ಕನ್ನಡಪ್ರಭ ವಾರ್ತೆ ಆಲಮಟ್ಟಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಭೂಮಿ ಒತ್ತುವರಿ ಹಾಗೂ ನಿಯಮಬಾಹಿರ ಭೂ ಮಂಜೂರಾತಿ ಪ್ರಕರಣಗಳ ತನಿಖೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಭೂಮಿ ಒತ್ತುವರಿ ಹಾಗೂ ನಿಯಮಬಾಹಿರ ಭೂ ಮಂಜೂರಾತಿ ಪ್ರಕರಣಗಳ ತನಿಖೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದರು.ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ತೀರದ ಜಾಕ್ವೆಲ್ಗೆ ಬುಧವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೂ ಮುನ್ನ ಮತ್ತು ನಂತರ ಅರಣ್ಯ ಭೂಮಿಯಲ್ಲಿ ವಿವಿಧ ಉದ್ದೇಶಗಳಿಗೆ ಮಂಜೂರಾದ ಜಮೀನುಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ನಿಯಮಬಾಹಿರ ಮಂಜೂರಾತಿ, ಅಧಿಕಾರ ವ್ಯಾಪ್ತಿ ಮೀರಿ ಭೂಮಿ ನೀಡಿರುವುದು ಸೇರಿದಂತೆ ಎಲ್ಲ ಅಂಶಗಳನ್ನು ಎಸ್ಐಟಿ ಪರಿಶೀಲಿಸಲಿದೆ. ತಮ್ಮ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಂಡದಲ್ಲಿ ಸಿಇಒ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ ಎಂದರು.ಅಗತ್ಯ ಅನುಮತಿ ಪಡೆದಿರುವ ಕುರಿತು ಪರಿಶೀಲಿಸಿ, ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಬಸವನಬಾಗೇವಾಡಿ ನಗರ ಸ್ಥಳೀಯ ಸಂಸ್ಥೆಯ ಅಮೃತ್ 2.0 ಯೋಜನೆಯಡಿ 34 ಕಿ.ಮೀ. ಉದ್ದದ ಪೈಪ್ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುವ 8 ಕಿ.ಮೀ. ಪೈಪ್ಲೈನ್ ಕೇಂದ್ರ ಸರ್ಕಾರದ ಪರಿವೇಶ ಪೋರ್ಟಲ್ ಮೂಲಕ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಲಧಾರೆ ಯೋಜನೆಯ ಅರಣ್ಯ ಅನುಮತಿಯೂ ಪ್ರಗತಿಯಲ್ಲಿದೆ. ಅರಣ್ಯ, ಕೆಬಿಜೆಎನ್ಎಲ್ ಹಾಗೂ ಕಂದಾಯ ಭೂಮಿಗಳ ನಡುವಿನ ಗೊಂದಲ ನಿವಾರಣೆಗೆ ಶೀಘ್ರದಲ್ಲೇ ಮೂರು ಇಲಾಖೆಗಳ ಸಭೆ ಕರೆಯಲಾಗುವುದು ಎಂದು ಹೇಳಿದರು.ವಿಜಯಪುರ ಅಸಿಸ್ಟೆಂಟ್ ಕಮಿಷನರ್ ಜುಪಿಶಾನ್ ಹಕ್, ಆರ್ಡಬ್ಲುಎಸ್ಎಡಬ್ಯ್ಲೂ ವರ್ಧಮಾನ ಗೊಂಗಡಿ . ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲ್ಲಿನಾಥ್ ಕುಸನಾಳ, ಆರ್ಎಫ್ಒ ಬಸನಗೌಡ ಬಿರಾದಾರ, ಕರ್ನಾಟಕ ಜಲ ಮಂಡಳಿ ವಿಜಯಪುರ ಜಿಲ್ಲಾ ಕಾರ್ಯಪಾಲಕ ಅಭಿಯಂತರ ರಾಮರಾವ್ ರಾಠೋಡ್, ಎಡಬ್ಯ್ಲೂಬಸವರಾಜ ಬಾಗಲಕೋಟೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌವದಾಗರ, ಕಾರ್ಯಪಾಲಕ ಅಭಿಯಂತರರು ವಿಠ್ಠಲ್ ಮಾಶ್ಯಾಳ, ಎಡಬ್ಯ್ಲೂವಿಲಾಸ ರಾಠೋಡ್, ಪುರಸಭೆ ಮುಖ್ಯಾಧಿಕಾರಿ ಶಬ್ಬೀರ್ ರೇವರಕರ್, ಕಿರಿಯ ಅಭಿಯಂತರ ಮಾದೇವ ಜಂಬಗಿ ಮುಂತಾದವರು ಇದ್ದರು.