ಒಳಮೀಸಲಾತಿ: ಸುಪ್ರೀಂ ಆದೇಶ ಮರುಪರಿಶೀಲಿಸಿ

| Published : Aug 22 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಒದಗಿಸಿದೆ. ಆದರೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನೀಡಿದ ೨೦೧೧ರ ಸದಾಶಿವ ಆಯೋಗದ ವರದಿಯ ಆಧಾರ ಇಟ್ಟುಕೊಂಡು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡುವ ಪ್ರಯತ್ನದಲ್ಲಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ನ್ಯಾಯದ ದೃಷ್ಟಿಯಿಂದ ಮೀಸಲಾತಿ ಒದಗಿಸಿದೆ. ಆದರೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ನೀಡಿದ ೨೦೧೧ರ ಸದಾಶಿವ ಆಯೋಗದ ವರದಿಯ ಆಧಾರ ಇಟ್ಟುಕೊಂಡು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡುವ ಪ್ರಯತ್ನದಲ್ಲಿದೆ ಎಂದು ರಾಷ್ಟ್ರೀಯ ಗೊರಮಾಳವ ತಾಲೂಕಾಧ್ಯಕ್ಷ ಶಾಂತು ರಾಠೋಡ, ಭೋವಿ ಸಮಾಜದ ಜಿಲ್ಲಾ ಮುಖಂಡ ಸಿದ್ರಾಮ ಪಾತ್ರೋಟಿ ದೂರಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಈ ನಡೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದಕ್ಕೆ ಬಂಜಾರಾ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳ ವಿರೋಧವಿದೆ ಎಂದರು.

ಚಿರಾಗ್ ಪಾಸ್ವಾನ್, ಮಾಯಾವತಿ, ರಾಮದಾಸ ಅತವಾಲೆ ಅವರು ಆ.೧ರಂದು ಸುಪ್ರಿಂ ಕೋರ್ಟ್ ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ನೀಡಿದ್ದ ತೀರ್ಪು ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದರು. ಈ ಬಂದ್‌ಗೆ ನಮ್ಮದು ಸಂಪೂರ್ಣ ಬೆಂಬಲವಿದೆ. ಒಳಮೀಸಲಾತಿ ಮಾಡುವುದನ್ನು ಕೈಬಿಡಬೇಕು. ಸಂವಿಧಾನದಲ್ಲಿ ಒಳಮೀಸಲಾತಿ ಎಂಬ ಪದವೇ ಇಲ್ಲ. ಆಂಧ್ರಪ್ರದೇಶದಲ್ಲಿ ಹಿಂದೆ ಒಳಮೀಸಲಾತಿ ನೀಡಿತ್ತು. ಆಗ ಕೆಲ ಸಮುದಾಯದವರು ಈ ಬಗ್ಗೆ ಸುಪ್ರಿಂಕೋರ್ಟ್‌ಗೆ ಹೋಗಿ ಪ್ರಶ್ನಿಸಿದಾಗ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರ ಇಲ್ಲ ಎಂದು ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ಒಳಮೀಸಲಾತಿ ಕುರಿತು ಆದೇಶ ಹೊರಡಿಸಿದರ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದರು.

ಸಂವಿಧಾನತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಮಾತ್ರ ಮುಂದುವರಿಸಿಕೊಂಡು ಹೋಗಬೇಕಿದೆ. ಒಳಮೀಸಲಾತಿಯಿಂದ ನಮ್ಮ ಎರಡು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರ್ಕಾರ ತರಾತುರಿಯಾಗಿ ಒಳಮೀಸಲನ್ನು ಜಾರಿಗೆ ತರಬಾರದು. ನಮ್ಮ ಸಮುದಾಯಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಮೀಸಲಾತಿ ಕುರಿತು ಸಂವಿಧಾನದಲ್ಲಿ ತಿದ್ದುಪಡಿಯಾಗಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ. ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮರುಪರಿಶೀಲನೆ ಮಾಡುವುದು ತುಂಬಾ ಅಗತ್ಯವಿದೆ. ಒಳಮೀಸಲಾತಿ ನೀಡುವುದನ್ನು ಕೈಬಿಟ್ಟು ಸಂವಿಧಾನ ಆಶಯದಂತೆ ಮೊದಲಿನ ಮೀಸಲಾತಿ ಮುಂದುವರಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಬಸವರಾಜ ಚವ್ಹಾಣ, ಶಿವಾಜಿ ಲಮಾಣಿ, ಬಾಬು ಚವ್ಹಾಣ, ಬಾಳು ರಾಠೋಡ, ಶಿವಾಜಿ ರಾಠೋಡ ಇದ್ದರು.