ಆವಿಷ್ಕಾರಗಳಿಗೆ ಪ್ರಕೃತಿಯ ಪ್ರಚೋದನೆಯೇ ಕಾರಣ: ನಿರ್ಭಯಾನಂದ ಸ್ವಾಮೀಜಿ

| Published : Jan 21 2024, 01:34 AM IST

ಆವಿಷ್ಕಾರಗಳಿಗೆ ಪ್ರಕೃತಿಯ ಪ್ರಚೋದನೆಯೇ ಕಾರಣ: ನಿರ್ಭಯಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅನಂತವಾದ ಶಕ್ತಿ ಅಡಗಿದೆ. ಚಾರಿತ್ರ್ಯ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣಕಾರಿ ಶಿಕ್ಷಣದಿಂದ ಮಾನವ ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯವಿದೆ. ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವಿಕೆಯಷ್ಟೇ ಅಲ್ಲ, ಮಾನವನನ್ನು ಎಲ್ಲಾ ಇತಿಮಿತಿಗಳಿಂದ ಪಾರುಮಾಡುವುದೇ ಆಗಿದೆ. ಆದ್ದರಿಂದ ಮಾನವ ನಿರ್ಮಾಣವೇ ಶಿಕ್ಷಣದ ಶ್ರೇಷ್ಠ ಗುರಿ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಮಕೃಷ್ಣ-ವಿವೇಕಾನಂದ ಭಾವಪರಿಷತ್, ಕರ್ನಾಟಕ ಮತ್ತು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮ ಇವರ ಸಂಯುಕ್ತಾಶ್ರಯದಲ್ಲಿ ತುಮಕೂರಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಜ್ಯಮಟ್ಟದ ವಿವೇಕ-ವಿದ್ಯಾರ್ಥಿ ವ್ಯಕ್ತಿತ್ವ ನಿರ್ಮಾಣಕಾರಿ ಲಿಖಿತ ಪರೀಕ್ಷೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಪ್ರಕೃತಿಯು ಜ್ಞಾನದ ಮೂಲ. ಜಗತ್ತಿನ ಬಹಿತೇಕ ಆವಿಷ್ಕಾರಗಳಿಗೆ ಪ್ರಕೃತಿಯ ಪ್ರಚೋದನೆಯೇ ಕಾರಣ. ನ್ಯೂಟನ್‌ ನ ಗುರುತ್ವಾರ್ಷಯಣೆಯ ಸಿದ್ಧಾಂತ ಪ್ರತಿಪಾದನೆಗೆ ಪ್ರಕೃತಿ ಕಾರಣವಾಯಿತು. ಪ್ರಕೃತಿ ನಿತ್ಯವೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತದೆ. ನಮ್ಮ ದೃಷ್ಟಿಯಲ್ಲಿ ವಿಶೇಷ ಶಕ್ತಿ ಬೆಳೆಸಿಕೊಂಡಾಗ ಪ್ರಕೃತಿ ವಿಸ್ಮಯಗಳು ಕಾಣಿಸುತ್ತವೆ. ಮಾನವನಲ್ಲಿ ಅಡಗಿರುವ ಇಂತಹ ಅದ್ಭುತಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಹೊರತರುವುದೇ ಇಂದಿನ ಶಿಕ್ಷಣದ ಗುರಿಯಾಗಬೇಕು. ಶಿಕ್ಷಣ ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳನ್ನು ಬೆಳೆಸುವುದರೊಂದಿಗೆ ಛಲ, ಸಹನೆ, ಸಾಮರ್ಥ್ಯ, ಜ್ಞಾನದಾಹ, ತತ್ತ್ವಬದ್ಧತೆ, ಪ್ರಾಮಾಣಿಕತೆ, ದೇಶಪ್ರೇಮ ಬೆಳೆಸಬೇಕು, ಎಂದು ತಿಳಿಸಿದರು.

