ಸಾರಾಂಶ
ಬಂಜಾರ ಸಮುದಾಯದ ಭಾಷೆಗೆ ಲಿಪಿ ಇಲ್ಲ. ಕನ್ನಡ ರಾಜ್ಯ ಭಾಷೆಯಾದರೆ ಸಮುದಾಯದವರ ಮನೆ ಭಾಷೆ ಲಂಬಾಣಿ. ಪರಿಷತ್ತಿನ ಮೂಲಕ ಸಮಾಜದ ಕಲೆ, ಭಾಷೆ, ಸಂಸ್ಕೃತಿಯ ಸಂಶೋಧನೆಗಳು ನಡೆಯಲಿ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕೌಶಲ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು.
ಹುಬ್ಬಳ್ಳಿ:
ವಿಶಿಷ್ಟ ಕಲೆ, ಸಂಸ್ಕೃತಿ ಹೊಂದಿರುವ ಬಂಜಾರ ಸಮಾಜವು ಮುಂದಿನ ಪೀಳಿಗೆಗೆ ಇದನ್ನು ಉಳಿಸಿ, ಬೆಳೆಸಬೇಕೆಂದು ಸಚಿವ ಸಂತೋಷ ಲಾಡ್ ಹೇಳಿದರು.ಇಲ್ಲಿನ ನವನಗರದ ಬಂಜಾರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಂಜಾರ ಸಮುದಾಯದ ಭಾಷೆಗೆ ಲಿಪಿ ಇಲ್ಲ. ಕನ್ನಡ ರಾಜ್ಯ ಭಾಷೆಯಾದರೆ ಸಮುದಾಯದವರ ಮನೆ ಭಾಷೆ ಲಂಬಾಣಿ. ಪರಿಷತ್ತಿನ ಮೂಲಕ ಸಮಾಜದ ಕಲೆ, ಭಾಷೆ, ಸಂಸ್ಕೃತಿಯ ಸಂಶೋಧನೆಗಳು ನಡೆಯಲಿ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕೌಶಲ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು ಎಂದರು.ಸಂತ ಸೇವಾಲಾಲ್ ಮಹಾರಾಜರು ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದರು. ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಿರಿ. ಐಎಎಸ್, ಐಪಿಎಸ್ ಹುದ್ದೆಗಳ ನೇಮಕಾತಿ ಪರೀಕ್ಷೆ ಎದುರಿಸುವ ಬಂಜಾರ ಸಮಾಜದ ವಿದ್ಯಾರ್ಥಿಗಳಿಗೆ ಸಂತೋಷ್ ಲಾಡ್ ಫೌಂಡೇಷನ್‌ನಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿ, ಬಂಜಾರ ಸಾಹಿತ್ಯ ಪರಿಷತ್ತಿಗೆ ಆರ್ಥಿಕ ನೆರವು ನೀಡುವಂತೆ ಸಮಾಜದ ಮುಖಂಡರನ್ನೊಳಗೊಂಡ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ದು ಮನವಿ ಸಲ್ಲಿಸಲಾಗುವುದು. ಸಚಿವ ಸಂಪುಟದಲ್ಲಿ ಬಂಜಾರ ಸಮಾಜಕ್ಕೆ ಪ್ರಾತಿನಿಧ್ಯ ಇಲ್ಲ. ನಮ್ಮಲ್ಲಿ ಸದೃಢ ನಾಯಕತ್ವ, ಒಗ್ಗಟ್ಟಿನ ಕೊರತೆ ಇರುವುದೇ ಇದಕ್ಕೆ ಕಾರಣ. ಕಾರ್ಯಕರ್ತರು, ಮುಖಂಡರು ಅಸೂಯೆ ಬಿಟ್ಟು ಒಂದಾಗುವಂತೆ ಕರೆ ನೀಡಿದರು.ಲೇಖಕಿ ಬಿ.ಟಿ. ಲಲಿತಾ ನಾಯಕ ಮಾತನಾಡಿ, ಬಂಜಾರ ಯಾವ ಕಾರಣಕ್ಕೆ ರಂಗುರಂಗಿನ ಬಟ್ಟೆ ಧರಿಸುತ್ತಾರೆ, ಯಾವ ಸಂದರ್ಭದಲ್ಲಿ ಇದು ಆರಂಭವಾಯಿತು, ಈಗಲೂ ಅದನ್ನು ಮುಂದುವರಿಸಬೇಕಾ? ಎಂಬ ಬಗ್ಗೆ ಚಿಂತನೆ ನಡೆಯಬೇಕು ಎಂದರು.
ಪರಿಷತ್ತಿನ ಗೌರವಾಧ್ಯಕ್ಷ ಪಿ.ಕೆ. ಖಂಡೋಬಾ ಪ್ರಾಸ್ತಾವಿಕ ಮಾತನಾಡಿದರು. ಉಪಸಭಾಪತಿ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯ್ಕ್, ದೇವಾನಂದ ಚವಾಣ್, ಸಾಹಿತಿ ಶಿರಗಾನಹಳ್ಳಿ ಶಾಂತನಾಯ್ಕ, ಇಂದುಮತಿ ಲಮಾಣಿ, ಬಾಬು ರಾಜೇಂದ್ರ ನಾಯಕ, ಕೃಷ್ಣಾಜ ಚವ್ಹಾಣ, ಸಿ.ಪಿ. ಬಹ್ಮನಪಾಡ, ಎನ್. ಅನಂತನಾಯಕ, ಪಾಂಡುರಂಗ ಪಮ್ಮಾರ, ಆರ್.ಬಿ. ನಾಯಕ ಸೇರಿದಂತೆ ಹಲವರಿದ್ದರು.