ಇಕ್ಬಾಲ್‌ ಅನ್ಸಾರಿ ಆಡಿಯೋ ಬಾಂಬ್ ಸ್ಫೋಟ

| Published : Oct 07 2025, 01:03 AM IST

ಸಾರಾಂಶ

ನಾನು ಮುಸ್ಲಿಂ ಎನ್ನುವ ಕಾರಣಕ್ಕಾಗಿಯೇ ನನ್ನನ್ನು ಪದೇ ಪದೇ ದೂರ ಇಡಲಾಗುತ್ತಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ವರಿಷ್ಠರಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದರೂ ತಮಗೆ ಮಾಹಿತಿ ಇಲ್ಲ, ತಮ್ಮನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಬಿಡುಗಡೆ ಮಾಡಿರುವ ಆಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಶಾಸಕರು, ಸಚಿವರು ಹಾಗೂ ಸಂಸದರ ಕುರಿತು ಏಕವಚನ ಪ್ರಯೋಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮುಸ್ಲಿಂ ಎನ್ನುವ ಕಾರಣಕ್ಕಾಗಿಯೇ ನನ್ನನ್ನು ಪದೇ ಪದೇ ದೂರ ಇಡಲಾಗುತ್ತಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ವರಿಷ್ಠರಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.

ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಣ್ಣಿಗೆ ನಿದ್ದೆ ಇಲ್ಲದಂತೆ ದುಡಿದಿದ್ದೇನೆ. ಆದರೂ ನನಗೆ ಗೌರವ ನೀಡುತ್ತಿಲ್ಲ. ಚುನಾವಣೆಯಲ್ಲಿ ನನ್ನ ಮನೆಯ ವರೆಗೂ ಬಂದು ಬೆಂಬಲ ಕೇಳಿದವರು ಗೆದ್ದ ಮೇಲೆ ದೂರವಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ನೀಡುತ್ತೇನೆ ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ.ಮಾಜಿ ಸಚಿವರು, ಹಿರಿಯರು ಅವರು, ನನಗೆ ಎಷ್ಟೇ ಬೈಯ್ದರೂ ನಾನು ಸಿಟ್ಟಾಗುವುದಿಲ್ಲ. ಅವರು ಬೈಯ್ದರೆ ಬೈಸಿಕೊಳ್ಳುತ್ತೇನೆ. ಸಹೋದರನಂತೆ ಇರುವುದರಿಂದ ಬೈಯುತ್ತಾರೆ. ಬೈಯುವ ಹಕ್ಕಿದೆ. ನನಗೆ ಕರೆ ಮಾಡಿ ನೇರವಾಗಿ ಬೈಯುವಂತೆ ಹೇಳುತ್ತೇನೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಏನು ಮಾತನಾಡಿದ್ದಾರೆ ಮತ್ತು ಯಾಕೆ ಮಾತನಾಡಿದ್ದಾರೆ ಎಂದು ಗೊತ್ತಿಲ್ಲದೇ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.