ ಕೂಡಿದ ವರದಿ ಪಡೆದಿದ್ದು, ಮೀಸಲಾತಿ ಜಾರಿ ಮಾಡಿದರೂ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದರೆ ಮೀಸಲಾತಿ ತಿರಸ್ಕರಿಸುವಂತೆ ವರದಿ ಪಡೆಯಲಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮೀಕ್ಷೆಯ ವರದಿ ಮೂಲಕ ಅಸ್ಪೃಶ್ಯ ಜಾತಿಗಳನ್ನು ಒಟ್ಟುಗೂಡಿಸಿ ಮೀಸಲು ವರ್ಗೀಕರಣ ಮಾಡುವ ಬದಲಿಗೆ ಜಾತಿಗಳ ವಿಭಜನೆಗೊಳಿಸಿ ಅಸ್ಪೃಶ್ಯ ಜಾತಿಗಳನ್ನು ಒಡೆದು ಆಳುವ ಕಿರಾತಕ ಮನಸ್ಥಿತಿಯನ್ನು ತೋರುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತಾ, ಮದ್ದೂರು ತಾಲೂಕು ಅಧ್ಯಕ್ಷ ಮುತ್ತರಾಜು, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವತ್ಥ್, ನಿಂಗಪ್ಪ ಇದ್ದರು.