ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಂಟರ್‌ವ್ಯೂ ಕ್ಯಾಂಪೇನ್!

| Published : Nov 25 2025, 02:15 AM IST

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಂಟರ್‌ವ್ಯೂ ಕ್ಯಾಂಪೇನ್!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ, ಪ್ರೌಢಶಾಲೆಯ ಕೆಲವು ಮಕ್ಕಳಿಗೆ ಓದಲು ಹಾಗೂ ಬರೆಯಲು ಸಹ ಬರುವುದಿಲ್ಲ ಎಂಬ ಗಂಭೀರ ಆರೋಪಗಳಿವೆ. ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಸರಾಸರಿ ಫಲಿತಾಂಶದ ಬಗ್ಗೆ ಇಲಾಖೆಗೆ ಸಮಾಧಾನ ಇಲ್ಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಬಸವರಾಜ ಹಿರೇಮಠ

ಧಾರವಾಡ:

ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಹೆಚ್ಚಿಸಿ ಈ ಮೂಲಕ ಕಲಿಕೆ ಹಾಗೂ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಇಂಟರ್‌ವ್ಯೂ ಕ್ಯಾಂಪೇನ್’ ಎಂಬ ಹೊಸ ಅಭಿಯಾನವನ್ನು ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಪ್ರಾರಂಭಿಸಿದೆ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ, ಪ್ರೌಢಶಾಲೆಯ ಕೆಲವು ಮಕ್ಕಳಿಗೆ ಓದಲು ಹಾಗೂ ಬರೆಯಲು ಸಹ ಬರುವುದಿಲ್ಲ ಎಂಬ ಗಂಭೀರ ಆರೋಪಗಳಿವೆ. ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಸರಾಸರಿ ಫಲಿತಾಂಶದ ಬಗ್ಗೆ ಇಲಾಖೆಗೆ ಸಮಾಧಾನ ಇಲ್ಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಏನಿದು ಯೋಜನೆ?

ಈ ಅಭಿಯಾನವು ಬೋಧನಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ರೂಪಿಸಿದ ಇಲಾಖೆಯ 29 ಅಂಶಗಳ ಕ್ರಿಯಾಯೋಜನೆಯ ಭಾಗವಾಗಿದೆ. ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN), ಕಲಿಕೆ ಆಧಾರಿತ ಮೌಲ್ಯಮಾಪನ (LBA) ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಂತಹ ಪ್ರಮುಖ ಕಾರ್ಯಕ್ರಮಗಳನ್ನು ಈ ಅಭಿಯಾನದಲ್ಲಿ ಸೇರ್ಪಡೆ ಮಾಡಲಾಗಿದೆ. ಎಫ್‌ಎಲ್‌ಎನ್‌ ಕಾರ್ಯಕ್ರಮವು ಪ್ರತಿ ಮಗುವು 17 ಪ್ರಮುಖ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ತಿಳಿದುಕೊಳ್ಳುತ್ತದೆ. ಇಲ್ಲಿ ಬಂದ ಫಲಿತಾಂಶದ ಆಧಾರದ ಮೇಲೆ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ಜವಾಬ್ದಾರಿ ನೀಡಲಾಗುತ್ತದೆ.

ಹಾಗೆಯೇ, 29 ಅಂಶಗಳ ಎಸ್ಸೆಸ್ಸೆಲ್ಸಿ ಸುಧಾರಣಾ ಯೋಜನೆಯ ಭಾಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಹಲವು ಕ್ರಮಕೈಗೊಳ್ಳಲಾಗಿದೆ. ಇವುಗಳಲ್ಲಿ ಡಿಸೆಂಬರ್ ಒಳಗಾಗಿ ಪಠ್ಯಕ್ರಮ ಪೂರ್ಣಗೊಳಿಸುವುದು, ಪೂರಕ ಬೋಧನೆ ಮತ್ತು ವಿಶೇಷ ತರಗತಿ ನಡೆಸುವುದು, ಎರಡು ತಿಂಗಳಿಗೆ ಒಮ್ಮೆ ಪೋಷಕ-ಶಿಕ್ಷಕ ಸಭೆ ಆಯೋಜಿಸುವುದು ಹಾಗೂ ಗೈರುಹಾಜರಾತಿ ಕಡಿಮೆಗೊಳಿಸಲು ಹಾಜರಾತಿ ಮೇಲ್ವಿಚಾರಣೆ ಯನ್ನು ಸುಧಾರಿಸುವುದು ಈ ಯೋಜನೆಯಲ್ಲಿದೆ.