ಬೆಂಗಳೂರಿನ ವಾಗ್ದೇವಿ ವಿಲಾಸ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ. ಹರೀಶ್ ಮಾತನಾಡಿ, ಆಧ್ಯಾತ್ಮಿಕ ಜ್ಞಾನವೇ ಭಾರತದ ನಿಜವಾದ ಅಸ್ಮಿತೆ. ನಮ್ಮ ಇತಿಹಾಸದಬಗ್ಗೆ ನಮಗೇ ಅರಿವು ಇಲ್ಲದಿದ್ದರೆ ರಾಷ್ಟ್ರಭಕ್ತಿ ಮೂಡುವುದು ದುಸ್ಸಾಧ್ಯ. ಸಮಯವೇ ಜೀವನ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಸೂಕ್ತ ಎಂದರು.

ನೇತೃತ್ವ ವಹಿಸಿ ಮಾತನಾಡಿದ ರಾಮಕೃಷ್ಣ ಮಠ ಮತ್ತು ಮಿಷನ್, ಬೇಲೂರು ಮಠ, ಕೋಲ್ಕತ್ತಾದ ಟ್ರಸ್ಟಿಗಳಾದ ಪೂಜ್ಯಸ್ವಾಮಿ ಮುಕ್ತಿನಂದಜೀ ಸ್ವಾಮೀಜಿ, ಆದಿಮಾನವನಿಂದ ಆಧುನಿಕ ಮಾನವನವರೆಗೆ ಉದ್ಭವವಾದ ಜ್ಞಾನರಾಶಿಯನ್ನು ಚಿಂತಿಸಿ, ಮಥಿಸಿ, ಅದನ್ನು ರ್ತಿಮಾನಕ್ಕೆ ಅನ್ವಯಿಸಿ ಅದರ ಸಾರವನ್ನು ಒಗ್ಗೂಡಿಸಿ ಜಗತ್ತಿಗೆ ತಿಳಿಸಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ನಮ್ಮ ವಿಚಾರಶಕ್ತಿ, ಇಚ್ಛಾಶಕ್ತಿಗಳನ್ನು ಊರ್ಧ್ವಮುಖಗೊಳಿಸಿಕೊಂಡಾಗ ಜೀವನ ಪರಿವರ್ತನೆಗೊಳ್ಳುತ್ತದೆ. ಶ್ರದ್ಧಾಸಕ್ತಿಗಳಿಂದ ವಿಚಾರಗಳ ಚಿಂತಮ ಮಂಥನ ನಡೆಸುವ ಕೆಲಸವನ್ನು ಇಂದಿನ ತರುಣ ಜನಾಂಗ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ರಾಜ್ಯದ ಇಪ್ಪತ್ತನಾಲ್ಕು ಜಿಲ್ಲೆಗಳಿಂದ ಒಂದು ಲಕ್ಷ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನವನ್ನು ಕುರಿತು ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಭಾಗೀರಥಿ ಬಾಯಿ ನಾರಾಯಣರಾವ್ ಮಾನೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ. ನಾರಾಯಣರಾವ್ ಆರ್‌. ಮಾನೆ ಮತ್ತು ಮಾಜಿ ಶಾಸಕ ಡಿ.ಆರ್‌. ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿಯವರು ಹಾಗೂ ಶಾರದಾಶ್ರಮದ ಮಾತಾಜೀಯವರು ಭಾಗವಹಿಸಿದ್ದರು.

ಸಮಾಜ ಸೇವಕ ತುಪ್ಪಣ್ಣ ಮತ್ತು ಪ್ರಗತಿಪರ ರೈತರಾದ ರಾಮಚಂದ್ರ ಹೆಗಡೆಯವರನ್ನು ಸನ್ಮಾನಿಸಲಾಯಿತು.

ರಾಜ್ಯಮಟ್ಟದ ‘ವಿವೇಕ- ವಿದ್ಯರ್ಥಿದ’ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯರ್ಥಿದಗಳಿಗೆ ನಗದು ಬಹುಮಾನ ನೀಡುವುದರ ಮೂಲಕ ಸನ್ಮಾನಿಸಲಾಯಿತು.

ರಾಜ್ಯದ ವಿವಿಧ ಭಾಗಗಳಿಂದ ಸುಮಾರುಎಂಟು ನೂರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀರವರು ಸ್ವಾಗತಿಸಿ ವಂದಿಸಿದರು. ರಮ್ಯಾ ವಿ. ಕಲ್ಲೂರ್ ನಿರೂಪಿಸಿದರು.