ವಿವಿಧ ರೀತಿಯ ಪರಿಶೀಲನೆ:

ಇದರೊಂದಿಗೆ ಶಾಲೆಬಿಟ್ಟು ಹೋದ ಮಕ್ಕಳನ್ನು ಪುನಃ ತರಗತಿಗೆ ತರಲು ಪ್ರಯತ್ನಿಸುವುದು, ಸಹಪಾಠಿ ಕಲಿಕೆ ಉತ್ತೇಜಿಸುವುದು, ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮೇಲಾಗುವ ಸಮಸ್ಯೆಗಳಿಗೆ ಪರಿಹಾರ, ಆರೋಗ್ಯ ತಪಾಸಣೆ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರಗಳು ಸಹ ಈ ಅಭಿಯಾನದಲ್ಲಿವೆ. ಕಡಿಮೆ ಸಾಧನೆ ಮಾಡುತ್ತಿರುವ ಶಾಲೆಗಳಿಗೆ ವಿಶೇಷ ಮಾರ್ಗದರ್ಶನ ಮತ್ತು ಹಂತದ ಮೇಲ್ವಿಚಾರಣೆ ನೀಡಲಾಗುವುದು. ಅಧಿಕಾರಿಗಳು ಶಾಲೆಗಳನ್ನು ದತ್ತು ಪಡೆದು ಪ್ರತಿ ಶುಕ್ರವಾರ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ. ಮಧ್ಯಾಹ್ನದ ಊಟ ಯೋಜನೆ, ಪೂರಕ ಪೌಷ್ಟಿಕಾಹಾರ, ಮೂಲಸೌಕರ್ಯ ಸೌಲಭ್ಯ ಮತ್ತು ವಿದ್ಯಾರ್ಥಿ ಸುರಕ್ಷತೆಯ ಅಂಶಗಳನ್ನು ಕೂಡ ಪರಿಶೀಲಿಸಲಾಗುವುದು.

476 ಪರಿಶೀಲನಾ ತಂಡ:

ವಿಭಾಗದ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 476 ಪರಿಶೀಲನಾ ತಂಡ ರಚಿಸಲಾಗಿದೆ. ನವೆಂಬರ್‌ ತಿಂಗಳಿಂದಲೇ ಯೋಜನೆ ಶುರುವಾಗಿದೆ. ಈ ಪೈಕಿ ಬಾಗಲಕೋಟೆಯಲ್ಲಿ 49, ಬೆಳಗಾವಿಯಲ್ಲಿ 56, ಚಿಕ್ಕೋಡಿಯಲ್ಲಿ 63, ಧಾರವಾಡದಲ್ಲಿ 56, ಗದಗದಲ್ಲಿ 49, ಹಾವೇರಿಯಲ್ಲಿ 56, ಉತ್ತರ ಕನ್ನಡದಲ್ಲಿ 42, ಶಿರಸಿಯಲ್ಲಿ 49 ಮತ್ತು ವಿಜಯಪುರದಲ್ಲಿ 56 ತಂಡಗಳಿವೆ. ಪ್ರತಿ ತಂಡದಲ್ಲೂ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ), ಬಿಇಒ, ಡೈಯಟ್ ಉಪನ್ಯಾಸಕರು ಹಾಗೂ ಇತರ ಮೇಲ್ವಿಚಾರಣಾ ಅಧಿಕಾರಿಗಳು ಒಳಗೊಂಡಿದ್ದಾರೆ ಎಂದು ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

2 ಸಾವಿರಕ್ಕೂ ಹೆಚ್ಚು ಶಾಲೆ:

ಈ ಅಭಿಯಾನವು ಒಟ್ಟು 11,711 ಸರ್ಕಾರಿ ಮತ್ತು 1,906 ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಒಳಗೊಂಡಿದ್ದು, ತಂಡಗಳ ಸದಸ್ಯರು ಪ್ರತಿದಿನ ಶಾಲೆಗಳಿಗೆ ಭೇಟಿ ನೀಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಗತಿಯನ್ನು ವೈಯಕ್ತಿಕವಾಗಿ ಮೌಲ್ಯಮಾಪನ ಮಾಡಿ ಗುಣಮಟ್ಟದ ಕಲಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಪರಿಣಾಮಕಾರಿ ತಂತ್ರಗಳನ್ನು ಅಳವಡಿಸಿಕೊಳ್ಳಲು ಈ ಅಭಿಯಾನ ಸಹಾಯ ಮಾಡಲಿದೆ.ಇಂಟರ್‌ವ್ಯೂವ್‌ ಕ್ಯಾಂಪೇನ್‌ ಪರಿಶೀಲನಾ ತಂಡಗಳಿಂದ ಬಂದ ದೈನಂದಿನ ವರದಿಗಳನ್ನು ವಿಭಾಗ ಮಟ್ಟದಲ್ಲಿ ವಿಮರ್ಶಿಸಲಾಗುವುದು. ಜನವರಿಯಲ್ಲಿ ಎರಡನೇ ಹಂತದ ಪರಿಶೀಲನೆ ನಡೆಯಲಿದ್ದು, ಅದು ಯೋಜನೆ ಅನುಷ್ಠಾನದ ಸ್ಥಿತಿ ಹಾಗೂ ನಿರಂತರ ಪ್ರಗತಿಯನ್ನು ಅಳೆಯಲಿದೆ. ಅಂತಿಮ ಗುರಿಯು ಗುಣಮಟ್ಟದ ಶಿಕ್ಷಣ ಒದಗಿಸಿ ಸರ್ಕಾರಿ ಶಾಲೆಗಳನ್ನು ಶ್ರೇಷ್ಠತಾ ಕೇಂದ್ರಗಳಾಗಿ ರೂಪಿಸುವುದಾಗಿದೆ.

ಈಶ್ವರ ಉಳ್ಳಾಗಡ್ಡಿ, ಶಿಕ್ಷಣ ಇಲಾಖೆ ಅಪರ ಆಯುಕ್ತರು